BGT 2023: ಅಶ್ವಿನ್, ಜಡೇಜಾ ವಿರುದ್ಧ ಪ್ಲ್ಯಾನ್! ಕಮ್‌ಬ್ಯಾಕ್ ರಣತಂತ್ರದ ಬಗ್ಗೆ ಸ್ಟೀವ್ ಸ್ಮಿತ್ ಸುಳಿವು!

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಅನುಭವಿಸಿದ ಆಸ್ಟ್ರೇಲಿಯಾ ತಂಡ ಸರಣಿಯನ್ನು ವಶಕ್ಕೆ ಪಡೆಯಲು ಮತ್ತೊಮ್ಮೆ ವಿಫಲವಾಗಿದೆ. ಇದೀಗ ಮೂರನೇ ಪಂದ್ಯಕ್ಕೂ ಮುನ್ನ ತಂಡದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ತಯಾರಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಸ್ಟೀವ್ ಸ್ಮಿತ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲಿ ಎಲ್ಲವೂ ತಮ್ಮ ನಿಯಂತ್ರಣದಲ್ಲಿಯೇ ಇತ್ತು ಎಂದಿದ್ದು ಬಳಿಕ ಆತುರ ಕಾರಣದಿಂದಾಗಿ ಆಸಿಸ್ ಪಡೆ ಶೀಘ್ರವಾಗಿ ವಿಕೆಟ್ ಕಳೆದುಕೊಳ್ಳುವಂತಾಯಿತು ಎಂದಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡ 113 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ ಸುಲಭ ಸವಾಲು ನಿಗದಿಪಡಿಸಿತ್ತು.

ಬಹಳ ಕೋಪಗೊಂಡಿದ್ದೆ ಎಂದ ಸ್ಮಿತ್
ಇನ್ನು ದೆಹಲಿ ಟೆಸ್ಟ್‌ನಲ್ಲಿ ಔಟಾದ ಕಾರಣಕ್ಕೆ ತಾನು ಬಹಳ ಕೋಪಗೊಂಡಿದ್ದೆ ಎಂಬುದನ್ನು ಕೂಡ ಸ್ಟೀವ್ ಸ್ಮಿತ್ ಹೇಳಿಕೊಂಡಿದ್ದಾರೆ. "ನಾನು ಈವರೆಗೆ 95 ಟೆಸ್ಟ್ ಪಂದ್ಯಗಳನ್ನು ಆಡಿದ್ದೇನೆ. ಇದರಲ್ಲಿ ವಿಕೆಟ್ ಕಳೆದುಕೊಂಡಾಗ ನಾನು ಕೋಪದಿಂದ ಪೆವಿಲಿಯನ್ ಕಡೆಗೆ ಬಹಳ ಕಡಿಮೆ ಬಾರಿ ತೆರಳಿದ್ದೇನೆ. ಈ ಬಾರಿ 'ನಾನು ಏನು ಮಾಡಿಬಿಟ್ಟೆ' ಎಂದು ಬಹಳ ಕೋಪಗೊಂಡಿದ್ದೆ" ಎಂದು ವಿವರಿಸಿದ್ದಾರೆ ಆಸ್ಟ್ರೇಲಿಯಾದ ಹಂಗಾಮಿ ನಾಯಕ ಸ್ಟೀವ್ ಸ್ಮಿತ್. ಪ್ಯಾಟ್ ಕಮ್ಮಿನ್ಸ್ ಅಲಭ್ಯವಾಗಿರುವ ಕಾರಣ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸ್ಟೀವ್ ಸ್ಮಿತ್ ಮುನ್ನಡಸಲಿದ್ದಾರೆ.

ನಾವು ಆತುರಪಟ್ಟೆವು ಎಂದ ಸ್ಟೀವ್ ಸ್ಮಿತ್
"ನಾನು ಬಯಸಿದ ರೀತಿಯಲ್ಲಿ ಆಡಿರಲಿಲ್ಲ. ನನಗಾಗಿ ಅವರು ಫೀಲ್ಡಿಂಗ್ ಸೆಟ್ ಮಾಡಿದ್ದರು. ನಮ್ಮೆಲ್ಲರಿಗೂ ಅವರು ಫೀಲ್ಡಿಂಗ್ ಸಿದ್ಧಪಡಿಸಿದ್ದರು. ಆದರೆ ನಾವು ಅಲ್ಲಿ ಬಹಳ ಆತುರಪಟ್ಟೆವು ಅನಿಸುತ್ತದೆ. ಇದನ್ನು ನಾವು ಮುಂದಿನ ಪಂದ್ಯಕ್ಕೂ ಮುನ್ನ ಚರ್ಚಿಸಬೇಕಿದೆ. ಅವರನ್ನು ಶೀಘ್ರವಾಗಿ ನಿಯಂತ್ರಣಕ್ಕೆ ಪಡೆಯಲು ಸಾಧ್ಯವಾಗಿದ್ದ ಕಾರಣ ನಾವು ತಾಳ್ಮೆಯಿಂದ ವರ್ತಿಸಬೇಕಾಗಿತ್ತು. ನಾನು ಅಷ್ಟು ಆಕ್ರಮಣಕಾರಿಯಾಗಿ ಹಾಗೂ ಅಪಾಯಕಾರಿಯಾಗಿ ಆಡುವ ಅವಶ್ಯಕತೆಯಿರಲಿಲ್ಲ. ನಾವು ಆತುರಪಟ್ಟೆವು" ಎಂದಿದ್ದಾರೆ ಸ್ಟೀವ್ ಸ್ಮಿತ್.

ಅಶ್ವಿನ್ ಜಡೇಜಾ ವಿರುದ್ಧ ಸ್ಟೀವ್ ಸ್ಮಿತ್ ಪ್ಲ್ಯಾನ್!
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಪ್ರದರ್ಶನದ ಬಗ್ಗೆಯೂ ಸ್ಟೀವ್ ಸ್ಮಿತ್ ಮಾತನಾಡಿದ್ದಾರೆ. ಅಶ್ವಿನ್ ಹಾಗೂ ಜಡೇಜಾ ಇಬ್ಬರು ಕೂಡ ಚಾಣಾಕ್ಷ ಬೌಲರ್‌ಗಳಾಗಿದ್ದು ಎದುರಾಳಿಗಳ ಕೈ ಮೇಲಾಗದಂತೆ ಇಬ್ಬರು ಕೂಡ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. "ಜಡೇಜಾ ಹಾಗೂ ಅಶ್ವಿನ್ ಬೌಲಿಂಗ್ ನಡೆಸುತ್ತಿರುವಾಗ ಆಡುವುದು ಸುಲಭವಲ್ಲ. ಅವರು ನಿಮಗಿಂತ ಮೇಲಿದ್ದಾರೆ ಎಂದು ತಿಳಿದ ತಕ್ಷಣವೇ ಅವರು ಒತ್ತಡವನ್ನುಂಡು ಮಾಡಲು ಆರಂಭಿಸುತ್ತಾರೆ ಹಾಗೂ ಅವರಿಗೆ ಬೇಕಾದಂತೆ ಆಡಿಸುತ್ತಾರೆ. ಹಾಗಾಗಿ ನಾವು ಯಾವಾಗ ಒತ್ತಡಕ್ಕೆ ಸಿಲುಕುತ್ತೇವೋ ಆಗ ಸಾಧ್ಯವಾದಷ್ಟು ನಿಧಾನವಾಗಿ ಆಡಬೇಕಿದೆ. ಈ ಮೂಲಕ ಅವರು ಸ್ವಲ್ಪ ಕಾಯುವಂತೆ ಮಾಡಬೇಕು. ಈ ಮೂಲಕ ಕಮ್‌ಬ್ಯಾಕ್ ಮಾಡಬಹುದು" ಎಂದಿದ್ದಾರೆ ಸ್ಟೀವ್ ಸ್ಮಿತ್.

ಒತ್ತಡದಲ್ಲಿ ಆಸ್ಟ್ರೇಲಿಯಾ
ಮೂರನೇ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡ ಒತ್ತಡದಲ್ಲಿರುವುದು ಸ್ಪಷ್ಟವಾಗಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಕೆಲ ಪ್ರಮುಖ ಆಟಗಾರರು ಅಲಭ್ಯವಾಗಿರುವುದು ತಂಡದ ಒತ್ತಡ ಹೆಚ್ಚಿಸಿದೆ. ಅಲ್ಲದೆ ಇಂದೋರ್ ಪಿಚ್ ಕೂಡ ಸ್ಪಿನ್ ಸ್ನೇಹಿ ಆಗಿರುವ ಕಾರಣ ಈಗಾಗಲೇ ಸ್ಪಿನ್ ದಾಳಿಗೆ ನಲುಗಿರುವ ಆಸಿಸ್ ಪಡೆಗೆ ಚಿಂತೆ ಹೆಚ್ಚಿಸಿದೆ. ಎರಡನೇ ಪಂದ್ಯದ ಬಳಿಕ ಸುದೀರ್ಘ ವಿರಾಮದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದ್ದು ಹೊಸ ರಣತಂತ್ರದೊಂದಿಗೆ ಕಣಕ್ಕಿಳಿದು ಎಷ್ಟರ ಮಟ್ಟಿಗೆ ಆಸ್ಟ್ರೇಲಿಯಾ ತಂಡ ಯಶಸ್ಸು ಸಾಧಿಸಲಿದೆ ಎಂಬುದು ಕೂಡ ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications