ತವರಿಗೆ ಮರಳಲಿರುವ ಭುವಿ: ಎನ್‌ಸಿಎ ಪದ್ಧತಿ ಕುರಿತು ಆಟಗಾರರ ಅಸಮಾಧಾನ


ಬೆಂಗಳೂರು, ಜುಲೈ 19: ಇಂಗ್ಲೆಂಡ್ ವಿರುದ್ಧದ ಸರಣಿಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿರುವ ಭಾರತದ ಪ್ರಮುಖ ಬೌಲರ್ ಭುವನೇಶ್ವರ್ ಕುಮಾರ್ ಸ್ವದೇಶಕ್ಕೆ ಮರಳಲಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಶಿಬಿರದಲ್ಲಿ ತೀವ್ರ ಭುವನೇಶ್ವರ್ ಕುಮಾರ್ ಫಿಟ್ನೆಸ್ ಪರೀಕ್ಷೆಗಾಗಿ ಕಠಿಣ ಅಭ್ಯಾಸಕ್ಕೆ ಒಳಗಾಗಲಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಅವರು ಆಡುವುದಿಲ್ಲ.
ಆದರೆ, ಎನ್‌ಸಿಎದ ಫಿಟ್ನೆಸ್ ಪರಿಶೀಲನಾ ವ್ಯವಸ್ಥೆ ಕುರಿತು ಕ್ರಿಕೆಟ್ ತಂಡದ ಅನೇಕ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಲೀಡ್ಸ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭುವನೇಶ್ವರ್ ಹಿಂಬದಿ ಕೆಳಭಾಗದ ಗಾಯಕ್ಕೆ ಒಳಗಾಗಿದ್ದಾರೆ ಎಂದು ಬಿಸಿಸಿಐ ಬುಧವಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.
ಆಗಸ್ಟ್ 1 ರಿಂದ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಮತ್ತೊಬ್ಬ ವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಆಡುತ್ತಿಲ್ಲ.
ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದರೆ ಅವರು ಎರಡನೆಯ ಟೆಸ್ಟ್‌ನಲ್ಲಿ ಆಡಲಿದ್ದಾರೆ.
ಐಪಿಎಲ್ ಆವೃತ್ತಿಯ ಕೊನೆಯ ಐದು ಪಂದ್ಯಗಳಲ್ಲಿ ಆಡದಿದ್ದ ಭುವನೇಶ್ವರ್, ಲೀಡ್ಸ್ ಪಂದ್ಯದ ಅಂತಿಮ ಹನ್ನೊಂದರ ಬಳಗದ ಆಯ್ಕೆಗೂ ಮುನ್ನ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು ಎನ್ನಲಾಗಿದೆ.
ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕಳೆದ ತಿಂಗಳು ಎನ್‌ಸಿಎದಲ್ಲಿ ನಡೆದ ಯೋ ಯೋ ಪರೀಕ್ಷೆಯಲ್ಲಿ ಭುವನೇಶ್ವರ್ ಉತ್ತೀರ್ಣರಾಗಿದ್ದರು.
ಇಂಗ್ಲೆಂಡ್ ಪ್ರವಾಸವನ್ನು ದೃಷ್ಟಿಯಲ್ಲಿಟ್ಟುಕೊಂಡು ಭುವನೇಶ್ವರ್ ಅವರಿಗೆ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಕ್ರಿಕೆಟ್ ಟೆಸ್ಟ್‌ನಲ್ಲಿ ವಿಶ್ರಾಂತಿ ನೀಡಲಾಗಿತ್ತು.
ಭುವನೇಶ್ವರ್ ಅವರ ಗಾಯದ ಸಮಸ್ಯೆಯಿಂದಾಗಿ ತಂಡದ ಫಿಸಿಯೋಗಳಾದ ಶಂಕರ್ ಬಸು ಮತ್ತು ಪ್ಯಾಟ್ರಿಕ್ ಫರ್ಹಾತ್ ಅವರ ಪಾತ್ರಗಳ ಕುರಿತು ಗಂಭೀರ ಪ್ರಶ್ನೆಗಳು ಹುಟ್ಟಿಕೊಂಡಿವೆ.
'ನಮಗೆ ಭುವನೇಶ್ವರ್ ಅವರ ಅನಾರೋಗ್ಯದ ಕುರಿತು ಸ್ಪಷ್ಟ ಚಿತ್ರಣ ದೊರೆತಿಲ್ಲ. ಅವರ ಗಾಯದ ಸಮಸ್ಯೆ ಉಲ್ಬಣಗೊಂಡಿದೆ ಎಂದಾದರೆ, ಅವರು ಈಗಾಗಲೇ ಗಾಯಗೊಂಡಿದ್ದರು ಎಂದರ್ಥ.
ಒಂದು ವೇಳೆ ಅವರು ಗಾಯಗೊಂಡಿದ್ದರೆ ಯೋ ಯೋ ಟೆಸ್ಟ್ ಹೇಗೆ ಪಾಸ್ ಮಾಡಿದರು? ಅವರಿಗೆ ಆಡಲು ಏಕೆ ಅವಕಾಶ ನೀಡಲಾಯಿತು?
ಈ ಪ್ರಶ್ನೆಗಳಿಗೆ ಭಾರತ ತಂಡದ ಫಿಸಿಯೋಗಳು ಮತ್ತು ಮ್ಯಾನೇಜ್‌ಮೆಂಟ್‌ನಿಂದ ನಮಗೆ ಉತ್ತರ ಬೇಕು. ಮುಂದಿನ ದಿನದಲ್ಲಿ ಇಂಗ್ಲೆಂಡ್ ವಿರುದ್ಧ ಅತ್ಯಂತ ಮಹತ್ವದ ಟೆಸ್ಟ್ ಸರಣಿ ನಡೆಯಲಿದೆ.
ಅದರಲ್ಲಿ ನಮ್ಮ ಇಬ್ಬರು ಪ್ರಮುಖ ವೇಗದ ಬೌಲರ್‌ಗಳೇ ಇಲ್ಲ. ಇಂತಹ ಸನ್ನಿವೇಶಗಳಿಗೆ ನಾವು ಅವಕಾಶ ನೀಡಲು ಸಾಧ್ಯವಿಲ್ಲ' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಸಿಎದಲ್ಲಿ ನಡೆಯುವ ತರಬೇತಿ ಶಿಬಿರದ ಬಗ್ಗೆ ತಂಡದ ಕೆಲವು ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಭಾರತ ಎ ತಂಡದ ಜತೆ ಕಾರ್ಯನಿರ್ವಹಿಸುತ್ತಿರುವ ಬಸು ಮತ್ತು ಸೋಹಮ್ ದೇಸಾಯಿ ಅವರು ತಂಡದಲ್ಲಿರುವ ಎಲ್ಲ ಆಟಗಾರರಿಗೂ ಹೊಂದಾಣಿಕೆಯಾಗದ ತರಬೇತಿ ಪದ್ಧತಿಯನ್ನು ಬದಲಿಸಲು ಮತ್ತು ತಮ್ಮ ಕೌಶಲವನ್ನು ಸುಧಾರಿಸಿಕೊಳ್ಳಲು ಮುಂದಾಗುತ್ತಿಲ್ಲ ಎಂದು ಆರೋಪಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications