Bangladesh Premier League 2023: ಸಿಲ್ಹೆಟ್ ಸ್ಟ್ರೈಕರ್ಸ್ ಮಣಿಸಿ 4ನೇ ಬಾರಿ ಚಾಂಪಿಯನ್ ಆದ ಕೊಮಿಲ್ಲಾ ವಿಕ್ಟೋರಿಯನ್ಸ್

ಬಾಂಗ್ಲಾದೇಶ ಪ್ರೀಮಿಯರ್ ಲೀಗ್ 2023ರ ಆವೃತ್ತಿಯಲ್ಲಿ ಕೊಮಿಲ್ಲಾ ವಿಕ್ಟೋರಿಯನ್ಸ್ ಚಾಂಪಿಯನ್ ಆಗಿದ್ದಾರೆ. ಫೆಬ್ರವರಿ 16, ಗುರುವಾರದಂದು ನಡೆದ ಫೈನಲ್ ಪಂದ್ಯದಲ್ಲಿ ಸಿಲ್ಹೆಟ್ ಸ್ಟ್ರೈಕರ್ಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಚಾಂಪಿಯನ್ ಎನಿಸಿಕೊಂಡರು.
ಕಳೆದ ಆವೃತ್ತಿಯಲ್ಲಿ ಕೂಡ ಕಪ್ ಗೆದ್ದಿದ್ದ ಕೊಮಿಲ್ಲಾ ವಿಕ್ಟೋರಿಯನ್ಸ್ ಎರಡನೇ ಬಾರಿಗೆ ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಲ್ಲಿ ಅವರು ಒಟ್ಟು 4 ಬಾರಿ ಕಪ್ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಸಿಲ್ಹೆಟ್ ಸ್ಟ್ರೈಕರ್ಸ್ ಉತ್ತಮ ಮೊತ್ತ ಕಲೆಹಾಕಿತು.
ಆರಂಭದಲ್ಲಿ ಟೊವ್ಹಿದ್ ಹ್ರಿದೋಯ್ ಶೂನ್ಯಕ್ಕೆ ಔಟಾದರೆ, ನಾಯಕ ಮುಷ್ರಫೆ ಮೊರ್‍ತಾಝ 1 ರನ್‌ಗಳಿಗೆ ಔಟಾಗುವ ಮೂಲಕ ಫೈನಲ್ ಪಂದ್ಯದಲ್ಲಿ ಮುಗ್ಗರಿಸಿದರು. ಮುಶ್ಫೀಕರ್ ರಹೀಮ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಅರ್ಧಶತಕ ಗಳಿಸುವ ಮೂಲಕ ಸಿಲ್ಹೆಟ್ ತಂಡಕ್ಕೆ ಆಸರೆಯಾದರು.
ನಜ್ಮುಲ್ ಹೊಸೈನ್ ಶಾಂಟೋ 45 ಎಸೆತಗಳಲ್ಲಿ 9 ಬೌಂಡರಿ ಒಂದು ಸಿಕ್ಸರ್ ಸಹಿತ 64 ರನ್ ಗಳಸಿದರೆ. ಮುಶ್ಫೀಕರ್ ರಹೀಮ್ 48 ಎಸೆತಗಳಲ್ಲಿ 5 ಬೌಂಡರಿ ಮೂರು ಸಿಕ್ಸರ್ ಸಹಿತ 74 ರನ್ ಗಳಿಸಿದರು. ಅಂತಿಮವಾಗಿ ಸಿಲ್ಹೆಟ್ ಸ್ಟ್ರೈಕರ್ಸ್ ತಂಡ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 175 ರನ್‌ಗಳನ್ನು ಗಳಿಸಿತು.

ಸುಲಭವಾಗಿ ಜಯ ಸಾಧಿಸಿದ ಕೊಮಿಲ್ಲಾ ವಿಕ್ಟೋರಿಯನ್ಸ್
175 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತಿದ ಕೊಮಿಲ್ಲಾ ವಿಕ್ಟೋರಿಯನ್ಸ್ ತಂಡಕ್ಕೆ ಆರಂಭಿಕ ಆಟಗಾರ ಲಿಟ್ಟನ್ ದಾಸ್ ಆಸರೆಯಾದರು. 39 ಎಸೆತಗಳಲ್ಲಿ 7 ಬೌಂಡರಿ ಒಂದು ಸಿಕ್ಸರ್ ಸಹಿತ 55 ರನ್ ಗಳಿಸಿ ಉತ್ತಮ ಆರಂಭ ನೀಡಿದರು.
ಸುನಿಲ್ ನರೈನ್ 5 ಎಸೆತಗಳಲ್ಲಿ 10 ರನ್ ಗಳಿಸಿ ಔಟಾದರು. ನಾಯಕ ಇಮ್ರುಲ್ ಕೇಸ್ 2 ರನ್ ಗಳಿಸಿ ಔಟಾದರು. ನಂತರ ಬಂದ ಜಾನ್ಸನ್ ಚಾರ್ಲ್ಸ್ 52 ಎಸೆತಗಳಲ್ಲಿ 7 ಬೌಂಡರಿ 5 ಭರ್ಜರಿ ಸಿಕ್ಸರ್ ನೆರವಿನಿಂದ ಸವಾಲಿನ ಮೊತ್ತ ಬೆನ್ನತ್ತುವಲ್ಲಿ ಯಶಸ್ವಿಯಾದರು. ಆಲ್‌ರೌಂಡರ್ ಮೊಯಿನ್ ಅಲಿ 17 ಎಸೆತಗಳಲ್ಲಿ 25 ರನ್ ಗಳಿಸಿ ತಂಡಕ್ಕೆ ಆಸರೆಯಾದರು.
19.2 ಓವರ್ ಗಳಲ್ಲಿ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿದ ಕೊಮಿಲ್ಲಾ ವಿಕ್ಟೋರಿಯನ್ಸ್ ನಾಲ್ಕನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಜಾನ್ಸನ್ ಚಾರ್ಲ್ಸ್ ಅತ್ಯುತ್ತಮ ಇನ್ನಿಂಗ್ಸ್‌ಗಾಗಿ ಪಂದ್ಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರೆ, ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಜ್ಮುಲ್ ಹೊಸೈನ್ ಶಾಂಟೋ ಸರಣಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications