ಅದೇನೇ ಆದ್ರೂ ನಾವಿಬ್ರು ಅಣ್ತಮ್ಮಾಸ್.. ರಾಹುಲ್ ಬರ್ತ್‌ಡೇಗೆ ಹಾರ್ದಿಕ್ ಸಂದೇಶ

ಬೆಂಗಳೂರು, ಏಪ್ರಿಲ್ 18: ಬಾಲಿವುಡ್ ಸಿನಿಮಾ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್ ' ಟಿವಿ ಕಾರ್ಯಕ್ರಮದಲ್ಲಿ ಮಹಿಳೆಯರ ಕುರಿತು ಅಸಭ್ಯ ಹೇಳಿಕೆಗಳನ್ನು ನೀಡಿ ವಿವಾದ ಮೈಲೇಲೆ ಎಳೆದುಕೊಂಡಿದ್ದ ಟೀಮ್ ಇಂಡಿಯಾದ ಯುವ ಪ್ರತಿಭೆಗಳಾದ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್ ರಾಹುಲ್ ಇದೀಗ ತಮ್ಮ ಬಿಂದಾಸ್ ಅವತಾರಕ್ಕೆ ಮರಳಿದ್ದಾರೆ.
ಸೆಕ್ಸಿಸ್ಟ್ ವಿವಾದದ ಬಳಿಕ ಕೆಲ ದಿನಗಳ ಕಾಲ ನಿಷೇಧ ಶಿಕ್ಷೆ ಎದುರಿಸಿದ್ದ ಪಾಂಡ್ಯ ಮತ್ತು ರಾಹುಲ್, ಬಳಿಕ ಭರ್ಜರಿ ಪ್ರದರ್ಶನ ನೀಡಿ ಮೇ 30ರಂದು ಇಂಗ್ಲೆಂಡ್‌ನಲ್ಲಿ ಆರಂಭವಾಗಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್‌ಗೆ ಪ್ರಕಟಿಸಲಾದ ಭಾರತ ತಂಡದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಎಲ್ಲಾ ವಿವಾದಗಳು ದೂರವಾಗಿ ಇದೀಗ ತಂಡಕ್ಕೆ ಮರಳಿದ ಸಂತಸದಲ್ಲಿರುವ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್, ಗುರುವಾರ 27ನೇ ವಸಂತಕ್ಕೆ ಕಾಲಿಟ್ಟ ಸ್ಫೋಟಕ ಬ್ಯಾಟ್ಸ್‌ಮನ್ ರಾಹುಲ್‌ಗೆ ಶುಭಾಶಯ ಕೋರಿ "ನಾವಿಬ್ಬರೂ ಜೀವನದುದ್ದಕ್ಕೂ ಸೋದರರು, ಲವ್ ಯೂ ಬ್ರದರ್, ಈ ವರ್ಷವನ್ನು ಮತ್ತಷ್ಟು ನಮ್ಮದಾಗಿಸಿಕೊಳ್ಳೋಣ'' ಎಂದು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಆರೂವರೆ ಲಕ್ಷಕ್ಕೂ ಅಧಿಕ ಲೈಕ್ಸ್‌ಗಳು ಹರಿದು ಬಂದಿವೆ.
ಇದೇ ವೇಳೆ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೂಡ ರಾಹುಲ್‌ಗೆ ಶುಭ ಕೋರಿದ್ದು, 'ಹ್ಯಾಪಿ ಬರ್ತ್‌ಡೇ ಬ್ರೋ' ಎಂದು ಟ್ವೀಟ್ ಮಾಡಿದ್ದಾರೆ.
ಪ್ರಸಕ್ತ ಐಪಿಎಲ್‌ನಲ್ಲಿ ರಾಹುಲ್ ಭರ್ಜರಿ ಫಾರ್ಮ್‌ನಲ್ಲಿದ್ದು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಒಂದು ಶತಕ ಒಳಗೊಂಡಂತೆ ಒಟ್ಟು 387 ರನ್‌ಗಳನ್ನು ಚಚ್ಚಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಲ್ಲಿನ 4ನೇ ಬ್ಯಾಟಿಂಗ್ ಕ್ರಮಾಂಕವನ್ನು ತಮ್ಮ ಪಾಲಿಗೆ ಖಾತ್ರಿ ಪಡಿಸಿಕೊಂಡಿದ್ದಾರೆ.
ಮತ್ತೊಂದೆಡೆ ಆಲ್‌ರೌಂಡ್ ಪ್ರದರ್ಶನಗಳ ಮೂಲಕ ಮ್ಯಾಚ್ ವಿನ್ನರ್ ಎನಿಸಿರುವ ಹಾರ್ದಿಕ್ ಪಾಂಡ್ಯ, 8 ಪಂದ್ಯಗಳಲ್ಲಿ186 ರನ್‌ಗಳನ್ನು ಸಿಡಿಸಿದ್ದಾರಲ್ಲದೆ 7 ವಿಕೆಟ್‌ಗಳನ್ನೂ ಉರುಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications