
ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತದಲ್ಲಿ ಟೆಸ್ಟ್ ಸರಣಿ ಸುದೀರ್ಘ ಕಾಲದಿಂದ ಗೆಲ್ಲಲು ವಿಫಲವಾಗಿರುವ ಆಸಿಸ್ ಪಡೆ ಈ ಬಾರಿ ಗೆಲ್ಲಲೇಬೇಕೆಂದು ಪಣತೊಟ್ಟಿದೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ಈ ಬಾರಿಯೂ ಓರ್ವ ಭಾರತದ ಆಟಗಾರ ಬಹುವಾಗಿ ಕಾಡುವ ಸಾಧ್ಯತೆಯಿದೆ. ಈ ವಿಚಾರವನ್ನು ಸ್ವತಃ ಆಸ್ಟ್ರೇಲಿಯಾದ ಆಟಗಾರ ಕೂಡ ಒಪ್ಪಿಕೊಂಡಿದ್ದಾರೆ.
ನಾಗ್ಪುರದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಭಾರತದ ಸ್ಪಿನ್ನರ್ ಆರ್ ಅಶ್ವಿನ್ ಆಸ್ಟ್ರೇಲಿಯಾ ತಂಡಕ್ಕೆ ಕಂಠಕವಾಗಲಿದ್ದಾರೆ ಎಂದು ಆಸ್ಟ್ರೇಲಿಯಾದ ಸ್ಟಾರ್ ಆಟಗಾರ ಮಾರ್ನಸ್ ಲ್ಯಾಬುಶೈನ್ ಹೇಳಿದ್ದಾರೆ. ಭಾರತದ ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ತನ್ನ ಬ್ಯಾಟಿಂಗ್ ಕೌಶಲ್ಯವನ್ನು ಪರೀಕ್ಷಿಸಲು ಉತ್ಸುಕರಾಗಿರುವುದಾಗಿ ಹೇಳಿದ್ದಾರೆ ಆಸಿಸ್ ಆಟಗಾರ ಲ್ಯಾಬುಶೈನ್.
"ತಲೆಮಾರುಗಳಿಂದಲೂ ಉತ್ತಮ ದಾಂಡಿಗರು ತವರಿನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಾರೆ. ಆದರೆ ಶ್ರೇಷ್ಠ ದಾಂಡಿಗರು ತವರಿನ ಆಚೆಯೂ ಅದ್ಭುತ ದಾಖಲೆಯನ್ನು ಹೊಂದಿರುತ್ತಾರೆ. ಆಸ್ಟ್ರೇಲಿಯಾದ ದಾಮಡಿಗರು ತವರಿನ ಆಚೆ ಎದುರಿಸುವ ಎರಡು ದೊಡ್ಡ ಸವಾಲುಗಳೆಂದರೆ ಅದು ಭಾರತ ಹಾಗೂ ಇಂಗ್ಲೆಂಡ್‌ನಲ್ಲಿ" ಎಂದು ಕ್ರಿಕ್‌ಬಜ್‌ಗೆ ನೀಡಿರುವ ಸಂದರ್ಶನದಲ್ಲಿ ಲ್ಯಾಬುಶೈನ್ ಪ್ರತಿಕ್ರಿಯಿಸಿದ್ದಾರೆ.
ತವರಿಗಿಂತ ಹೊರಗಡೆ ರನ್ ಗಳಿಸುವ ಪರೀಕ್ಷೆಯಲ್ಲಿ ಲ್ಯಾಬುಶೈನ್ ತಮ್ಮ ಸಾಮರ್ಥ್ಯವನ್ಉ ಈಗಾಗಲೇ ಸಾಬೀತುಪಡಿಸಿದ್ದಾರೆ. ಆದರೆ ಈಗ ಭಾರತದ ಪಿಚ್‌ನಲ್ಲಿಯೂ ತನ್ನ ಅದ್ಭುತ ಪ್ರದರ್ಶನವನ್ನು ಮುಂದುವರಿಸುವ ವಿಶ್ವಾಸವನ್ನು ಹೊಂದಿದ್ದು ಅದರಲ್ಲಿ ಎಷ್ಟರಮಟ್ಇಗೆ ಯಶಸ್ಸು ಕಾಣಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ಲ್ಯಾಬುಶೈನ್ ಉಪಖಂಡದ ಪಿಚ್‌ನಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಐದು ಪಂದ್ಯಗಳಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಇದರಲ್ಲಿ ಅವರು ಮಿಶ್ರ ಫಲಿತಾಂಶ ಪಡೆದುಕೊಂಡಿದ್ದು ಭಾರತದಲ್ಲಿ ಈ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಆರ್ ಅಶ್ವಿನ್ ಆರು ಇನ್ನಿಂಗ್ಸ್‌ಗಳಲ್ಲಿ ಎರಡು ಬಾರಿ ಲ್ಯಾಬುಶೈನ್ ವಿಕೆಟ್ ಪಡೆದುಕೊಂಡಿದ್ದಾರೆ. ಇನ್ನು ಲ್ಯಾಬುಶೈನ್‌ಗೆ ಇದು ಟೆಸ್ಟ್ ಮಾದರಿಯಲ್ಲಿ ಮೊದಲ ಭಾರತ ಪ್ರವಾಸವಾಗಿದೆ. ಹೀಗಾಗಿ ಆರ್ ಅಶ್ವಿನ್ ವಿರುದ್ಧ ಯಾವ ರೀತಿಯಾಗಿ ಆಡಬೇಕು ಎಂಬ ಬಗ್ಗೆ ಈಗಾಗಲೇ ಸುದೀರ್ಘ ಯೋಜನೆ ಹಾಕಿಕೊಂಡಿದ್ದಾರೆ ಆಸಿಸ್ ಆಟಗಾರ.
"ಶ್ರೀಲಂಕಾ ಸರಣಿಯಲ್ಲಿ ರಮೇಶ್ ಮೆಂಡಿಸ್ ಆಫ್‌ಸ್ಪಿನ್ನರ್ ಆಗಿದ್ದರು. ಆದರೆ ಇಲ್ಲಿ ಭೀತಿಯಿರುವುದು ಆರ್ ಅಶ್ವಿನ್ ಅವರಿಂದ. ಆತ ಅದ್ಭುತವಾಗಿ ಬೌಲಿಂಗ್ ಮಾಡುತ್ತಾರೆ ಎಂಬುದು ಮಾತ್ರವಲ್ಲ, ಅವರ ಬೌಲಿಂಗ್‌ನಲ್ಲಿ ಸಾಕಷ್ಟು ಏರಿಳಿತಗಳಿವೆ. ಮೆಂಡಿಸ್ ಅವರಲ್ಲಿಯೂ ಸ್ಟಾಕ್ ಎಸೆತಗಳು ಇದ್ದರು ಕೂಡ ಅಶ್ವಿನ್ ಅವರಷ್ಟು ಬದಲಾವಣೆಗಳು ಅವರಲ್ಲಿಲ್ಲ. ಬೌಲರ್‌ನ ಬಗ್ಗೆ ನಿಮಗೆ ಹೆಚ್ಚಾಗಿ ತಿಳಿದಿರುವ ಕಾರಣ ಅದೆಲ್ಲವೂ ನಿಮ್ಮ ತಲೆಗೆ ಬರುತ್ತದೆ" ಎಂದಿದ್ದಾರೆ ಮಾರ್ನಸ್ ಲ್ಯಾಬುಶೈನ್.