ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕದ ಸರದಾರನಾಗಲಿದ್ದಾರೆ ಚೇತೇಶ್ವರ್ ಪೂಜಾರ: ಅಪರೂಪದ ಸಾಧಕರ ಪಟ್ಟಿಗೆ ಸೇರಲು ಸಜ್ಜು

ಟೀಮ್ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ್ ಪೂಜಾರ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ವಿಶೇಷ ಸಾಧನೆ ಮಾಡಲಿದ್ದಾರೆ. ಫೆಬ್ರವರಿ 17ರಿಂದ ದೆಹಲಿಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಭಾರತದ ಪರವಾಗಿ ಅಪರೂಪದ ಸಾಧನೆ ಮಾಡಿದ ಆಟಗಾರರ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ ಚೇತೇಶ್ವರ್ ಪೂಜಾರ.
ಭಾರತದ ಅನುಭವಿ ಆಟಗಾರ ಪೂಜಾರ ಮುಂದಿನ ಪಂದ್ಯದಲ್ಲಿ ಆಡುವ ಮೂಲಕ 100ನೇ ಟೆಸ್ಟ್ ಪಂದ್ಯದಲ್ಲಿ ಆಡಿದಂತಾಗುತ್ತದೆ. ಈ ಮೂಲಕ ಈ ಸಾಧನೆ ಮಾಡಿದ ಭಾರತದ 13ನೇ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಈಗಿನ ಭಾರತ ತಂಡದಲ್ಲಿರುವ ಆಟಗಾರರ ಪೈಕಿ ಈ ಸಾಧನೆ ಮಾಡಿದ ಕೇವಲ ಎರಡನೇ ಆಟಗಾರನಾಗಿದ್ದಾರೆ. ವಿರಾಟ್ ಕೊಹ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ 100ನೇ ಟೆಸ್ಟ್ ಪಂದ್ಯವನ್ನಾಡಿದ್ದರು.

ಆಸ್ಟ್ರೇಲಿಯಾ ವಿರುದ್ಧವೇ ಪದಾರ್ಪಣೆ ಮಾಡಿದ್ದ ಪೂಜಾರ
ಕುತೂಹಲಕಾರಿ ಅಂಶವೆಂದರೆ ಚೇತೇಶ್ವರ್ ಪೂಜಾರ 2010ರಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಟೆಸ್ಟ್ ಮಾದರಿಗೆ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 207 ರನ್‌ಗಳನ್ನು ಬೆನ್ನಟ್ಟಿದ್ದಾಗ ರಾಹುಲ್ ದ್ರಾವಿಡ್ ಸ್ಥಾನದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ ಪೂಜಾರ 72 ರನ್‌ಗಳಿಸಿದ್ದರು. ಈ ಪಂದ್ಯವನ್ನು ಗೆದ್ದ ಭಾರತ ತಂಡ ಸರಣಿಯಲ್ಲಿ 2-0 ಅಂತರದಿಂದ ಮೇಲುಗೈ ಸಾಧಿಸಿತ್ತು.

ಆಸಿಸ್ ವಿರುದ್ಧ ಅದ್ಭುತ ದಾಖಲೆ
ತಮ್ಮ ಪದಾರ್ಪಣಾ ಪಂದ್ಯದ ಬಳಿಕ ಚೇತೇಶ್ವರ್ ಪೂಜಾರ ಈವರೆಗೆ ಒಟ್ಟು 20 ಟೆಸ್ಟ್ ಪಂದ್ಯಗಳನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದ್ದಾರೆ. ಭಾರತದ ಕಠಿಣ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ತಂಡದ ವಿರುದ್ಧ ಈ ಅವಧಿಯಲ್ಲಿ ಪೂಜಾರ ಅದ್ಭುತ ಪ್ರದರ್ಶನ ನೀಡಿದ್ದು ಉತ್ತಮ ದಾಖಲೆಗಳನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಒಟ್ಟು 21 ಟೆಸ್ಟ್ ಪಂದ್ಯಗಳಲ್ಲಿ ಪೂಜಾರ 52.77ರ ಸರಾಸರಿಯಲ್ಲಿ 1900 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ ಐದು ಶತಕ ಹಾಗೂ 10 ಅರ್ಧ ಶತಕ ಸೇರಿದೆ.

ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದ ಪೂಜಾರ
2018-19ನೇ ಸಾಲಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ಪೂಜಾರ ಅತ್ಯದ್ಭುತ ಫಾರ್ಮ್ ಪ್ರದರ್ಶಿಸಿದ್ದರು. 4 ಪಂದ್ಯಗಳಲ್ಲಿ ಪೂಜಾರ ಬರೊಬ್ಬರಿ 521 ರನ್‌ಗಳನ್ನು ಸಿಡಿಸಿದ್ದು ಈ ಮೂಲಕ ಭಾರತ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿಯನ್ನು ಗೆದ್ದ ಸಾಧನೆ ಮಾಡಿತ್ತು. ಅದಾದ ಎರಡು ವರ್ಷದ ಬಳಿಕ ಭಾರತ ಮತ್ತೊಮ್ಮೆ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಂಡಿದ್ದಾಗ ಪೂಜಾರ ಬ್ಯಾಟ್‌ನಿಂದ ದೊಡ್ಡ ಮೊತ್ತದ ರನ್ ಹರಿದು ಬಾರದಿದ್ದರೂ ಕೆಚ್ಚೆದೆಯ ಪ್ರದರ್ಶನ ಕ್ರಿಕೆಟ್ ಅಭಿಮಾನಗಳ ಹೃದಯ ಗೆದ್ದಿತ್ತು. ಈ ಸರಣಿಯಲ್ಲಿಯೂ ಭಾರತ ಗೆಲುವು ಸಾಧಿಸುವ ಮೂಲಕ ಸತತ ಎರಡನೇ ಟೆಸ್ಟ್ ಸರಣಿಯನ್ನು ಆಸ್ಟ್ರೇಲಿಯಾದ ನೆಲದಲ್ಲಿದಲ್ಲಿಯೇ ಗೆದ್ದ ಸಾಧನೆ ಮಾಡಿದೆ.
ಒಟ್ಟಾರೆಯಾಗಿ ಟೆಸ್ಟ್ ಮಾದರಿಯಲ್ಲಿ ಪೂಜಾರ ಅದ್ಭುತ ಅಂಕಿಅಂಶಗಳನ್ನು ಹೊಂದಿದ್ದಾರೆ. 99 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 44.15ರ ಸರಾಸರಿಯಲ್ಲಿ 7021 ರನ್‌ಗಳಿಸಿದ್ದಾರೆ. 19 ಶತಕ ಹಾಗೂ 34 ಅರ್ಧ ಶತಕಗಳು ಪೂಜಾರ ಬ್ಯಾಟ್‌ನಿಂದ ಸಿಡಿದಿವೆ.

ತಂಡದಿಂದ ಹೊರಬಿದ್ದು ಕಮ್‌ಬ್ಯಾಕ್ ಮಾಡಿದ ಅನುಭವಿ
ಇನ್ನು ಚೇತೇಶ್ವರ್ ಪೂಜಾರ ಕಳೆದ ಕೆಲ ವರ್ಷಗಳಿಂದೀಚೆಗೆ ಟೆಸ್ಟ್ ಮಾದರಿಯಲ್ಲಿ ಕಳೆಗುಂದಿದಂತೆ ಕಂಡುಬಂದಿದ್ದರು. ಹೀಗಾಗಿ ಕಳೆದ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಸರಣಿಯನ್ನು ಸೋತ ಬಳಿಕ ಮತ್ತೋರ್ವ ಅನುಭವಿ ಆಟಗಾರ ಅಜಿಂಕ್ಯಾ ರಹಾನೆ ಜೊತೆಗೆ ತಂಡದಿಂದ ಹೊರಬಿದ್ದರು. ಆದರೆ ಕೌಂಟಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ತಂಡದಲ್ಲಿ ಮತ್ತೆ ಸ್ಥಾನಗಳಿಸುವಲ್ಲಿ ಪೂಜಾರ ಯಶಸ್ವಿಯಾಗಿದ್ದಾರೆ. ಇನ್ನು ಕಮ್‌ಬ್ಯಾಕ್ ಮಾಡಿದ ಬಳಿಕ ಪೂಜಾರ ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆಗಳು ಕೂಡ ಮಾಡಿಕೊಂಡಿದ್ದು ಹಿಂದಿಗಿಂತ ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಿದ್ದು ಯಶಸ್ಸು ಸಾಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications