ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಬುಧವಾರ (ಜನವರಿ 22) ನಡೆಯಲಿರುವ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕೋಚ್ ಬ್ರೆಂಡನ್ ಮೆಕಲಮ್ ತಮ್ಮ ಹೇಳಿಕೆಯ ಮೂಲಕ ಸುದ್ದಿಯಾಗಿದ್ದಾರೆ. ಭಾರತ ವಿರುದ್ಧ ಸೀಮಿತ ಓವರ್‌ಗಳ ಸರಣಿಯಲ್ಲಿ ತಮ್ಮ ತಂಡವು ಅತ್ಯಂತ ಎಚ್ಚರಿಕೆಯಿಂದ ಆಡಲಿದೆ ಎಂದು ಮೆಕಲಮ್ ಹೇಳುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ.
ಮೊದಲ ಟಿ20 ಪಂದ್ಯಕ್ಕೆ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಈಡನ್ ಗಾರ್ಡನ್ಸ್‌ನಲ್ಲಿ ಅಭ್ಯಾಸ ನಡೆಸುತ್ತಿವೆ. ಇದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿರುವ ಬ್ರೆಂಡನ್ ಮೆಕಲಮ್ ಟೀಮ್ ಇಂಡಿಯಾವನ್ನು ಶ್ಲಾಘಿಸಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ಮೆಕಲಮ್ ಮೊದಲ ಬಾರಿಗೆ ಸೀಮಿತ ಓವರ್‌ಗಳ ಸ್ವರೂಪದಲ್ಲಿ ಇಂಗ್ಲೆಂಡ್ ತಂಡಕ್ಕೆ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಕೋಲ್ಕತ್ತಾದಲ್ಲಿ ಮಾತನಾಡಿದ ಮೆಕಲಮ್, 'ಈ ಪ್ರವಾಸವು ಕಷ್ಟಕರವಾಗಿರುತ್ತದೆ ಎಂದು ನನಗೆ ತಿಳಿದಿದೆ. ನಾವು ಬಲಿಷ್ಠ ಭಾರತ ತಂಡವನ್ನು ಎದುರಿಸುತ್ತಿದ್ದೇವೆ. ಆದರೆ ನಮ್ಮ ತಂಡವು ಎಚ್ಚರಿಕೆಯ ಶೈಲಿಯ ಕ್ರಿಕೆಟ್ ಆಡುತ್ತದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಫೆಬ್ರವರಿ 19 ರಿಂದ ಪಾಕಿಸ್ತಾನ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಭಾರತ ವಿರುದ್ಧ ಸರಣಿ ಅತ್ಯಂತ ಮಹತ್ವದ್ದಾಗಿದೆ. ಇದೊಂದು ಉತ್ತಮ ಮತ್ತು ರೋಚಕ ಸರಣಿಯಾಗಲಿದೆ ಎಂದು ಮೆಕಲಮ್ ತಿಳಿಸಿದ್ದಾರೆ.
ಬ್ರೆಂಡನ್ ಮೆಕಲಮ್ ಕೋಚಿಂಗ್ ಅವಧಿಯಲ್ಲಿ ಇಂಗ್ಲೆಂಡ್ ಭರ್ಜರಿ ಪ್ರದರ್ಶನ ನೀಡುತ್ತಿದೆ. ಮೆಕಲಮ್ ಮೇ 2022 ರಿಂದ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ತಂಡವು ಅನೇಕ ಯಶಸ್ಸನ್ನು ಸಾಧಿಸಿದೆ. ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ ವಿಶ್ವದ ಅಪಾಯಕಾರಿ ಬ್ಯಾಟರ್‌ಗಳಲ್ಲಿ ಒಬ್ಬರು.
ಬಿರುಸಿನ ಬ್ಯಾಟಿಂಗ್‌ಗೆ ಹೆರುವಾಸಿಯಾಗರುವ ಬ್ರೆಂಡನ್ ಮೆಕಲಮ್ ಅಷ್ಟೇ ವೇಗವಾಗಿ ರನ್ ಗಳಿಸುತ್ತಿದ್ದರು. ಅವರ ಕೋಚಿಂಗ್‌ನಲ್ಲಿ ಇಂಗ್ಲೆಂಡ್ ತಂಡವು ಅದೇ ಮನೋಭಾವವನ್ನು ಅಳವಡಿಸಿಕೊಂಡಿದೆ. ಟಿ 20 ನಿಂದ ಟೆಸ್ಟ್ ಫಾರ್ಮ್ಯಾಟ್‌ಗಳವರೆಗೆ ಭಯವಿಲ್ಲದೆ ಬ್ಯಾಟಿಂಗ್ ಆಡಲು ಪ್ರಾರಂಭಿಸಿದೆ. ಮೆಕಲಮ್ ಅವರ ಅಡ್ಡಹೆಸರು ಬ್ಯಾಡ್ಜ್. ಹೀಗಾಗಿ ಅವರ ಬ್ಯಾಟಿಂಗ್ ವಿಧಾನವನ್ನು 'ಬೇಸ್ಬಾಲ್' ಎಂದು ಕರೆಯಲಾಗುತ್ತದೆ.
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ಅಕ್ಸರ್ ಪಟೇಲ್ (ಉಪನಾಯಕ), ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ , ರವಿ ಬಿಷ್ಣೋಯ್, ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್ (ವಿಕೆಟ್ ಕೀಪರ್).
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್ (ನಾಯಕ/ವಿಕೆಟ್ ಕೀಪರ್), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಜಾಕೋಬ್ ಬೆಥೆಲ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಜೇಮಿ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್‌ಸ್ಟೋನ್, ಆದಿಲ್ ರಶೀದ್, ಶಾಕಿಬ್ ಸಲ್ಮಾದ್ , ಮಾರ್ಕ್ ವುಡ್.