
ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಹೀನಾಯ ಪ್ರದರ್ಶನ ಎರಡನೇ ಪಂದ್ಯದಲ್ಲಿಯೂ ಮುಂದುವರಿದಿದ್ದು ಭಾರೀ ಸೋಲು ಕಂಡಿದೆ. ಭಾರತದ ಸ್ಪಿನ್ನರ್‌ಗಳ ದಾಳಿಗೆ ಉತ್ತರ ನೀಡಲು ಆಸ್ಟ್ರೇಲಿಯಾದ ದಾಂಡಿಗರು ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಸ್ಪಿನ್ನರ್‌ಗಳ ವಿರುದ್ಧ ಆಸ್ಟ್ರೇಲಿಯಾದ ಆಟಗಾರರು ಪರದಾಡುತ್ತಿರುವುದನ್ನು ಕಂಡು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ತಂಡದ ಬೆಂಬಲಕ್ಕೆ ನಿಂತಿದ್ದಾರೆ.
ಆಸ್ಟ್ರೇಲಿಯಾದ ಆಟಗಾರರಿಗೆ ಯಾವುದೇ ಸಂದರ್ಭದಲ್ಲಾದರೂ ನೆರವಿಗೆ ನಿಲ್ಲಲಲು ತಾನು ಸಿದ್ಧನಿದ್ದೇನೆ ಎಂದಿದ್ದಾರೆ ಮ್ಯಾಥ್ಯೂ ಹೇಡನ್. ಭಾರತೀಯ ಸ್ಪಿನ್ನರ್‌ಗಳನ್ನು ಎದುರಿಸಲು ಹಾಗೂ ಭಾರತದ ಪಿಚ್‌ಗಳನ್ನು ಅರಿಯಲು ನನ್ನಿಂದಾಗುವ ಸಹಾಯಮಾಡಲು ಸಿದ್ಧ ಎಂದಿದ್ದಾರೆ ಮ್ಯಾಥ್ಯೂ ಹೇಡನ್. ಭಾರತದ ವಾತಾವರಣದ ಹೆಚ್ಚಿನ ಅರಿವು ತನಗಿರುವ ಕಾರಣ ಆಸ್ಟ್ರೇಲಿಯಾ ತಂಡಕ್ಕೆ ಲಾಭವಾಗಬಹುದು ಎಂಬ ನಿಟ್ಟಿನಲ್ಲಿ ಹೇಡನ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಮ್ಯಾಥ್ಯೂ ಹೇಡನ್ ಕಾಮೆಂಟೇಟರ್ ಆಗಿ ಸದ್ಯ ಭಾರತದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೀಗಾಗಿ ಭಾರತದ ಪಿಚ್‌ಗಳ ಬಗ್ಗೆ ಆಸಿಸ್ ಆಟಗಾರರಿಗೆ ಸಹಾಯಕ್ಕೆ ಹೇಡನ್ ಉತ್ಸುಕರಾಗಿದ್ದಾರೆ. 2004ರಲ್ಲಿ ಆಸ್ಟ್ರೇಲಿಯಾ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತದ ನೆಲದಲ್ಲಿ ಗೆದ್ದಾಗ ಹೇಡನ್ ತಂಡದ ಭಾಗವಾಗಿದ್ದರು. ಅಲ್ಲದೆ ಹಲವು ಭಾರಿ ಭಾರತ ಪ್ರವಾಸ ಕೈಗೊಂಡ ಅನುಭವ ಕೂಡ ಹೊಂದಿದ್ದಾರೆ.
