SRH Captain: ಮೊದಲ ಪಂದ್ಯಕ್ಕಾಗಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಭುವನೇಶ್ವರ್ ಕುಮಾರ್ ನಾಯಕ
ಹಿರಿಯ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದಾರೆ. ತಂಡದ ನಾಯಕ ಐಡೆನ್ ಮಾರ್ಕ್ರಾಮ್ ಮೊದಲನೇ ಪಂದ್ಯಕ್ಕೆ ಅಲಭ್ಯರಾಗಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. ಏಪ್ರಿಲ್ 2ರಂದು ಭಾನುವಾರ, ಸನ್ ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆಡಲಿದೆ.
ನಾಯಕ ಏಡೆನ್ ಮಾರ್ಕ್ರಾಮ್ ಅಂತಾರಾಷ್ಟ್ರೀಯ ಕ್ರಿಕೆಟ್ ವೇಳಾಪಟ್ಟಿಯ ಕಾರಣದಿಂದಾಗಿ ಮೊದಲ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ. ತವರಿನಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಮರುನಿಗದಿಪಡಿಸಲಾದ ಎರಡು ಏಕದಿನ ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಆಡಲಿದ್ದಾರೆ. ಏಪ್ರಿಲ್ 2ರಂದು ಸರಣಿಯ ಕೊನೆಯ ಏಕದಿನ ಪಂದ್ಯ ನಡೆಯಲಿದ್ದು, ನಂತರ ತಂಡವನ್ನು ಸೇರಿಕೊಳ್ಳಲಿದ್ದಾರೆ.

ನಾಯಕ ಐಡೆನ್ ಮಾರ್ಕ್ರಾಮ್ ಮಾತ್ರವಲ್ಲದೆ ಮೊದಲನೇ ಪಂದ್ಯಕ್ಕೆ ಆಲ್‌ರೌಂಡರ್ ಮಾರ್ಕೊ ಜಾನ್ಸೆನ್ ಮತ್ತು ವಿಕೆಟ್ ಕೀಪಿಂಗ್ ಬ್ಯಾಟರ್ ಹೆನ್ರಿಕ್ ಕ್ಲಾಸೆನ್ ಕೂಡ ಅಲಭ್ಯರಾಗಿದ್ದಾರೆ. ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯಲು, ದಕ್ಷಿಣ ಆಫ್ರಿಕಾ ತಂಡ ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸಬೇಕಿದೆ. ಅದಕ್ಕಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಸರಣಿಗಾಗಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದೆ.
ಎರಡು ಪಂದ್ಯಗಳಲ್ಲಿ ಗೆಲುವು
ಭುವನೇಶ್ವರ್ ಕುಮಾರ್ ಈ ಮೊದಲು ಕೂಡ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ತಂಡದಲ್ಲಿ ಹಲವು ವರ್ಷಗಳಿಂದ ಆಡುತ್ತಿರುವ ಅವರು, ಎಲ್ಲಾ ಆಟಗಾರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಭುವಿ ಇದುವರೆಗೆ 7 ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದಾರೆ, ಆದರೆ ಅವರ ನಾಯಕತ್ವದಲ್ಲಿ ಎಸ್‌ಆರ್‌ಎಚ್ ಕೇವಲ ಎರಡು ಬಾರಿ ಮಾತ್ರ ಗೆಲುವು ಸಾಧಿಸಲು ಸಾಧ್ಯವಾಗಿದೆ. ಉಳಿದ ಐದು ಪಂದ್ಯಗಳಲ್ಲಿ ಸೋಲು ಕಂಡಿದೆ.

ಕಳೆದ ಆವೃತ್ತಿಯಲ್ಲಿ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದ್ದ ಎಸ್‌ಆರ್‌ಎಚ್, ಈ ಬಾರಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದೆ. ಕಳೆದ ಆವೃತ್ತಿಯಲ್ಲಿ ತಂಡದ ನಾಯಕರಾಗಿದ್ದ ಕೇನ್ ವಿಲಿಯಮ್ಸ್‌ರನ್ನು ಕೂಡ ಮಿನಿ ಹರಾಜಿಗೆ ಮುನ್ನ ತಂಡದಿಂದ ಕೈಬಿಟ್ಟಿತ್ತು. ಮಿನಿ ಹರಾಜಿನಲ್ಲಿ ಇಂಗ್ಲೆಂಡ್‌ನ ಸ್ಫೋಟಕ ಬ್ಯಾಟರ್ ಹ್ಯಾರಿ ಬ್ರೂಕ್‌ರನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿತ್ತು, ಜೊತೆಗೆ ಅನುಭವಿ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಕೂಡ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಪ್ರತಿ ಆವೃತ್ತಿಯಲ್ಲಿ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿದ್ದ ಸನ್‌ರೈಸರ್ಸ್ ಹೈದರಾಬಾದ್ ಈ ಬಾರಿ ಬ್ಯಾಟಿಂಗ್ ಬಲವನ್ನು ಕೂಡ ಹೆಚ್ಚಿಸಿಕೊಂಡಿದ್ದು, ಸಮತೋಲಿತ ತಂಡವಾಗಿ ಕಾಣುತ್ತಿದೆ. ಮೊದಲ ಪಂದ್ಯವನ್ನೇ ಗೆಲುವಿನ ಮೂಲಕ ಪ್ರಾರಂಭಿಸಲು ಸಜ್ಜಾಗಿದೆ. ಕಳೆದ ಬಾರಿ ರನ್ನರ್ ಅಪ್ ಆಗಿದ್ದ ರಾಜಸ್ಥಾನ ರಾಯಲ್ಸ್ ಕೂಡ ಬಲಿಷ್ಠವಾಗಿದ್ದು, ಮೊದಲ ಪಂದ್ಯದಲ್ಲಿ ರೋಚಕ ಹಣಾಹಣಿ ನಡೆಯುವ ಸಾಧ್ಯತೆ ಇದೆ.
ಸನ್‌ರೈಸರ್ಸ್ ಹೈದರಾಬಾದ್ ತಂಡ: ಅಬ್ದುಲ್ ಸಮದ್, ಐಡೆನ್ ಮಾರ್ಕ್ರಾಮ್ (ನಾಯಕ), ರಾಹುಲ್ ತ್ರಿಪಾಠಿ, ಗ್ಲೆನ್ ಫಿಲಿಪ್ಸ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಆದಿಲ್ ರಶೀದ್, ಮಯಾಂಕ್ ಮಾರ್ಕಂಡೆ, ವಿವ್ರಾಂತ್ ಶರ್ಮಾ, ಸಮರ್ಥ್ ವ್ಯಾಸ್, ಸನ್ವಿರ್ ಸಿಂಗ್, ಉಪೇಂದ್ರ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಅನ್ಮೋಲ್‌ಪ್ರೀತ್ ಸಿಂಗ್, ಅಕೇಲ್ ಹೊಸೈನ್, ಅಭಿಷೇಕ್ ಶರ್ಮಾ, ಮಾರ್ಕೊ ಜಾನ್ಸೆನ್, ವಾಷಿಂಗ್ಟನ್ ಸುಂದರ್, ಫಜಲ್ಹಕ್ ಫಾರೂಕಿ, ಕಾರ್ತಿಕ್ ತ್ಯಾಗಿ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications