ಈ ವರ್ಷ ಅಂತ್ಯದಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡಕ್ಕೆ ದೊಡ್ಡ ಸವಾಲು ಎದುರಾಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (ಡಬ್ಲ್ಯೂಟಿಸಿ) ಫೈನಲ್‌ಗೆ ಪ್ರವೇಶಿಸಲು ಪ್ರಬಲ ಸ್ಪರ್ಧಿಯಾಗಿರುವ ಟೀಮ್ ಇಂಡಿಯಾ 2 ಟೆಸ್ಟ್‌ಗಳ ಸರಣಿಯಲ್ಲಿ ಬಾಂಗ್ಲಾದೇಶವನ್ನು 2-0 ಅಂತರದಿಂದ ಸೋಲಿಸುವ ಮೂಲಕ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಇದೀಗ ಭಾರತ ತವರು ನೆಲದಲ್ಲಿ ಅಕ್ಟೋಬರ್ 16 ರಿಂದ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ರೋಹಿತ್ ಶರ್ಮಾ ಪಡೆ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಆ ನಂತರ ಆಸ್ಟ್ರೇಲಿಯಾದ ವಿರುದ್ಧ ದೊಡ್ಡ ಪೈಪೋಟಿ ನಡೆಸಲಿದೆ.

ನವೆಂಬರ್ ರಿಂದ ಜನವರಿ ತಿಂಗಳ ವರಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾ 5 ಬಾರ್ಡರ್-ಗವಾಸ್ಕರ್ ಟ್ರೋಫಿಯ 5 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ನವೆಂಬರ್ 22 ರಿಂದ ಉಭಯ ತಂಡಗಳ ಮೊದಲ ಟೆಸ್ಟ್ ಪಂದ್ಯ ಪರ್ತ್‌ನಲ್ಲಿ ಆರಂಭವಾಗಲಿದೆ. ಅದಕ್ಕೂ ಮುನ್ನ ಉಭಯ ದೇಶಗಳ ಮಾಜಿ ಆಟಗಾರರು, ಕ್ರಿಕೆಟ್ ತಜ್ಞರು ಹಾಗೂ ಹಾಲಿ ಕ್ರಿಕೆಟಿಗರ ನಡುವೆ ಮಾತಿನ ಸಮರ ಆರಂಭವಾಗಿದೆ. ಇದೀಗ ಆಸ್ಟ್ರೇಲಿಯಾದ ದಿಗ್ಗಜ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಶೇನ್ ವ್ಯಾಟ್ಸನ್ ತಮ್ಮ ತಂಡವನ್ನು ಎಚ್ಚರಿಸಿದ್ದಾರೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ಅಪಾಯವಾಗಬಲ್ಲ ಇಬ್ಬರು ಟೀಮ್ ಇಂಡಿಯಾ ಆಟಗಾರರನ್ನು ಹೆಸರಿಸಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದರು. ಅದರಲ್ಲೂ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟೀಮ್ ಇಂಡಿಯಾ ಪರ ಮಿಂಚಿದ್ದರು. ಈ ಇಬ್ಬರು ಆಸ್ಟ್ರೇಲಿಯಾಕ್ಕೆ ಅಪಾಯವಾಗಬಹುದು ಎಂದು ಎಂದು ವ್ಯಾಟ್ಸನ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವ್ಯಾಟ್ಸನ್ ಅವರು, "ಪಂತ್ ಅವರು ಬ್ಯಾಟಿಂಗ್ ವಿಚಾರದಲ್ಲಿ ಆಸ್ಟ್ರೇಲಿಯಾದಲ್ಲಿ ಉತ್ತಮ ನೆನಪುಗಳನ್ನು ಹೊಂದಿದ್ದಾರೆ. ಗಬ್ಬಾ (ಬ್ರಿಸ್ಬೇನ್)ನಲ್ಲಿ ಅವರು ಆಡಿದ ಇನ್ನಿಂಗ್ಸ್ ತುಂಬಾ ವಿಶೇಷವಾಗಿತ್ತು. ಕಳೆದ ಕೆಲವು ವರ್ಷಗಳಲ್ಲಿ ಅವರು ತಮ್ಮ ಸವಾಲುಗಳನ್ನು ಗೆದ್ದು, ಉತ್ತಮ ಆಟಗಾರನಾಗಿ ಮರಳಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅವರು ದೊಡ್ಡ ಇನ್ನಿಂಗ್ಸ್ ಆಡಲಿದ್ದಾರೆ ಅಂದುಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಡಿಸೆಂಬರ್ 2022ರಲ್ಲಿ ಕಾರು ಅಪಘಾತ ಸಂಭವಿಸಿದ ನಂತರ ಬಾಂಗ್ಲಾದೇಶ ವಿರುದ್ಧ ಸರಣಿ ವೇಳೆ ಭಾರತ ಟೆಸ್ಟ್ ತಂಡಕ್ಕೆ ಮರಳಿದರು. ಇದುವರೆಗೆ ಅವರು ಆಸ್ಟ್ರೇಲಿಯಾದಲ್ಲಿ 12 ಟೆಸ್ಟ್ ಇನ್ನಿಂಗ್ಸ್‌ಗಳನ್ನು ಆಡಿದ್ದು, 62.47ರ ಸರಾಸರಿಯಲ್ಲಿ 624 ರನ್‌ಗಳು ಗಳಿಸಿದ್ದಾರೆ.
ಇದೇ ವೇಳೆ ಬುಮ್ರಾ ಬಗ್ಗೆ ಮಾತನಾಡಿದ ವ್ಯಾಟ್ಸನ್, ವಿಶ್ವ ಕ್ರಿಕೆಟ್‌ನಲ್ಲಿ ಯಾವುದೇ ಪರಿಸ್ಥಿತಿಯಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯಯನ್ನು ಜಸ್ಪ್ರೀತ್ ಬುಮ್ರಾ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬುಮ್ರಾ ಅದ್ಭುತ ದಾಖಲೆಗಳನ್ನು ಮಾಡಿರುವ ಬೌಲರ್. ಬ್ಯಾಟರ್‌ಗಳನ್ನು ಔಟ್ ಮಾಡುವ ಅವರ ಸಾಮರ್ಥ್ಯ ಆಸ್ಟ್ರೇಲಿಯಾ ತಂಡದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ, ಬುಮ್ರಾ ಮತ್ತು ಪಂತ್ ನಿಜವಾಗಿಯೂ ಆಸ್ಟ್ರೇಲಿಯಾಕ್ಕೆ ದೊಡ್ಡ ಸವಾಲುಗಳನ್ನು ನೀಡಬಲ್ಲರು ಎಂದಿದ್ದಾರೆ.