"ರಾತ್ರಿ ಅಥವಾ ಹಗಲು ಯಾವುದೇ ಹೊತ್ತಿನಲ್ಲಾದರೂ ನೆರವಿಗೆ ನಾನು 100 ಪ್ರತಿಶತ ಸಿದ್ಧನಿದ್ದೇನೆ. ಯಾರೊಂದಿಗೆ ಕೂಡ ನಾನು ಮಾತನಾಡಲು ಸಿದ್ಧನಿದ್ದೇನೆ. ಸಾಕಷ್ಟು ಆಡಿರುವ ಅನುಭವಿ ಹೊಂದಿರುವ ಕಾರಣ ಬೇರೆಯವರಿಗೆ ಅದು ಪರಿಣಾಮ ಬೀರಬಹುದು. ಯಾವ ಹೊತ್ತಿನಲ್ಲಾದರೂ ಯಾವ ವಿಚಾರದ ಬಗ್ಗೆಯೂ ನನ್ನಲ್ಲಿ ಆಟಗಾರರು ಚರ್ಚಿಸಬಹುದು" ಎಂದಿದ್ದಾರೆ ಮ್ಯಾಥ್ಯೂ ಹೇಡನ್.
ಇನ್ನು ಇದೇ ಸಂದರ್ಭದಲ್ಲಿ ರಿಕಿ ಪಾಂಟಿಂಗ್ ಜೊತೆಗೆ ಶ್ರೇಯಸ್ ಐಯ್ಯರ್ ಹೊಂದಿರುವ ಆತ್ಮೀಯ ಸಂಬಂಧ ಹಾಗೂ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲಲು ಮ್ಯಾಥ್ಯೂ ಮೋಟ್ ಬೀರಿರುವ ಪರಿಣಾಮಗಳನ್ನು ಉಲ್ಲೇಖಿಸಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗರ ಅನುಭವವನ್ನು ವಿಶ್ವದಾದ್ಯಂತ ಇರುವ ಕ್ರಿಕೆಟಿಗರು ಬಳಸಿಕೊಂಡಿದ್ದಾರೆ ಎಂದಿದ್ದಾರೆ ಮ್ಯಾಥ್ಯೂ ಹೇಡನ್.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮಾರ್ಚ್ 1ರಿಂದ ಈ ಪಂದ್ಯ ಆರಂಭವಾಗಲಿದೆ. ಹೀಗಾಗಿ ಇತ್ತಂಡಗಳಿಗೂ ಸಾಕಷ್ಟು ಪ್ರಮಾಣದ ವಿಶ್ರಾಂತಿ ಲಭ್ಯವಾಗಿದ್ದು ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಮೊದಲ ಎರಡು ಪಂದ್ಯಗಳಲ್ಲಿ ಮಾಡಿರುವ ತಪ್ಪನ್ನು ತಿದ್ದಿಕೊಳ್ಳಲು ಆಸ್ಟ್ರೇಲಿಯಾ ತಂಡಕ್ಕೆ ಉತ್ತಮ ಅವಕಾಶ ದೊರೆತಿದ್ದು ಇದನ್ನು ಯಾವ ರೀತಿಯಾಗಿ ಆಸಿಸ್ ಪಡೆ ಬಳಸಿಕೊಳ್ಳಲಿದೆ ಎಂಬುದು ಕುತೂಜಹಲ ಮೂಡಿಸಿದೆ.
ಆಸ್ಟ್ರೇಲಿಯಾ ಸ್ಕ್ವಾಡ್: ಪ್ಯಾಟ್ ಕಮ್ಮಿನ್ಸ್ (ನಾಯಕ), ಆಷ್ಟನ್ ಅಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಜಲ್‌ವುಡ್, ಪೀಟರ್ ಹ್ಯಾಂಡ್ಸ್‌ಕಾಂಬ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೈನ್, ನಾಥನ್ ಲಿಯಾನ್, ಲ್ಯಾನ್ಸ್ ಮೋರಿಸ್, ಟಾಡ್ ಮರ್ಫಿ, ಮ್ಯಾಟ್ ರೆನ್ಶಾ, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್, ಮ್ಯಾಥ್ಯೂ ಕನ್ನೇಮನ್
ಟೀಮ್ ಇಂಡಿಯಾ ಸ್ಕ್ಬಾಡ್: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್, ಇಶಾನ್ ಕಿಶನ್, ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್