
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿಯೂ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ ಹೀನಾಯವಾಗಿ ಸೋಲು ಅನುಭವಿಸಿದೆ. ಎರಡನೇ ದಿನದಾಟದ ಅಂತ್ಯದಲ್ಲಿ ಭಾರತಕ್ಕೆ ಪೈಪೋಟಿ ನೀಡುವ ಸೂಚನೆ ನೀಡಿದರೂ ಮೂರನೇ ದಿನ ಭಾರತದ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾ ಸಂಪೂರ್ಣ ನಲುಗಿ ಹೋಗಿತ್ತು. ಅದರಲ್ಲೂ ರವೀಂದ್ರ ಜಡೇಜಾ ಎರನೇ ಇನ್ನಿಂಗ್ಸ್‌ಲ್ಲಿ ಆಸ್ಟ್ರೇಲಿಯಾ ವಿರುದ್ಧ ಬರೊಬ್ಬರಿ 7 ವಿಕೆಟ್ ಕಿತ್ತು ದೊಡ್ಡ ಆಘಾತ ನೀಡಿದರು. ಹೀಗಾಗಿ ಭಾರತ ತಂಡ ಗೆಲ್ಲಲು ಸುಲಭ ಸವಾಲು ಪಡೆದುಕೊಂಡಿತ್ತು.
ಸೋಲಿನ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಹಾಗೂ ಕಾಮೆಂಟೇಟರ್ ಮೈಕಲ್ ಕ್ಲಾರ್ಕ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರರು ಎಡವಿದ್ದು ಎಂಬುದನ್ನು ಉಲ್ಲೇಖಿಸಿದ್ದು ಆಟದ ಮೂಲ ಸಂಗತಿಗಳಲ್ಲಿಯೇ ಆಸ್ಟ್ರೇಲಿಯಾ ತಂಡ ಎಡವಿತು ಎಂದು ನೇರವಾಗಿಯೇ ಹೇಳಿದ್ದಾರೆ.
ಖಾಸಗೀ ವಾಹಿನಿಯಲ್ಲಿ ಭಾಗವಹಿಸಿ ಮಾತನಾಡಿದ ಮೈಕಲ್ ಕ್ಲಾರ್ಕ್, ಆಸ್ಟ್ರೇಲಿಯಾ ತಂಡ ವಾತಾವರಣಕ್ಕೆ ಒಗ್ಗಿಕೊಳ್ಳಲಿಲ್ಲ ಎಂದು ದೂರಿದ್ದಾರೆ. "ಭಾರತದಲ್ಲಿ ಸ್ವೀಪ್ ಮಾಡಬಾರದು ಎಂದು ನಾನು ಹೇಳುತ್ತಿಲ್ಲ, ನಾನು ಭಿನ್ನವಾಗಿಉ ಹೇಳುತ್ತಿದ್ದೇನೆ. ಸರಿಯಾದ ಸಮಯದಲ್ಲಿ ನೀವು ಸ್ವೀಪ್ ಮಾಡಬೇಕು, ನಿಮ್ಮ ಇನ್ನಿಂಗ್ಸ್‌ನ ಸೂಕ್ತ ಸಮಯದಲ್ಲಿ ಸೂಕ್ತ ಪಿಚ್‌ನಲ್ಲಿ ಸ್ವೀಪ್ ಮಾಡಬೇಕು. ಅದು ಕೂಡ ಸ್ಪಿನ್ ಜೊತೆಗೆ" ಎಂದಿದ್ದಾರೆ ಮೈಕಲ್ ಕ್ಲಾರ್ಕ್.
"ಚೆಂಡು ಹೆಚ್ಚು ಬೌನ್ಸ್ ಆಗದೇ ಇದ್ದಾಗ ಸ್ಪಿನ್ ವಿರುದ್ಧ ಸ್ವೀಪ್ ಮಾಡುವುದು ಬಹಳ ಕಠಿಣ. ಹಾಗಾಗಿ ಬ್ಯಾಟಿಂಗ್‌ನ ಮೂಲಭೂತ ವಿಚಾರದಲ್ಲಿ ಹಾಗೂ ಇಂತಾ ವಾತಾವರಣದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವ ಬಗೆಯಲ್ಲಿ ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ" ಎಂದಿದ್ದಾರೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್. ಬಳಿಕ ಮೈಕಲ್ ಕ್ಲಾರ್ಕ್ ಭಾರತದ ವಿರುದ್ಧ ಆಸ್ಟ್ರೇಲಿಯಾ ತಂಡದ ರಣತಂತ್ರದ ಬಗ್ಗೆಯೂ ಕಟುವಾಗಿ ಟೀಕಿಸಿದ್ದಾರೆ. ನಮ್ಮ ತಂಡದ ರಣತಂತ್ರ ಏನಾಯಿತು ಎಂಬುದರ ಬಗ್ಗೆಯೂ ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ ಮೈಕಲ್ ಕ್ಲಾರ್ಕ್.
ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮೊದಲ ಎರಡು ಪಂದ್ಯಗಳಲ್ಲಿಯೂ ಈಗ ಸೋಲು ಕಂಡಂತಾಗಿದೆ. ಹೀಗಾಗಿ ಆಸ್ಟ್ರೇಲಿಯಾ ತಂಡ ಸುದೀರ್ಘ ಕಾಲದ ಬಳಿಕ ಭಾರತದ ನೆಲದಲ್ಲಿ ಸರಣಿ ಗೆಲ್ಲುವ ಕನಸು ಮತ್ತೊಮ್ಮೆ ಭಗ್ನವಾಗಿದೆ. ಸದ್ಯ ಭಾರತದ ವಿರುದ್ಧದ ಟೆಸ್ಟ್ ಸರಣಿಯನ್ನು ಸಮಬಲಗೊಳಿಸುವ ಅವಕಾಶ ಮಾತ್ರವೇ ಇದೆ.
ಇತ್ತ ಭಾರತ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ವೈಟ್‌ವಾಶ್ ಮೂಲಕ ವಶಕ್ಕೆ ಪಡೆಯಲು ಎದುರು ನೋಡುತ್ತಿದೆ. ಸರಣಿಯಲ್ಲಿ ಎರಡು ಪಂದ್ಯಗಳು ಮಾತ್ರವೇ ಬಾಕಿಯಿದ್ದು ವೈಟ್‌ವಾಶ್ ಅವಕಾಶ ಭಾರತಕ್ಕೆ ಹೆಚ್ಚಾಗಿದೆ. ಮತ್ತೊಂದೆಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಥಾನ ಖಚಿತಗೊಳ್ಳಲು ಈ ಸರಣಿಯಲ್ಲಿ ಇನ್ನು ಒಂದು ಗೆಲುವಿನ ಅಗತ್ಯ ಮಾತ್ರವೇ ಇದೆ. ಆದರೆ ಆಸ್ಟ್ರೇಲಿಯಾ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯುವ ಅವಕಾಶ ಕೈತಪ್ಪುವ ಭೀತಿಯೂ ಉಂಟಾಗಿದೆ.