
ನವದೆಹಲಿ, ಮೇ 16: ಕೊರೊನಾವೈರಸ್‌ನಿಂದ ಕ್ರೀಡಾ ಸ್ಪರ್ಧೆಗಳೇ ನಿಲುಗಡೆಯಾಗಿತ್ತು. ಲಾಕ್‌ಡೌನ್ ಸ್ವಲ್ಪ ಸಡಿಲಿಕೆ ಆಗುತ್ತಿರುವುದರಿಂದ ಈಗ ಕೊರೊನಾ ನಂತರದ ದಿನಗಳ ಬಗ್ಗೆ ಜನ ಮಾತನಾಡಲಾರಂಭಿಸಿದ್ದಾರೆ. ಕ್ರಿಕೆಟ್‌ನಲ್ಲಿ ಬೌಲರ್‌ಗಳಿಗೆ ಬೆವರು ಮತ್ತು ಎಂಜಲು ಬಳಸಿ ಚೆಂಡು ಹೊಳೆಯುವಂತೆ ಮಾಡಲು ಅನುಮತಿ ನೀಡಬೇಕೆ ಬೇಡವೇ ಎಂಬ ಬಗ್ಗೆಯೂ ಚರ್ಚೆಗಳಾಗುತ್ತಿದೆ.
ಕ್ರಿಕೆಟ್ ಆಟದ ವೇಳೆ ಬೌಲರ್‌ಗಳು ಎಂಜಲು ಬಳಸುವುದಕ್ಕೆ ಪರವಾಗಿ ಮತ್ತು ವಿರೋಧವಾಗಿ ಯಾರೇ ಮಾತನಾಡುತ್ತಿರಲಿ; ಭಾರತದ ಮಾಜಿ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ ಮಾತ್ರ ಇದಕ್ಕೆ ನಕಾರ ಸೂಚಿಸಿದ್ದಾರೆ. ಚೆಂಡು ಹೊಳೆಯವಂತೆ ಮಾಡಲು ಬಳಸುವ ಇಂಥ ಕ್ರಮಗಳು ನಿಷೇಧವಾಗಬೇಕು ಎಂದು ಎಂಎಸ್‌ಕೆ ಹೇಳಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ಪ್ರಸಾದ್, 'ಬಾಹ್ಯ ಮೂಲಗಳನ್ನು ಬಳಸಿ ಚೆಂಡು ಹೊಳೆಯುವಂತೆ ಮಾಡಕೂಡದು ಎಂದು ಆಟದ ನಿಯಮ ಹೇಳುತ್ತದೆ. ಹಾಗೆ ಮಾಡಿದರೆ ಅದನ್ನು ಚೆಂಡು ವಿರೂಪವೆಂದು ಪರಿಗಣಿಸಲಾಗುತ್ತದೆ. ಹೀಗಾಗಿಯೇ ಬೌಲರ್‌ಗಳು ಬೆವರು ಅಥವಾ ಎಂಜಲನ್ನು ಆಟದ ವೇಳೆ ಚೆಂಡಿಗೆ ಬಳಸುತ್ತಿದ್ದರು,' ಎಂದರು.
'ಆದರೆ ಕೊರೊನಾವೈರಸ್‌ನ ಇಂಥ ಪರಿಸ್ಥಿತಿಯಲ್ಲಿ ಬೆವರು ಮತ್ತು ಎಂಜಲನ್ನು ಬಳಸುವ ಬೌಲರ್‌ಗಳನ್ನು ಬ್ಯಾನ್ ಮಾಡಬೇಕು. ಚೆಂಡು ಹೊಳೆಯುವಂತೆ, ಸ್ವಿಂಗ್ ಆಗುವಂತೆ ಮಾಡಲು ಬೌಲರ್‌ಗಳಿಗೆ ಇದಕ್ಕೆ ಬೇರೊಂದು ಮಾರ್ಗವನ್ನು ಐಸಿಸಿ ಸೂಚಿಸಬೇಕು,' ಎಂದು ಪ್ರಸಾದ್ ಹೇಳಿದ್ದಾರೆ.