ಭಾರತ ತಂಡದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವೆ ಎಲ್ಲವೂ ಸರಿಯಿಲ್ಲ. ಹೀಗಾಗಿ ಈ ಸ್ಟಾರ್ ದಂಪತಿಗಳು ವಿಚ್ಛೇದನ ಪಡೆಯಲಿದ್ದಾರೆ ಎಂಬ ಬಗ್ಗೆ ಹಲವು ಊಹಾಪೋಹಗಳು ಹರಿದಾಡುತ್ತಿದ್ದವು. ಈಗ, ಈ ಎಲ್ಲಾ ಊಹಾಪೋಹಗಳಿಗೆ ಸ್ಟಾರ್ ದಂಪತಿಗಳು ತೆರೆ ಎಳೆದಿದ್ದಾರೆ. ವರದಿಗಳ ಪ್ರಕಾರ, ಯುಜ್ವೇಂದ್ರ ಚಹಾಲ್ ತಮ್ಮ ಪತ್ನಿ ಧನಶ್ರೀ ವರ್ಮಾ ಅವರಿಂದ ಬೇರ್ಪಟ್ಟಿದ್ದಾರೆ. ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ.
ಸತತ 18 ತಿಂಗಳ ಪ್ರತ್ಯೇಕ ವಾಸದ ನಂತರ ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ದಂಪತಿ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಬಾಂದ್ರಾ ಕುಟುಂಬ ನ್ಯಾಯಾಲಯದಲ್ಲಿ ಹೊಂದಾಣಿಕ ಸಮಸ್ಯೆಯ ಕಾರಣ ನೀಡುವ ಮೂಲಕ ತಮ್ಮ 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ ಎಂದು ವರದಿಯಾಗಿದೆ.

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ 2020 ರಲ್ಲಿ ವಿವಾಹವಾದರು. ಅವರ ಮದುವೆ ಅನೇಕ ಜನರಿಗೆ ಅಚ್ಚರಿಯನ್ನುಂಟುಮಾಡಿತು. ಈಗ ಯುಜ್ವೇಂದ್ರ ಚಾಹಲ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಪೋಸ್ಟ್‌ನಲ್ಲಿ 'ದೇವರು ನನ್ನನ್ನು ಎಷ್ಟೋ ಬಾರಿ ರಕ್ಷಿಸಿದ್ದಾನೆ, ನಾನು ಅವುಗಳನ್ನು ಎಣಿಸಲು ಸಹ ಸಾಧ್ಯವಿಲ್ಲ. ಕೆಲವೊಮ್ಮೆ ದೇವರು ನನ್ನ ಅರಿವಿಗೆ ಬಾರದೆಯೋ ನನ್ನ ಜೊತೆ ನಿಂತಿದ್ದಾನೆ. ಇದಕ್ಕಾಗಿ ನಾನು ದೇವರಿಗೆ ಧನ್ಯವಾದಗಳು ಹೇಳುತ್ತೇನೆ ಎಂದು ಚಹಾಲ್ ಬರೆದುಕೊಂಡಿದ್ದಾರೆ.
ಯುಜ್ವೇಂದ್ರ ಚಹಾಲ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ಧನಶ್ರೀ ವರ್ಮಾ ಕೂಡ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಧನಶ್ರೀ ವರ್ಮಾ ಕೂಡ ತಮ್ಮ ಪೋಸ್ಟ್ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. 'ಒತ್ತಡದಿಂದ ಸಂತೋಷದವರೆಗೆ, ದೇವರು ನನ್ನ ಚಿಂತೆಗಳನ್ನು ಹೇಗೆ ಸಂತೋಷವಾಗಿ ಪರಿವರ್ತಿಸಿದ್ದಾನೆಂದು ನಾನು ಊಹಿಸಲೂ ಸಾಧ್ಯವಾಗಲಿಲ್ಲ. ಇಂದು ನೀವು ಯಾವುದಾದರೂ ವಿಷಯದ ಬಗ್ಗೆ ಒತ್ತಡದಲ್ಲಿದ್ದರೆ, ನಿಮಗೆ ಒಂದು ಆಯ್ಕೆ ಇದೆ ಎಂದು ತಿಳಿಯಿರಿ. ನೀವು ಚಿಂತಿಸುತ್ತಲೇ ಇರಬಹುದು, ಅಥವಾ ಎಲ್ಲವನ್ನೂ ದೇವರಿಗೆ ಒಪ್ಪಿಸಿ ಎಲ್ಲದಕ್ಕೂ ಪ್ರಾರ್ಥಿಸಲು ಆಯ್ಕೆ ಮಾಡಿಕೊಳ್ಳಬಹುದು. ದೇವರು ನಿಮ್ಮ ಒಳಿತಿಗಾಗಿ ಎಲ್ಲವನ್ನೂ ಒಟ್ಟಿಗೆ ಮಾಡಬಲ್ಲನೆಂದು ನಂಬುವುದರಲ್ಲಿ ಶಕ್ತಿಯಿದೆ ಎಂದು ಬರೆದುಕೊಂಡಿದ್ದಾರೆ.
ಧನಶ್ರೀ ವರ್ಮಾ 2024 ರಲ್ಲಿ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಕರಾದ ಗೌಹರ್ ಖಾನ್ ಮತ್ತು ರಿತ್ವಿಕ್ ಧಂಜನಿ ಧನಶ್ರೀ ವರ್ಮಾ ಅವರನ್ನು ಯುಜ್ವೇಂದ್ರ ಚಾಹಲ್ ಅವರೊಂದಿಗಿನ ಪ್ರೇಮಕಥೆಯ ಬಗ್ಗೆ ಕೇಳಿದ್ದರು. ಧನಶ್ರೀ ಅವರು ಯುಜಿಗೆ ನೃತ್ಯ ಕಲಿಸುತ್ತಿದ್ದೆ. ಈ ವೇಳೆ ನಮ್ಮ ನಡುವೆ ಪ್ರೀತಿ ಅರಳಿತು ಎಂದು ಹೇಳಿದ್ದರು.