ಭಾರತ ಅಥವಾ ಪಾಕ್ ತಂಡದ ನಾಯಕ ಹೀಗೆ ಮಾಡಿದರೆ ಮನೆಗೆ ಕಳಿಸ್ತಾರೆ!: ಡ್ಯಾನಿಶ್ ಕನೇರಿಯಾ

ಭಾರತದ ವಿರುದ್ಧದ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ 61 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿದ್ದ ಆಸ್ಟ್ರೇಲಿಯಾ ಮೂರನೇ ದಿನ 113 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಗಿತ್ತು. ಪರಿಣಾಮ ಮೂರನೇ ದಿನದಲ್ಲೇ ಆಸ್ಟ್ರೇಲಿಯಾ ಪಂದ್ಯವನ್ನು ಸೋತಿತ್ತು.
ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 7 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡಕ್ಕೆ ಮಾರಕವಾಗಿದ್ದರು. ಅದರಲ್ಲೂ ಆಸ್ಟ್ರೇಲಿಯಾದ 6 ಆಟಗಾರರು ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದ್ದರು. ಸ್ಪಿನ್‌ಗೆ ನೆರವಾಗುವ ಪಿಚ್‌ನಲ್ಲಿ ಸ್ವೀಪ್ ಶಾಟ್ ಹೊಡೆಯುವುದು ಸುಲಭವಲ್ಲ. ಈ ಪಿಚ್‌ನಲ್ಲಿ ಸ್ವೀಪ್ ಶಾಟ್ ಹೊಡೆಯಲೇಬಾರದು ಎಂದು ಪಂದ್ಯದ ನಂತರ ರವೀಂದ್ರ ಜಡೇಜಾ ಕೂಡ ಹೇಳಿಕೆ ನೀಡಿದ್ದರು.
ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಮೊದಲ ಎಸೆತದಲ್ಲೇ ಸ್ವೀಪ್ ಮಾಡಲು ಹೋಗಿ ವಿಕೆಟ್ ಒಪ್ಪಿಸಿದರು. ಪ್ಯಾಟ್ ಕಮಿನ್ಸ್ ಕಳಪೆ ಆಟದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಟೀಕಿಸಿದ್ದಾರೆ.

ಸೀದಾ ಮನೆಗೆ ಕಳುಹಿಸುತ್ತಾರೆ!
ಒಂದು ಕಡೆ ವಿಕೆಟ್ ಬೀಳುತ್ತಿದ್ದಾಗ ನಾಯಕನಾದವನು ಜವಾಬ್ದಾರಿ ತೆಗೆದುಕೊಂಡು, ತಾಳ್ಮೆಯಿಂದ ವಿಕೆಟ್ ಉಳಿಸಿಕೊಂಡು ಆಡಬೇಕು ಎಂದು ಕನೇರಿಯಾ ಹೇಳಿದ್ದಾರೆ. ಭಾರತ ಅಥವಾ ಪಾಕಿಸ್ತಾನ ತಂಡ ನಾಯಕ ಏನಾದರೂ ಈ ರೀತಿ ಬೇಜವಾಬ್ದಾರಿ ಆಟವಾಡಿ ಔಟಾಗಿದ್ದರೆ, ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಸೀದಾ ಮನೆಗೆ ಕಳುಹಿಸುತ್ತದೆ ಎಂದು ಕನೇರಿಯಾ ಅಭಿಪ್ರಾಯಪಟ್ಟಿದ್ದಾರೆ.
ಆಸ್ಟ್ರೇಲಿಯಾ ಭಾರತ ವಿರುದ್ಧ ಸೋಲನುಭವಿಸಿದ ನಂತರ ತಮ್ಮ ಯೂಟ್ಯೂಟ್ ಚಾನೆಲ್‌ನಲ್ಲಿ ಮಾತನಾಡಿದ ಕನೇರಿಯಾ, "ಆಸ್ಟ್ರೇಲಿಯಾದ ಬ್ಯಾಟರ್‌ಗಳಿಗೆ ಸ್ಟಂಪ್‌ಗಳ ಮುಂದೆ ಹೇಗೆ ಆಡಬೇಕೆಂದು ತಿಳಿದಿಲ್ಲ. ಅವರೆಲ್ಲಾ ಸ್ವೀಪ್ ಶಾಟ್ ಆಡಲು ಪ್ರಯತ್ನಿಸಿ ಔಟಾದರು. ನಾಯಕರಾಗಿದ್ದ ಪ್ಯಾಟ್ ಕಮಿನ್ಸ್ ಹೇಗೆ ಬ್ಯಾಟಿಂಗ್ ಮಾಡಬೇಕಿತ್ತು? ಪೀಟರ್ ಹ್ಯಾಂಡ್ಸ್‌ಕಾಂಬ್ ಅವರೊಂದಿಗೆ ಮಾತುಕತೆ ನಡೆಸಿದರು. ಬ್ಯಾಟಿಂಗ್ ಮಾಡಲು ಬಂದರು, ಪಿಚ್‌ನಲ್ಲಿ ಸಾಕಷ್ಟು ತಿರುವು ಇದೆ ಎಂದು ಅವರು ಭಯಪಟ್ಟಿದ್ದರು ಎಂದು ಭಾವಿಸುತ್ತೇನೆ. ಒಬ್ಬ ಭಾರತೀಯ ಅಥವಾ ಪಾಕಿಸ್ತಾನದ ನಾಯಕ ಹೀಗೆ ಮಾಡಿದರೆ, ಮರುದಿನ ಅವರನ್ನು ಮನೆಗೆ ಕಳುಹಿಸಲಾಗುತ್ತದೆ" ಎಂದು ಹೇಳಿದರು.

ಈ ಸೋಲು ಆಸ್ಟ್ರೇಲಿಯಾಗೆ ದೊಡ್ಡ ಆಘಾತ
ದೆಹಲಿ ಟೆಸ್ಟ್ ಸೋಲಿನಿಂದ ಆಸ್ಟ್ರೇಲಿಯಾ ದೊಡ್ಡ ಆಘಾತಕ್ಕೆ ಒಳಗಾಗಿದೆ, ಅವರು ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನೇರಿಯಾ ಹೇಳಿದ್ದಾರೆ. ಒಂದು ಹಂತದಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿತ್ತು, ಆದರೆ ಭಾರತ ತಂಡ ಹೋರಾಡಿದ ರೀತಿಗೆ ಆಸ್ಟ್ರೇಲಿಯಾ ಶರಣಾಗಬೇಕಾಯಿತು ಎಂದು ಹೇಳಿದರು.
ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರನ್ನು ಸತತವಾಗಿ ಬೌಲಿಂಗ್ ಮಾಡಲು ಪ್ರೇರೇಪಿಸಿದ ರೋಹಿತ್ ಶರ್ಮಾ ನಿರ್ಧಾರವನ್ನು ಶ್ಲಾಘಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications