Champions Trophy: ಟೂರ್ನಿ ಮಧ್ಯೆದಲ್ಲೇ ಇಂಗ್ಲೆಂಡ್‌ಗೆ ಆಘಾತ; ಹೊರಬಿದ್ದ ವೇಗಿ
ಪಾಕಿಸ್ತಾನ ಅತಿಥೇಯದಲ್ಲಿ ನಡೆಯುತ್ತಿರುವ ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿ ನಡುವೆ ಕೆಟ್ಟ ಸುದ್ದಿಯೊಂದು ಬಂದಿದೆ. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಭಾರಿ ಹಿನ್ನಡೆ ಅನುಭವಿಸಿದೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದಲ್ಲಿ ದೊಡ್ಡ ಬದಲಾವಣೆ ಆಗಿದೆ, ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತ ನಂತರ ಸೆಮಿಫೈನಲ್ ಸ್ಪರ್ಧೆಯಲ್ಲಿ ಉಳಿಯಲು ಇಂಗ್ಲೆಂಡ್ ತನ್ನ ಮುಂದಿನ ಎರಡೂ ಗುಂಪು ಹಂತದ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯಾಗಿದೆ.
ಇಂಗ್ಲೆಂಡ್ ತಂಡದ ಬಲಗೈ ವೇಗದ ಬೌಲರ್ ಬ್ರೈಡನ್ ಕಾರ್ಸ್ ಕಾಲ್ಬೆರಳಿನ ಗಾಯಗೊಂಡಿದ್ದಾರೆ. ಬ್ರೈಡನ್ ಕಾರ್ಸ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ಸ್ಪಿನ್ನರ್ ರೆಹಾನ್ ಅಹ್ಮದ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ದೃಢಪಡಿಸಿದೆ.

ಇಂಗ್ಲೆಂಡ್ ಬೌಲಿಂಗ್ ಆಲ್‌ರೌಂಡರ್ ಬ್ರೈಡನ್ ಕಾರ್ಸ್ ಎಡಗಾಲಿನ ಹೆಬ್ಬೆರಳಿನ ಗಾಯದಿಂದಾಗಿ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ ಎಂದು ಇಸಿಬಿ ತಿಳಿಸಿದೆ. ಶನಿವಾರ ಲಾಹೋರ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಚಾಂಪಿಯನ್ಸ್ ಟ್ರೋಫಿಯ ಆರಂಭಿಕ ಬಿ ಗುಂಪಿನ ಪಂದ್ಯದ ವೇಳೆ ಕಾರ್ಸ್ ಗಾಯಗೊಂಡಿದ್ದರು. ಕಾಲ್ಬೆರಳಿನ ಗಾಯದಿಂದಾಗಿ ಸೋಮವಾರ ಇಂಗ್ಲೆಂಡ್‌ನ ತರಬೇತಿ ಅವಧಿಗೆ ಸೇರಲು ಅವರಿಗೆ ಸಾಧ್ಯವಾಗಲಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯಕ್ಕೆ ಕಾರ್ಸ್ ಫಿಟ್ ಎಂದು ಪರಿಗಣಿಸಲಾಗಿತ್ತು. ಆದರೆ ಅವರ ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಹೆಣಗಾಡಿದರು. ಕಾಂಗರೂ ಪಡೆಗೆ ವಿರುದ್ಧ ಅವರು ಅತ್ಯಂತ ದುಬಾರಿ ಬೌಲರ್ ಆಗಿದ್ದರು. ಅವರು 9.85 ರ ಎಕಾನಮಿನಲ್ಲಿ ರನ್ ನೀಡಿದರು. ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 352 ರನ್‌ಗಳ ದಾಖಲೆಯ ಗುರಿಯನ್ನು ಸಾಧಿಸಿತು.
ವರದಿಗಳ ಪ್ರಕಾರ, ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ಕಾರ್ಸೆ ಅವರ ಕಾಲ್ಬೆರಳಿನ ಗುಳ್ಳೆಯ ರೂಪದಲ್ಲಿ ಗಾಯದ ಸಮಸ್ಯೆ ಎದುರಾಗಿತ್ತು. ಇದಕ್ಕಾಗಿ ಅವರಿಗೆ ಹೊಲಿಗೆ ಹಾಕಿಕೊಳ್ಳಬೇಕಾಯಿತು. ಭಾರತ ವಿರುದ್ಧ ಇಂಗ್ಲೆಂಡ್‌ನ ಕೊನೆಯ ಎರಡು ಏಕದಿನ ಪಂದ್ಯಗಳಿಂದ ಅವರನ್ನು ಹೊರಗಿಡಲಾಯಿತು. ಇದೀಗ ಗಾಯದ ತೀವ್ರತೆಯಿಂದಾಗಿ ಬುಧವಾರ ಲಾಹೋರ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಗುಂಪು ಹಂತದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ನ ಚಾಂಪಿಯನ್ಸ್ ಟ್ರೋಫಿ ತಂಡದಿಂದ ಅವರನ್ನು ಹೊರಗಿಡಬೇಕಾಯಿತು.
ಕಾರ್ಸೆ ಬದಲಿಗೆ ರೆಹಾನ್
ಸ್ಪಿನ್ನರ್ ರೆಹಾನ್ ಅಹ್ಮದ್ ಭಾರತ ವಿರುದ್ಧ ವೈಟ್-ಬಾಲ್ ಪ್ರವಾಸದ ಸಮಯದಲ್ಲಿ ಇಂಗ್ಲೆಂಡ್ ತಂಡದಲ್ಲಿದ್ದರು. ಈಗ ಚಾಂಪಿಯನ್ಸ್ ಟ್ರೋಫಿಯ ಇಂಗ್ಲೆಂಡ್ ತಂಡಕ್ಕೆ ಅವರು ಬಂದಿರುವುದು ಸ್ಪಿನ್ ದಾಳಿಯನ್ನು ಬಲಪಡಿಸಿದೆ. ಈಗಾಗಲೇ ತಂಡದಲ್ಲಿರುವ ಏಕೈಕ ಸ್ಪಿನ್ನರ್ ಆದಿಲ್ ರಶೀದ್ ಅವರಿಗೆ ಬೆಂಬಲ ಸಿಕ್ಕಂತಾಗಿದೆ. ರೆಹಾನ್ ಅಹ್ಮದ್ ಇಂಗ್ಲೆಂಡ್ ಪರ ಐದು ಏಕದಿನ ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಕಾರ್ಸೆ ಹೊರಗುಳಿದ ಕಾರಣ, ಜೇಮೀ ಓವರ್ಟನ್ ಇಂಗ್ಲೆಂಡ್‌ನ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಬಹುದು.
ಇಂಗ್ಲೆಂಡ್ ತಂಡ: ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಗಸ್ ಅಟ್ಕಿನ್ಸನ್, ಟಾಮ್ ಬ್ಯಾಂಟನ್, ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೇಮೀ ಓವರ್ಟನ್, ಜೇಮೀ ಸ್ಮಿತ್, ಲಿಯಾಮ್ ಲಿವಿಂಗ್ಸ್ಟೋನ್, ಆದಿಲ್ ರಶೀದ್, ಜೋ ರೂಟ್, ಸಾಕಿಬ್ ಮಹಮೂದ್, ಫಿಲ್ ಸಾಲ್ಟ್, ಮಾರ್ಕ್ ವುಡ್, ರೆಹಾನ್ ಅಹ್ಮದ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications