ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನ ಭಾರತದ ನಿದ್ದೆ ಕೆಡಿಸಿದೆ ಈ ಮೂರು ಸಂಗತಿಗಳು!

ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾರತ ಹಾಗೂ ಆಸ್ಟ್ರೇಲಿಯಾ ಎರಡು ತಂಡಗಳು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ಮೊದಲ ಟೆಸ್ಟ್ ಪಂದ್ಯ ನಾಗ್ಪುರದಲ್ಲಿ ನಡೆಯಲಿದ್ದು ಫೆಬ್ರವರಿ 9 ಗುರುವಾರದಿಂದ ಈ ಟೆಸ್ಟ್ ಸರಣಿಗೆ ಚಾಲನೆ ದೊರೆಯಲಿದೆ. ಈ ಸರಣಿಯಲ್ಲಿ ಭಾರತದ ವಿರುದ್ಧ ಮೇಲುಗೈ ಸಾಧಿಸಲು ಅಗತ್ಯವಿರುವ ಅಂಶಗಳತ್ತ ಚಿತ್ತ ನೆಟ್ಟು ಕಠಿಣ ಸಿದ್ಧತೆ ನಡೆಸುತ್ತಿದೆ.
ಆಸ್ಟ್ರೇಲಿಯಾ ಭಾರತದಲ್ಲಿ ಕಳೆದ 19 ವರ್ಷಗಳಿಂದ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಭಾರತವನ್ನು ತವರಿನಲ್ಲಿಯೇ ಮಣಿಸುವ ಆತ್ಮವಿಶ್ವಾಸದಲ್ಲಿದೆ ಆಸಿಸ್ ಪಡೆ. ಟೀಮ್ ಇಂಡಿಯಾ ಕೂಡ ಆಸ್ಟ್ರೇಲಿಯಾ ಸವಾಲನ್ನು ಎದುರಿಸಲು ಸನ್ನಧವಾಗಿದ್ದರೂ ಭಾರತ ತಂಡಕ್ಕೆ ಕೆಲ ಅಂಶಗಳು ಸವಾಲಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಮೂರು ವಿಚಾರಗಳು ದೊಡ್ಡ ಮಟ್ಟದಲ್ಲಿ ಕಾಡಲು ಆರಂಭಿಸಿದ್ದು ತಂಡದ ನಿದ್ದೆಗೆಡಿಸಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಪ್ರಮುಖ ಆಟಗಾರರ ಫಾರ್ಮ್
ಮೊಣಕಾಲಿನ ಗಾಯದಿಂದ ಸುದೀರ್ಘ ಕಾಲ ಭಾರತ ತಂಡದಿಂದ ಹೊರಗುಳಿದಿದ್ದ ರವೀಂದ್ರ ಜಡೇಜಾ ಈ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ರಣಜಿಯಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರೂ ಆಸಿಸ್ ವಿರುದ್ಧದ ಸರಣಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬುದು ಇನ್ನಷ್ಟೇ ಕಾದು ನೋಡಬೇಕಿದೆ. ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಭಾರತಕ್ಕೆ ಮಹತ್ವದ ಆಟಗಾರನಾಗಿದ್ದಾರೆ. ಇನ್ನು ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಪಾಲಿಗೆ ಕಳೆದ ವರ್ಷ ಅಷ್ಟೇನೈ ಉತ್ತಮವಾಗಿರಲಿಲ್ಲ. ಫಾರ್ಮ್ ಕಳೆದುಕೊಂಡಿದ್ದ ರಾಹುಲ್ ಆತ್ಮವಿಶ್ವಾಸ ಕೂಡ ಕಳೆದುಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ರಾಹುಲ್ ಫಾರ್ಮ್ ಪ್ರದರ್ಶಿಸಿ ಮತ್ತೆ ಮಿಂಚಬೇಕಿದೆ.

