
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಅಮೋಘ ಗೆಲುವು ಸಾಧಿಸಿ ಅಬ್ಬರಿಸಿದೆ. ದೆಹಲಿಯಲ್ಲಿ ನಡೆದ ಎರಡನೇ ಪಂದ್ಯದ ಎರಡನೇ ದಿನದಾಟದಲ್ಲಿ ಆಸ್ಟ್ರೇಲಿಯಾ ಪೈಪೋಟಿ ನೀಡುವ ಸೂಚನೆ ನೀಡಿತಾದರೂ ಮೂರನೇ ದಿನದಾಟದಲ್ಲಿ ಭಾರತದ ಬೌಲಿಂಗ್ ದಾಳಿಯ ಮುಂದೆ ಆಸಿಸ್ ಪಡೆ ಮಂಡಿಯೂರಿತು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಸುಲಭ ಗುರಿ ನೀಡಿದ್ದು ಟೀಮ್ ಇಂಡಿಯಾ 6 ವಿಕೆಟ್‌ಗಳ ಅಂತರದಿಂದ ಭರ್ಜರಿ ಸಾಧಿಸಿದೆ.
ಇನ್ನು ಈ ಪಂದ್ಯದಲ್ಲಿಯೂ ಟೀಮ್ ಇಂಡಿಯಾ ಪರವಾಗಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಪಡೆದುಕೊಂಡಿದ್ದ ರವೀಂದ್ರ ಜಡೇಜಾ ಎರಡನೇ ಇನ್ನಿಂಗ್ಸ್‌ನಲ್ಲಿ ಆಸಿಸ್ ಪಡೆಯ ಮೇಲೆರಗಿದ್ದು 7 ವಿಕೆಟ್ ಕಬಳಿಸಿ ಅಸ್ಟ್ರೇಲಿಯಾಗೆ ಆಘಾತ ನೀಡಿದ್ದಾರೆ. ಈ ಮೂಲಕ ಈ ಪಂದ್ಯದಲ್ಲಿ ರವೀಂದ್ರ ಜಡೇಜಾ 10 ವಿಕೆಟ್‌ಗಳ ಗೊಂಚಲು ತಮ್ಮದಾಗಿಸಿಕೊಂಡಿದ್ದಾರೆ.
ಈ ಭರ್ಜರಿ ಪ್ರದರ್ಶನಕ್ಕೆ ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮುಕ್ತಕಂಠದಿಂದ ಹೊಗಳಿಕೆಯ ಸುರಿಮಳೆಗೈದಿದ್ದಾರೆ. ಬ್ಯಾಟಿಂಗ್ ಹಾಘೂ ಬೌಲಿಂಗ್ ಎರಡರಲ್ಲಿಯೂ ಜಡೇಜಾ ಪ್ರದರ್ಶನ ಊಹೆಗೆ ಮೀರಿದ್ದು ಎಂದು ಹೊಗಳಿದ್ದಾರೆ ಹರ್ಭಜನ್ ಸಿಂಗ್.
ಇಂಡಿಯಾ ಟುಡೇ ಜೊತೆಗೆ ವಿಶೇಷ ಸಂವಾಸದಲ್ಲಿ ಭಾಗಿಯಾಗಿದ್ದ ಹರ್ಭಜನ್ ಸಿಂಗ್ ಭಾರತದ ಆಲ್‌ರೌಂಡರ್‌ಗಳ ಸಾಮರ್ಥ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಆಟಗಾರರಿಗಿಂತ ಭಾರತದ ಆಲ್‌ರೌಂಡರ್‌ಗಳು ಚಾಣಾಕ್ಷರು ಎಂದಿದ್ದು ಪ್ರತಿಭೆಯ ವಿಚಾರದಲ್ಲಿ ಆಸಿಸ್ ಆಟಗಾರರಿಗಿಂತ ಬಹಳ ಮುಂದಿದ್ದಾರೆ ಎಂದಿದ್ದಾರೆ.
ಮುಂದುವರಿದು ಮಾತನಾಡಿದ ಅವರು "ರವೀಂದ್ರ ಜಡೇಜಾ ಅವರಂತಾ ಆಟಗಾರರ ಯಾವುದೇ ಆಡುವ ಬಳಗದಲ್ಲಿಯೂ ಸ್ಥಾನವನ್ನು ಪಡೆದುಕೊಳ್ಳುವ ಸಾಮರ್ಥ್ಯಹೊಂದಿರುವ ಕ್ರಿಕೆಟಿಗ. ನೀವು ವಿಶ್ವ XI ಸಿದ್ಧಪಡಿಸಿದರೂ ಅವರು ಇರುವ ಫಾರ್ಮ್‌ಗೆ ಅಲ್ಲಿಯೂ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಭಾರತಕ್ಕೆ ಆತನೋರ್ವ ಅತ್ಯಂತ ವಿಶೇಷ ಆಟಗಾರ" ಎಂದು ಬಣ್ಣಿಸಿದ್ದಾರೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್.
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಅನುಭವಿ ಆಲ್‌ರೌಂಡರ್ ಆರ್ ಅಶ್ವಿನ್ ಬಗ್ಗೆ ಮಾತನಾಡಿದ ಭಜ್ಜಿ, ಆತ ತಾನೋರ್ವ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಿದ್ದಾರೆ ಎಂದಿದ್ದಾರೆ. ಇನ್ನು ಅಲ್ಷರ್ ಪಟೇಲ್ ಬ್ಯಾಟಿಂಗ್‌ನಲ್ಲಿ ನೀಡಿರುವ ಕೊಡುಗವೆ ಅತ್ಯಂತ ವಿಶೇಷವಾಗಿದೆ ಎಂದಿದ್ದಾರೆ.