ಆಗಸ್ಟ್ 18 ಭಾನುವಾರ, ಕಳೆದ ಎರಡು ವರ್ಷಗಳಿಂದ ಕರ್ನಾಟಕದ ಯುವ ಕ್ರಿಕೆಟಿಗ ಮನೋಜ್ ಭಾಂಡಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿದ್ದಾರೆ. ಆದರೆ ಇಲ್ಲಿವರೆಗೂ ಫ್ರಾಂಚೈಸಿ ಮನೋಜ್ ಅವರಿಗೆ ಆಡಲು ಒಂದೇ ಒಂದು ಅವಕಾಶ ನೀಡಿಲ್ಲ.
ಮನೋಜ್‌ಗೆ ಆಡುವ ಸಾಮರ್ಥ್ಯವಿದ್ದರೂ ಅವಕಾಶ ನೀಡದೆ, ಕೇವಲ ಹಬ್ಬಗಳಿಗೆ ಕನ್ನಡದಲ್ಲಿ ಶುಭ ಕೋರಲು ತಂಡದಲ್ಲಿ ಇಟ್ಟಿಕೊಂಡಿದ್ದಾರೆ ಎಂದು ಆರ್‌ಸಿಬಿ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆರ್‌ಸಿಬಿ ಫ್ರಾಂಚೈಸಿ ಕಣ್ಣು ಬಿಟ್ಟು ನೋಡುವಂತ ಪ್ರದರ್ಶನವನ್ನು ಮನೋಜ್ ಕೊಟ್ಟಿದ್ದಾರೆ.

2024 ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮನೋಜ್ ಮನಮೋಹಕ ಇನ್ನಿಂಗ್ಸ್ ಆಡಿದ್ದಾರೆ. ಮೈಸೂರು ವಾರಿಯರ್ಸ್ ತಂಡದ ಪರ ಅವರು ಸ್ಪೋಟಕವಾಗಿ ಆಡುತ್ತಿದ್ದಾರೆ. ಗುರುವಾರ ಶಿವಮೊಗ್ಗ ವಿರುದ್ಧ 16 ಎಸೆತಗಳಲ್ಲಿ ಅಜೇಯ 42 ರನ್ ಗಳಿದರೆ, ಶುಕ್ರವಾರ ಬೆಂಗಳೂರು ವಿರುದ್ದ ಕೂಡ 33 ಎಸೆತಗಳಲ್ಲಿ ಔಟಾಗದೆ 58 ರನ್ ಬಾರಿಸಿದ್ದಾರೆ. ಈ ಎರಡೂ ಪಂದ್ಯಗಳಲ್ಲಿ ಮನೋಜ್ ಫಿನಿಶರ್ ಪಾತ್ರ ನಿರ್ವಹಿಸಿರುವುದು ವಿಶೇಷವಾಗಿದೆ.
ಈ ಎರಡು ಇನ್ನಿಂಗ್ಸ್‌ನಲ್ಲಿ ಮನೋಜ್ ಅಬ್ಬರ ನೋಡಿದ ಅಭಿಮಾನಿಗಳು ಆರ್‌ಸಿಬಿ ಬ್ಯಾಟಿಂಗ್ ಕೋಚ್ ದಿನೇಶ್ ಕಾರ್ತಿಕ್‌ಗೆ ಮನವಿ ಮಾಡಿದ್ದಾರೆ. ಡಿಕೆ ಸರ್ ಒಂದು ಸ್ವಲ್ಪ ದಿನ ಬೆಂಗಳೂರಿನಲ್ಲಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುವ ಮಹಾರಾಜ ಟ್ರೋಫಿಯ ಪಂದ್ಯಗಳನ್ನು ಕೂತು ನೋಡಿ ಇಂತಹ ಪ್ರತಿಭೆಗಳ ಶಕ್ತಿ ಗೊತ್ತಾಗುತ್ತದೆ ಎಂದಿದ್ದಾರೆ.
2023 ಐಪಿಎಲ್‌ಗೂ ಮುನ್ನ 20 ಲಕ್ಷ ರೂ.ಗಳಿಗೆ ಮನೋಜ್ ಅವರನ್ನು ಆರ್‌ಸಿಬಿ ಬಿಡ್ ಮಾಡಿತ್ತು. ಇದಾದ ನಂತರ ಸತತ ಎರಡು ಆವೃತ್ತಿಗಳಲ್ಲಿಯೂ ಅವರಿಗೆ ಆಡಲು ಅವಕಾಶ ನೀಡಲಿಲ್ಲ. ಹೀಗಾಗಿ ಅವರು ಕೇವಲ ಬೆಂಚ್ ಕಾಯುವುದಕ್ಕಷ್ಟೇ ಸೀಮಿತವಾಗಿದ್ದರು. ಈಗ ಮಹಾರಾಜ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ಮನೋಜ್ ಆಟಕ್ಕೆ ಆರ್‌ಸಿಬಿ ಅಭಿಮಾನಿಗಳು ಸಲಾಂ ಹೊಡೆಯುತ್ತಿದ್ದಾರೆ.