ವರ್ಷಾಂತ್ಯದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಪ್ರತಿಷ್ಠಿತ ಬಾರ್ಡರ್ -ಗವಾಸ್ಕರ್ ಟ್ರೋಫಿಗಾಗಿ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಬಾರಿ ಉಭಯ ತಂಡಗಳ ನಡುವೆ 5 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಿಂದ 26 ರವರೆಗೆ ಪರ್ತ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತ 2016 ರಿಂದ ಯಾವುದೇ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಕಳೆದುಕೊಂಡಿಲ್ಲ. ಟೀಮ್ ಇಂಡಿಯಾ ಎದುರು ಆಸ್ಟ್ರೇಲಿಯಾ ತನ್ನ ನೆಲದಲ್ಲೇ ಸತತ ಎರಡು ಬಾರಿ ಮುಗ್ಗರಿಸಿದೆ. ಹೀಗಿರುವಾಗ ಈ ಬಾರಿಯೂ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಗುರಿ ಹ್ಯಾಟ್ರಿಕ್ ಸರಣಿ ಗೆಲುವಿನ ಮೇಲಿದೆ.

ಇದೀಗ ಈ ಮೆಗಾ ಸರಣಿಯಲ್ಲಿ ಆಸ್ಟ್ರೇಲಿಯಾ ಗೆಲುವಿನ ಬಗ್ಗೆ ಸ್ಟಾರ್ ಸ್ಪಿನ್ನರ್ ನಾಥನ್ ಲಿಯಾನ್ ಭವಿಷ್ಯ ನುಡಿದಿದ್ದಾರೆ. ಜೊತೆಗೆ ಟೀಮ್ ಇಂಡಿಯಾವನ್ನು ತವರಿನಲ್ಲಿ ಸೋಲಿಸಲು ತಮ್ಮ ತಂಡದ ಬ್ಯಾಟರ್‌ಗಳಿಗೆ ಸಂದೇಶ ಕೊಟ್ಟಿದ್ದಾರೆ.
ವಿಲೋ ಟಾಕ್ ಪಾಡ್‌ಕಾಸ್ಟ್‌ನಲ್ಲಿ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಅಲಿಸ್ಸಾ ಹೀಲಿ ಅವರೊಂದಿಗೆ ಮಾತನಾಡಿರುವ ನಾಥನ್ ಲಿಯಾನ್, 'ನಾವು ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಗೆದ್ದು 10 ವರ್ಷಗಳಾಗಿವೆ. ಭಾರತದಲ್ಲಿ ಇಂಗ್ಲೆಂಡ್ ಆಡುತ್ತಿರುವುದನ್ನು ನೋಡುವಾಗ ಈ ಸರಣಿಯ ಬಗ್ಗೆ ಯೋಚಿಸಿದೆ. ನಾನು ಆಟವನ್ನು ಪ್ರೀತಿಸುವುದರ ಜೊತೆಗೆ ಉತ್ತಮ ಟೆಸ್ಟ್ ಪಂದ್ಯವನ್ನು ವೀಕ್ಷಿಸುತ್ತೇನೆ. ಆದರೆ ನಾನು ಈ ಸರಣಿಯ ಮೇಲೆ ಬಹಳ ಸಮಯದಿಂದ ಕಣ್ಣಿಟ್ಟಿದ್ದೇನೆ. ಈ ಬಾರಿ ಭಾರತ ಎದುರು ಆಸ್ಟ್ರೇಲಿಯಾ 5-0 ಅಂತರದಲ್ಲಿ ಗೆಲ್ಲುತ್ತದೆ ಭವಿಷ್ಯ ನುಡಿದಿದ್ದಾರೆ.
2018-19 ಮತ್ತು 2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ಗೆಲುವುಗಳು ಸೇರಿದಂತೆ ಭಾರತವು ಕಳೆದ 10 ವರ್ಷಗಳಿಂದ ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 2011ರಲ್ಲಿ ಆಸ್ಟ್ರೇಲಿಯಾ ಈ ಸರಣಿಯಲ್ಲಿ ಕೊನೆಯ ಬಾರಿ ಕ್ಲೀನ್ ಸ್ವೀಪ್ ಸಾಧನೆ ಮಾಡಿತ್ತು. ಅಲ್ಲಿಂದಾಚೆಗೆ ಟೀಮ್ ಇಂಡಿಯಾ ಕಾಂಗೂರ ಪಡೆ ಮೇಲೆ ಪ್ರಾಬಲ್ಯ ಸಾಧಿಸಿದೆ.
ಬಾರ್ಡರ್ -ಗವಾಸ್ಕರ್ ಟ್ರೋಫಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸುವುದು ಕಾಂಗೂರು ಪಡೆಗೆ ಸವಾಲಾಗಿದೆ. ಇಂತಹ ಪರಿಸ್ಥಿತಿ ಭಾರತದ ಬೌಲಿಂಗ್ ಲೈನ್‌ಅಪ್ ವಿರುದ್ಧ ಬೃಹತ್ ರನ್ ಕಲೆಹಾಕಲು ಆಸ್ಟ್ರೇಲಿಯಾದ ಬ್ಯಾಟರ್‌ಗಳಿಗೆ ಲಿಯಾನ್ ಸಂದೇಶವನ್ನು ನೀಡಿದ್ದಾರೆ.
'ನಾವು ಬೃಹತ್ ರನ್ ಗಳಿಸಬೇಕು. ಸ್ಟೀವ್ ಸ್ಮಿತ್, ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಟ್ರಾವಿಸ್ ಹೆಡ್ ಅವರಂತಹ ಶತಕಗಳನ್ನು ಬಾರಿಸುವ ಪ್ರತಿಭಾವಂತ ಆಟಗಾರರು ನಮಗೆ ಬೇಕು. ಅವರೆಲ್ಲರೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು. ನನಗೆ ಪ್ರತಿ ಬ್ಯಾಟರ್‌ಯಿಂದ 101 ಅಥವಾ 107 ರನ್ ಬೇಡ, 180 ಮತ್ತು 200 ರನ್ ಬೇಕು ಎಂದು ಕಾಂಗೂರು ಪಡೆಯ ಉತ್ಸಾಹವನ್ನು ಹೆಚ್ಚಿಸಿದ್ದಾರೆ.