
ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧಧ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೆಂಚೂರಿಯನ್‌ನ ಸೂಪರ್ ಸ್ಪೋರ್ಟ್ ಪಾರ್ಕ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ಫಿಲ್ಡಿಂಗ್ ನಡೆಸುತ್ತಿದೆ. ಆದರೆ ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಆಟಗಾರರು ತಮ್ಮ ತೋಳಿಗೆ ಕಪ್ಪುಪಟ್ಟಿಯನ್ನು ಧರಿಸಿ ಕಣಕ್ಕಿಳಿದಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗರು ಕಪ್ಪು ಪಟ್ಟಿಯನ್ನು ಧರಿಸಿ ಮೈದಾನಕ್ಕೆ ಇಳಿಯಲು ಕಾರಣವಿದೆ. ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ದಕ್ಷಿಣ ಆಫ್ರಿಕಾದ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಅವರು ಇಂದು ನಿಧನರಾಗಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿನ ವರ್ಣಭೇದ ನೀತಿಯ ವಿರುದ್ಧ ಹೋರಾಡಿದವರ ಪೈಕಿ ಆರ್ಚ್ ಬಿಷಪ್ ಡೆಸ್ಮಂಡ್ ಟುಟು ಕೂಡ ಒಬ್ಬರಾಗಿದ್ದಾರೆ. ಹೀಗಾಗಿ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಟಗಾರರು ಕಪ್ಪುಪಟ್ಟಿಯೊಂದಿಗೆ ಕಣಕ್ಕಿಳಿದಿದ್ದಾರೆ.
ಸಾಮಾಜಿಕ ಹೋರಾಟ, ಕಪ್ಪುವರ್ಣೀಯರ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ಟುಟು ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಅವರು 1984ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕಾರ ಪಡೆದುಕೊಂಡಿದ್ದರು. ವರ್ಣಭೇದ ನೀತಿ ಅಂತ್ಯವಾದರೂ ದಕ್ಷಿಣ ಆಫ್ರಿಕಾದಲ್ಲಿ ಆಡಳಿತದಲ್ಲಿನ ಅಸಮಾನತೆ, ಅನ್ಯಾಯಗಳನ್ನು ಕಟುವಾಗಿ ಟುಟು ಟೀಕಿಸಿದ್ದರು.
ಇನ್ನು ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆ. ಭೋಜನ ವಿರಾಮಕ್ಕೆ ಮುನ್ನ ಭಾರತ ಯಾವುದೇ ವಿಕೆಟ್ ಕಳೆದುಕೊಳ್ಳದೆ 83 ರನ್‌ಗಳನ್ನು ಗಳಿಸಿದೆ. ಭಾರತದ ಆರಂಭಿಕ ಆಟಗಾರರಿಬ್ಬರು ಕೂಡ ಉತ್ತಮ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಭೋಜನ ವಿರಾಮದ ವೇಳೆಗೆ ಮಯಾಂಕ್ ಅಗರ್ವಾಲ್ 46 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರೆ ಕೆಎಲ್ ರಾಹುಲ್ 29 ರನ್‌ಗಳನ್ನು ಗಳಿಸಿದ್ದರು.
ಭಾರತ ಆಡುವ ಬಳಗ: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಬ್ ಪಂತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್
ಬೆಂಚ್: ಉಮೇಶ್ ಯಾದವ್, ವೃದ್ಧಿಮಾನ್ ಸಹಾ, ಜಯಂತ್ ಯಾದವ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್, ಇಶಾಂತ್ ಶರ್ಮಾ
ದಕ್ಷಿಣ ಆಫ್ರಿಕಾ ಆಡುವ XI : ಡೀನ್ ಎಲ್ಗರ್ (ನಾಯಕ), ಏಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ
ಬೆಂಚ್: ಡುವಾನ್ನೆ ಒಲಿವಿಯರ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂಡಾ ಮಗಾಲಾ, ಜಾರ್ಜ್ ಲಿಂಡೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ವೆರ್ರೆನ್, ಸರೆಲ್ ಎರ್ವೀ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್