2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗಾಗಿ ಮಂಗಳವಾರ, ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ.
ಒಟ್ಟು 333 ಆಟಗಾರರು ಹರಾಜು ಸುತ್ತಿಗೆಗೆ ಹೋಗಲಿದ್ದು, ದೇಶ-ವಿದೇಶದ ಸ್ಟಾರ್ ಆಟಗಾರರು ರಾತ್ರೋರಾತ್ರಿ ಕೋಟ್ಯಧಿಪತಿ ಆಗಲು ಕನಸು ಕಾಣುತ್ತಿದ್ದಾರೆ ಮತ್ತು ಎಲ್ಲಾ ಹತ್ತು ಫ್ರಾಂಚೈಸಿಗಳು ಹಣವನ್ನು ಚೆಲ್ಲಿ ಬಲಿಷ್ಠ ತಂಡವನ್ನು ನಿರ್ಮಿಸಿಕೊಳ್ಳುವ ತವಕದಲ್ಲಿದ್ದಾರೆ.

ಇದೇ ವೇಳೆ ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಲು ಎರಡು ಜನಪ್ರಿಯ ತಂಡಗಳು ಬಿಡ್ಡಿಂಗ್ ವಾರ್ ನಡೆಸಲಿವೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ತಿಳಿಸಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (ಎಂಐ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಗಳು ಸ್ಟಾರ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಖರೀದಿಸಲು ಪ್ರಯತ್ನಿಸಲಿವೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಂದಾಜಿಸಿದ್ದಾರೆ.
ಆಸೀಸ್ ಬೌಲರ್ ಮಿಚೆಲ್ ಸ್ಟಾರ್ಕ್ ಅವರು ಗಾಳಿಯಲ್ಲಿ ಸ್ವಿಂಗ್ ಪಡೆಯುವ ಸಾಮರ್ಥ್ಯದೊಂದಿಗೆ "ಸಮೀಕರಣದಿಂದ ಹೊರಗೆ' ಪಿಚ್‌ಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ಇಚ್ಛೆಯಂತೆ ಯಾರ್ಕರ್‌ಗಳನ್ನು ಬೌಲ್ ಮಾಡುತ್ತಾರೆ ಎಂದು ಭಾರತದ ಮಾಜಿ ಬ್ಯಾಟರ್ ಅಭಿಪ್ರಾಯಪಟ್ಟರು.
"ತಮ್ಮ ತವರಿನ ಅರ್ಧದಷ್ಟು ಪಂದ್ಯಗಳನ್ನು ಸಂಪೂರ್ಣವಾಗಿ ಸಮತಟ್ಟಾದ ಪಿಚ್‌ಗಳಲ್ಲಿ ಆಡಬೇಕಾದ ತಂಡಗಳು ಮಿಚೆಲ್ ಸ್ಟಾರ್ಕ್ ಖರೀದಿಸಲು ಮುಂದಾಗಬೇಕು. ಸ್ಟಾರ್ಕ್ ವಿಶ್ವದ ಒಬ್ಬ ಅತ್ಯುತ್ತಮ ಬೌಲರ್ ಆಗಿದ್ದಾರೆ, ಆತ ಬಹುಶಃ ಪಿಚ್ ಅನ್ನು ಸಮೀಕರಣದಿಂದ ಹೊರತೆಗೆಯುತ್ತಾರೆ, ಗಾಳಿಯಲ್ಲಿ ಎಲ್ಲಾ ಮ್ಯಾಜಿಕ್‌ಗಳನ್ನು ಮಾಡುತ್ತಾರೆ. ಹೊಸ ಬಾಲ್ ಮತ್ತು ಡೆತ್ ಓವರ್‌ಗಳಲ್ಲಿ ಸ್ವಿಂಗ್ ಮತ್ತು ಯಾರ್ಕರ್‌ಗಳನ್ನು ಮಾಡುತ್ತಾರೆ," ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು.
"ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಜಸ್ಪ್ರೀತ್ ಬುಮ್ರಾ ಜೊತೆಗೆ ಜೇಸನ್ ಬೆಹ್ರೆಂಡಾರ್ಫ್ ಅವರನ್ನು ಪಡೆದಿದ್ದು, ಜೋಫ್ರಾ ಆರ್ಚರ್ ಅವರನ್ನು ಕೈಬಿಟ್ಟ ನಂತರ ಮಿಚೆಲ್ ಸ್ಟಾರ್ಕ್ ಬಗ್ಗೆ ಆಸಕ್ತಿ ತೋರಿಸಬಹುದು," ಎಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಭಾರತದ ಮೊದಲ ಏಕದಿನ ಪಂದ್ಯದ ಬಳಿಕ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
"ಆರ್‌ಸಿಬಿ ತಂಡಕ್ಕೆ ರೀಸ್ ಟೋಪ್ಲೆ ಸಿಕ್ಕಿದ್ದಾರೆ, ಅವರು ಉತ್ತಮ ಬೌಲರ್ ಆಗಿದ್ದಾರೆ. ಆದರೆ ಅಧಿಕ ಬೌಲರ್‌ಗಳು ಹೋರಾಡುವ ಫ್ಲಾಟ್ ಪಿಚ್‌ಗಳಲ್ಲಿ, ಮಿಚೆಲ್ ಸ್ಟಾರ್ಕ್ ಮತ್ತು ಜಸ್ಪ್ರೀತ್ ಬುಮ್ರಾ ಅವರು ತಮ್ಮ ಪರಿಣಾಮಕಾರಿ ಬೌಲಿಂಗ್‌ನೊಂದಿಗೆ ತಮ್ಮ ತಂಡವನ್ನು ಮತ್ತೆ ಆಟಕ್ಕೆ ತರುವ ರೀತಿಯ ಬೌಲರ್‌ಗಳು," ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟರು.
ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರು ಮುಂಬರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ 2 ಕೋಟಿ ರೂಪಾಯಿ ಮೂಲ ಬೆಲೆಗೆ ನೋಂದಾಯಿಸಿಕೊಂಡಿದ್ದಾರೆ.
ಈ ಹಿಂದೆ ಮಿಚೆಲ್ ಸ್ಟಾರ್ಕ್ ಆರ್‌ಸಿಬಿ ತಂಡಕ್ಕಾಗಿ 2014 ಮತ್ತು 2015ರಲ್ಲಿ ಎರಡು ಆವೃತ್ತಿಗಳನ್ನು ಆಡಿದರು. ಅಲ್ಲಿ ಅವರು 27 ಪಂದ್ಯಗಳಿಂದ ಒಂದು ಬಾರಿ ನಾಲ್ಕು ವಿಕೆಟ್ ಗಳಿಕೆಯೊಂದಿಗೆ 34 ವಿಕೆಟ್‌ಗಳನ್ನು ತಮ್ಮ ಹೆಸರಿಗೆ ತೆಗೆದುಕೊಂಡಿದ್ದಾರೆ.
ಮಿಚೆಲ್ ಸ್ಟಾರ್ಕ್ ಇತ್ತೀಚೆಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲಿ ಅವರು 6.06ರ ಎಕಾನಮಿ ದರದಲ್ಲಿ 10 ಪಂದ್ಯಗಳಿಂದ 16 ವಿಕೆಟ್‌ಗಳನ್ನು ಪಡೆದರು.