ಐಯ್ಯರ್ ಅಲಭ್ಯ, ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ
ಇನ್ನು ಟೀಮ್ ಇಂಡಿಯಾದ ಆಟಗಾರ ಶ್ರೇಯಸ್ ಐಯ್ಯರ್ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತ. ಗಾಯದ ಕಾರಣದಿಂದಾಗಿ ಐಯ್ಯರ್ ಬೆಂಗಳೂರಿನ ಎನ್‌ಸಿಎನಲ್ಲಿ ಉಳಿದುಕೊಂಡಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಐಯ್ಯರ್ ಭಾಗಿಯಾಗುವ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿಯನ್ನು ಈವರೆಗೆ ನೀಡಿಲ್ಲ. ಆದರೆ ವರದಿಗಳ ಪ್ರಕಾರ ಐಯ್ಯರ್ ಮೊದಲ ಪಂದ್ಯಕ್ಕೆ ಅಲಭ್ಯವಾಗುವುದು ಸ್ಪಷ್ಟ.
ಐಯ್ಯರ್ ಅಲಭ್ಯವಾಗುವುದು ಖಚಿತವಾದರೆ ಟೀಮ್ ಇಂಡಿಯಾ ಐದನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಅಥವಾ ಶುಬ್ಮನ್ ಗಿಲ್ ಅವರನ್ನು ಆಡಿಸವ ಸಾಧ್ಯತೆಯಿದೆ. ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿದಿದ್ದರೂ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡಿದ ಅನುಭವವಿಲ್ಲ. ಇನ್ನು ಸೂರ್ಯಕುಮಾರ್ ಯಾದವ್‌ಗೆ ಅವಕಾಶ ದೊರೆತರೆ ಇದು ಚೊಚ್ಚಲ ಟೆಸ್ಟ್ ಪಂದ್ಯವಾಗಲಿದೆ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಮೇಲೆ ಹೆಚ್ಚಿನ ಒತ್ತಡ ಬೀಳುವ ಸಾಧ್ಯತೆಯಿದೆ. ಇನ್ನು ವಿರಾಟ್ ಕೊಹ್ಲಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸಿದ್ದರೂ ಟೆಸ್ಟ್‌ನಲ್ಲಿ ಇನ್ನೂ ಲಯಕ್ಕೆ ಮರಳಿದಂತಿಲ್ಲ. ಇದು ಕೂಡ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ಸವಾಲಾಗಿದೆ.

ನಂಬಿಕಾರ್ಹ ವಿಕೆಟ್ ಕೀಪರ್ ಬ್ಯಾಟರ್‌ನ ಅಲಭ್ಯತೆ
ಟೀಮ್ ಇಂಡಿಯಾದ ಪ್ರಮುಖ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಬಾರಿಯ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಅಲಭ್ಯವಾಗಿದ್ದಾರೆ. ಹೀಗಾಗಿ ಟೀಮ್ ಇಂಡಿಯಾ ನಂಬಿಕಾರ್ಹ ವಿಕೆಟ್ ಕೀಪರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್‌ನ ಸೇವೆಯಿಂದ ವಂಚಿತವಾಗಿದೆ. ಈ ಸ್ಥಾನದಲ್ಲಿ ಕೆಎಸ್ ಭರತ್ ಅಥವಾ ಇಶಾನ್ ಕಿಶನ್ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಭರತ್ ಹಾಗೂ ಇಶಾನ್ ಕಿಶನ್ ಇಬ್ಬರ ಪ್ರಥಮ ದರ್ಜೆ ಕ್ರಿಕೆಟ್‌ನ ಸರಾಸರಿ 40ಕ್ಕಿಂತ ಕಡಿಮೆಯಿದೆ. ಅಲ್ಲದೆ ರಿಷಭ್ ಪಂತ್ ರೀತಿಯಲ್ಲಿ ಏಕಾಂಗಿಯಾಗಿ ಪಂದ್ಯವನ್ನು ಕಸಿದುಕೊಳ್ಳುವ ಸಾಮರ್ಥ್ಯ ಇಬ್ಬರಲ್ಲೂ ಇಲ್ಲ. ಹೀಗಾಗಿ ಪಂತ್ ಅಲಭ್ಯತೆ ಈ ಬಾರಿಯ ಬಾರ್ಡರ್ ಗವಾಸ್ಕರ್ ಸರಣಿಯಲ್ಲಲಿ ಭಾರತಕ್ಕೆ ಬಹುವಾಗಿ ಕಾಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications