ಕ್ರಿಕೆಟ್ ಅಂಗಳದಲ್ಲಿ ಮತ್ತೊಂದು ಅಪಘಾತ ನಡೆದಿದೆ. ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (ಬಿಪಿಎಲ್) ನಲ್ಲಿ ಢಾಕಾ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ ಶನಿವಾರ ನಿಧನರಾಗಿದ್ದಾರೆ. ಮೈದಾನದಲ್ಲಿ ಕೋಚ್ ಕೆಲವೇ ನಿಮಿಷಗಳಲ್ಲಿ ಕುಸಿದು ಬಿದ್ದರು. ಇವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯದಲ್ಲಿ ಇವರು ಸಾವನ್ನಪ್ಪಿದ್ದಾರೆ. ಮೃತ ಕೋಚ್‌ಗೆ 56 ವರ್ಷ ವಯಸ್ಸಾಗಿತ್ತು.
ಕುಸಿದು ಬಿದ್ದ ತಕ್ಷಣ ಕೋಚ್ ಮಹಬೂಬ್ ಅಲಿ ಝಾಕಿ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಯಿತು. ಇವರನ್ನು ತಪಾಸಣೆ ನಡೆಸಿದ ವೈದ್ಯರು ಇವರು ಸಾವನ್ನಪ್ಪಿದ್ದಾಗಿ ಘೋಷಿಸಿದರು. ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ವೈದ್ಯ ಕೋಚ್ ಸಾವನ್ನು ದೃಢಪಡಿಸಿದ್ದಾರೆ. ಈ ಘಟನೆ ಮೈದಾನದಲ್ಲಿ ನೆರೆದಿದ್ದ ಎಲ್ಲರಿಗೂ ನೋವು ಉಂಟು ಮಾಡಿದೆ.

ಮಾಹಿತಿಗಳ ಪ್ರಕಾರ ಸಹಾಯಕ ಕೋಚ್ ಮಹಬೂಬ್ ಅಲಿ ಝಾಕಿ ಅವರಿಗೆ ಈ ಮೊದಲು ಯಾವುದೇ ಆರೋಗ್ಯ ಸಮಸ್ಯೆ ಇದ್ದಿರಲಿಲ್ಲ. ಈ ಸುದ್ದಿ ಎಲ್ಲ ಕಡೆ ಪಸರಿಸುತ್ತಿದ್ದಂತೆ ಬಿಬಿಎಲ್‌ನಲ್ಲಿ ಭಾಗವಹಿಸುವ ಆಟಗಾರರು ಮೈದಾನದತ್ತ ದೌಡಾಯಿಸಿದರು.
ಭಾರತದಲ್ಲಿ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ತಸ್ಕಿನ್ ಅಹ್ಮದ್ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆಗಳು ಎದ್ದಾಗ ಮಹಬೂಬ್ ಅಲಿ ಝಾಕಿ ಅವರ ಹೆಸರು ಮುನ್ನೆಲೆಗೆ ಬಂದಿತು. ಇವರು ಅಹ್ಮದ್ ಅವರೊಂದಿಗೆ ಕೆಲಸ ಮಾಡಿದ್ದರು. ಮಹಬೂಬ್ ಅಲಿ ಝಾಕಿ ಸಾವಿಗೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಸಹ ಸಂತಾಪ ಸೂಚಿಸಿದೆ. ಮಹಬೂಬ್ ಅಲಿ ಝಾಕಿ ಬಾಂಗ್ಲಾದೇಶದ ಪರ ಆಡಿ ಸೈ ಎನಿಸಿಕೊಂಡಿರುವ ಆಟಗಾರ. ಇವರು ದೇಶೀಯ ಟೂರ್ನಿಗಳಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಮಹಬೂಬ್ ಅಲಿ ಝಾಕಿ ನಿವೃತ್ತರಾದ ಬಳಿಕ ಕೋಚ್ ಆಗಿ ಕಾರ್ಯವನ್ನು ನಿರ್ವಹಿಸಿದರು. 2008ರಿಂದ ಇವರು ಕೋಚಿಂಗ್ ಕ್ಷೇತ್ರದಲ್ಲಿ ಬೆವರು ಹರಿಸುತ್ತಿದ್ದಾರೆ. ಇವರು ಬಾಂಗ್ಲಾದೇಶದಲ್ಲಿ ವೇಗದ ಬೌಲರ್‌ಗಳಿಗೆ ನೆರವು ನೀಡಿದ್ದರು. ಇವರು 2020ರಲ್ಲಿ ಐಸಿಸಿ ಅಂಡರ್ 19 ವಿಶ್ವಕಪ್ ಗೆದ್ದ ಬಾಂಗ್ಲಾದೇಶ ತಂಡದ ಸದಸ್ಯರಾಗಿದ್ದಾರೆ.