ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಹಲವು ಸ್ಟಾರ್ ಆಟಗಾರರು ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ತಂಡದಲ್ಲಿ ಸ್ಥಾನ ಪಡೆಯುವ ಕನಸು ಕಾಣುತ್ತಿದ್ದ ಹಲವು ಭರವಸೆಯ ಆಟಗಾರರಿಗೆ ನಿರಾಸೆ ಆಗಿದೆ. ಹಾಗಿದ್ದಾರೆ ಅಕ್ಟೋಬರ್ 2 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಯಾವೆಲ್ಲಾ ಆಟಗಾರರು ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡುವ ಅವಕಾಶವನ್ನು ಪಡೆದ ಕರುಣ್ ನಾಯರ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇವರು 8 ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. ಆದರೆ ಇಂಗ್ಲೆಂಡ್‌ನಲ್ಲಿ ಇವರು ತಮ್ಮ ಸ್ಥಿರ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು. ದೇಶೀಯ ಟೂರ್ನಿಯಲ್ಲಿ ನೀಡಿದ ಪ್ರದರ್ಶನವನ್ನೇ, ಇಂಗ್ಲೆಂಡ್ ನೆಲದಲ್ಲಿ ನೀಡಬಹುದು ಎಂದು ಲೆಕ್ಕಾಚಾರವನ್ನು ಎಲ್ಲರೂ ಹಾಕಿಕೊಂಡಿದ್ದರು. ಆದರೆ ಇವರು ಆಡಿದ 4 ಪಂದ್ಯಗಳ 8 ಇನಿಂಗ್ಸ್‌ಗಳಲ್ಲಿ ಕೇವಲ 1 ಅರ್ಧಶತಕ ಮಾತ್ರ ಸಿಡಿಸಿದ್ದರು. ಹೀಗಾಗಿ ಇವರ ಮೇಲೆ ಅಪಾಯದ ತೂಗುಗತ್ತಿ ನೇತಾಡುತ್ತಿತ್ತು.

ವಿಂಡೀಸ್ ವಿರುದ್ಧದ ಸರಣಿಗೆ ಇವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರ ಸ್ಥಾನದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅವರಿಗೆ ಸ್ಥಾನ ನೀಡಲಾಗಿದೆ. ಇವರು ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ. ಹೀಗಾಗಿ ಇವರು ತಂಡದಲ್ಲಿ ಸ್ಥಾನ ಪಡೆದಿದ್ದು, ಅಬ್ಬರಿಸಲು ಸಜ್ಜಾಗಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಈ ವೇಳೆ ಆಯ್ಕೆ ಸಮಿತಿ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿಲ್ಲ. ಇವರು ಸಂಪೂರ್ಣ ಫಿಟ್ ಆಗಿದ್ದರು ಸಹ ಇವರನ್ನು ಟೆಸ್ಟ್ ಸರಣಿಗೆ ಆಯ್ಕೆ ಮಾಡಿಲ್ಲ.
ದೇಶೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್‌ಗಳ ಮಹಲ್ ಕಟ್ಟಿರುವ ಸರ್ಫರಾಜ್ ಖಾನ್ ಅವರು ಟೆಸ್ಟ್ ಸರಣಿಗೆ ಕಂ ಬ್ಯಾಕ್ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಇವರು ದೇಶೀಯ ಎಲ್ಲ ಟೂರ್ನಿಗಳಲ್ಲಿ ರನ್ ಮಹಲ್ ಕಟ್ಟುತ್ತಿದ್ದಾರೆ. ಆದರೂ ಇವರಿಗೆ ಮಣೆ ಹಾಕುವಲ್ಲಿ ಆಯ್ಕೆ ಸಮಿತಿ ವಿಫಲವಾಗಿತ್ತು. ಇವರು ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಕೊನೆಯ ಬಾರಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಇವರಿಗೆ ಬಿಸಿಸಿಐ ಆಯ್ಕೆ ಸಮಿತಿ ಭಾರತ "ಎ" ತಂಡದ ಸೀಮಿತ ಓವರ್‌ಗಳ ನಾಯಕತ್ವವನ್ನು ನೀಡಲಾಗಿದೆ. ಇವರು ಲಕ್ನೋದಲ್ಲಿ ನಡೆಯಲಿರುವ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇವರು ಸಹ ವೈಟ್ ಜೆರ್ಸಿಯಲ್ಲಿ ಮಿಂಚಲು ಪ್ಲ್ಯಾನ್ ಮಾಡಿಕೊಂಡಿದ್ದು, ಅವಕಾಶಕ್ಕಾಗಿ ಕಾಯುತ್ತಿದ್ದಾರೆ.