ವಿರಾಟ್ ಕೊಹ್ಲಿ ಕೇವಲ ರನ್ ಮಷಿನ್ ಅಲ್ಲ, ಅವರು ತಂಡದ ಗೇಮ್ ಚೇಂಜರ್: ಭುವನೇಶ್ವರ್ ಕುಮಾರ್
Bhuvneshwar Kumar: ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ (ಏಪ್ರಿಲ್ 27) ನಡೆದ ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ದಾಖಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿತು. ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ಸ್ಟಾರ್ ಬೌಲರ್ ಭುವನೇಶ್ವರ್ ಕುಮಾರ್ ಅವರು, ತಂಡದ ಯಶಸ್ಸಿನಲ್ಲಿ ವಿರಾಟ್ ಕೊಹ್ಲಿ ಅವರ ಅನುಭವ ಮತ್ತು ಮಾರ್ಗದರ್ಶನ ಎಷ್ಟು ಮುಖ್ಯ ಎಂಬುದನ್ನು ಬಿಚ್ಚಿಟ್ಟಿದ್ದಾರೆ.
ಈ ಪಂದ್ಯದಲ್ಲಿ ಜೋಶ್ ಹ್ಯಾಜಲ್‌ವುಡ್ ನಾಲ್ಕು ವಿಕೆಟ್ ಕಬಳಿಸಿದರೆ, ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆಯುವ ಮೂಲಕ ಡೆಲ್ಲಿ ತಂಡವನ್ನು ಕೇವಲ 75 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ ಪಡಿಕ್ಕಲ್ ಜೋಡಿ ಸ್ಫೋಟಕ ಬ್ಯಾಟಿಂಗ್ ಆಡಿ ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿತು. ವಿರಾಟ್ ಕೊಹ್ಲಿ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಜೇಕಬ್ ಬೆಥೆಲ್ ಸಹ ಉತ್ತಮ ಆರಂಭ ನೀಡಿದರು.

ವಿರಾಟ್ ಕೊಹ್ಲಿ ಬಗ್ಗೆ ಭುವಿ ಹೇಳಿದ್ದೇನು?
ಮೈದಾನದಲ್ಲಿ ವಿರಾಟ್ ಕೊಹ್ಲಿ ಅವರ ಸಂವಹನ ಮತ್ತು ತಂತ್ರಗಾರಿಕೆಯ ಸಲಹೆಗಳು ಬೌಲರ್‌ಗಳಿಗೆ ತುಂಬಾ ಸಹಕಾರಿಯಾಗುತ್ತವೆ. ಯಾವ ಸಮಯದಲ್ಲಿ ಯಾವ ರೀತಿ ಬೌಲಿಂಗ್ ಮಾಡಬೇಕೆಂಬ ಅವರ ಅನುಭವ ತಂಡಕ್ಕೆ ದೊಡ್ಡ ಬಲ ನೀಡುತ್ತದೆ. ಈ ಜಯದ ನಂತರ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ವಿರಾಟ್ ಅವರಂತಹ ಹಿರಿಯ ಆಟಗಾರರು ಮೈದಾನದಲ್ಲಿ ಇರುವಾಗ ಪಂದ್ಯವನ್ನು ಗೆಲ್ಲುವುದು ತುಂಬಾ ಸುಲಭ ಎಂದು ಭುವಿ ತಿಳಿಸಿದರು.
'ಬೌಲರ್‌ಗಳ ಹಿಂದಿನ ಮಾಸ್ಟರ್ ಮೈಂಡ್ ಕೊಹ್ಲಿ'
ಬೌಲಿಂಗ್‌ನಲ್ಲಿ ಹ್ಯಾಜಲ್‌ವುಡ್ ಮತ್ತು ತಮಗೆ ಸಿಕ್ಕ ಆರಂಭಿಕ ಯಶಸ್ಸು ಪಂದ್ಯದ ದಿಕ್ಕನ್ನು ಬದಲಿಸಿತು ಎಂದು ಅವರು ಅಭಿಪ್ರಾಯಪಟ್ಟರು. "ವಿರಾಟ್ ಅವರ ಚಾಣಕ್ಷತನ ಅದ್ಭುತವಾಗಿದೆ. ಅವರು ಕೇವಲ ಬ್ಯಾಟರ್ ಆಗಿ ಮಾತ್ರವಲ್ಲದೆ, ಒಬ್ಬ ಮಾರ್ಗದರ್ಶಕನಾಗಿ ಪ್ರತಿ ಎಸೆತದಲ್ಲೂ ನಮಗೆ ಬೆಂಬಲ ನೀಡುತ್ತಾರೆ. ಅವರ ಮಾರ್ಗದರ್ಶನವೇ ಪಂದ್ಯದ ಮಹತ್ವದ ಕ್ಷಣಗಳಲ್ಲಿ ದೊಡ್ಡ ಬದಲಾವಣೆ ತರುತ್ತವೆ," ಎಂದು ಭುವನೇಶ್ವರ್ ಕುಮಾರ್ ಶ್ಲಾಘಿಸಿದರು. ವಿರಾಟ್ ಕೊಹ್ಲಿ ಕೇವಲ ರನ್ ಮಷಿನ್ ಮಾತ್ರವಲ್ಲದೆ, ಬೌಲರ್‌ಗಳಿಗೆ ವಿಕೆಟ್ ಪಡೆಯಲು ಮಾರ್ಗದರ್ಶನ ನೀಡುವ ಮಾಸ್ಟರ್ ಮೈಂಡ್ ಆಗಿಯೂ ಕೆಲಸ ಮಾಡುತ್ತಿದ್ದಾರೆ ಎಂಬುದು ಭುವಿ ಅವರ ಮಾತುಗಳ ಅರ್ಥವಾಗಿದೆ.
ವಿರಾಟ್ ಕೊಹ್ಲಿ ಈ ಪಂದ್ಯದ ಮೂಲಕ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮತ್ತೊಂದು ಐತಿಹಾಸಿಕ ಅಧ್ಯಾಯವನ್ನು ಬರೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ 9,000 ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೇಗ್ಗಾಳಿಕೆಗೆ ಅವರು ಪಾತ್ರರಾಗಿದ್ದಾರೆ. ತಮ್ಮ ಕ್ರಿಕೆಟ್ ಜೀವನಕ್ಕೆ ಅಡಿಪಾಯ ಹಾಕಿದ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲೇ ವಿರಾಟ್ ಈ ಮೈಲಿಗಲ್ಲನ್ನು ತಲುಪಿದ್ದು ವಿಶೇಷವಾಗಿತ್ತು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 76 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕೊಹ್ಲಿ, ಸತತ ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಪಂದ್ಯವನ್ನು ಮುಗಿಸಿದರು. ಅವರು ಕೇವಲ 15 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 23 ರನ್ ಗಳಿಸಿದರು. ಇದೀಗ ಈ ಸೀಸನ್‌ನಲ್ಲಿ ವಿರಾಟ್ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಒಟ್ಟಿನಲ್ಲಿ ಭುವನೇಶ್ವರ್ ಕುಮಾರ್ ಅವರು ವಿರಾಟ್ ಕೊಹ್ಲಿ ಅವರಲ್ಲಿ ಯಾವೆಲ್ಲಾ ಕೌಶಲ್ಯಗಳಿವೆ ಎನ್ನುವ ಮಹತ್ವದ ಮಾಹಿತಿಯನ್ನು ರಿವೀಲ್ ಮಾಡಿ ಗಮನ ಸೆಳೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications