Pro Kabaddi 2025: ಬುಲ್ಸ್‌ಗೆ ಮತ್ತೆ ನಿರಾಸೆ: ದೆಹಲಿಗೆ ಜಯ
ಎರಡನೇ ಅವಧಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ರೂ ಬೆಂಗಳೂರು ಬುಲ್ಸ್ 12ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ ಸತತ ಎರಡನೇ ಸೋಲು ಕಂಡಿದೆ. ಮಂಗಳವಾರ ವೈಜಾಗ್‌ನಲ್ಲಿ ನಡೆದ ಪ್ರಸಕ್ತ ಆವೃತ್ತಿಯ 9ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ 34-42 ಅಂಕಗಳಿಂದ ದಬಾಂಗ್ ದೆಹಲಿ ಕೆಸಿ ವಿರುದ್ಧ ಸೋಲು ಕಂಡಿದೆ. ಈ ಮೂಲಕ ದಬಾಂಗ್ ದೆಹಲಿ ಗೆಲುವಿನ ಶುಭಾರಂಭ ಮಾಡಿದೆ.
ಬುಲ್ಸ್ ತಂಡದ ಪರ ಸ್ಟಾರ್ ಆಲ್‌ರೌಂಡರ್ ಅಲಿರೆಜಾ ಮಿರ್ಜಾಯನ್ 10, ಆಶೀಶ್ ಮಲಿಕ್ 8 ಅಂಕಗಳನ್ನು ಕಲೆ ಹಾಕಿದ್ರೂ ತಂಡಕ್ಕೆ ಗೆಲುವಿನ ಮಾಲೆ ತೊಡಿಸುವಲ್ಲಿ ವಿಫಲರಾದರು. ಮೊದಲ ಪಂದ್ಯಕ್ಕೆ ಹೋಲಿಸಿದರೆ, ಈ ಪಂದ್ಯದಲ್ಲಿ ಬುಲ್ಸ್ ತಂಡದ ರಕ್ಷಣಾ ವಿಭಾಗ ಕೊಂಚ ಮಂಕಾಗಿತ್ತು. ಪರಿಣಾಮ ಮೊದಲ ಗೆಲುವಿನ ಆಸೆ ಫಲಿಸಲಿಲ್ಲ. ಮೊದಲಾವಧಿಯ ಪಂದ್ಯದಲ್ಲಿ ದಬಾಂಗ್ ದೆಹಲಿ ಕೆಸಿ 21-11 ಅಂಕಗಳೊಂದಿಗೆ ಮುನ್ನಡೆ ಸಾಧಿಸಿತು. ಈ ಅವಧಿಯಲ್ಲಿ ದೆಹಲಿ 13 ಅಂಕಗಳನ್ನು ದಾಳಿಯಲ್ಲಿ ಗಳಿಸಿದರೆ, 5 ಅಂಕಗಳನ್ನು ಟ್ಯಾಕಲ್‌ನಲ್ಲಿ ಕಲೆ ಹಾಕಿತು. ಅಲ್ಲದೆ 2 ಅಂಕಗಳನ್ನು ಆಲೌಟ್ ಮೂಲಕ ಸಂಪಾದಿಸಿತು.

ಇನ್ನು ಎರಡನೇ ಅವಧಿಯ ಆಟದಲ್ಲಿ ಬೆಂಗಳೂರು ಬುಲ್ಸ್ ಚೇತರಿಕೆಯ ಆಟವಾಡಿತು. ಅಲ್ಲದೆ ದಾಳಿಯಲ್ಲಿ ಹಾಗೂ ಟ್ಯಾಕಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಅಂಕ ಗಳಿಕೆಯಲ್ಲಿ ಮುನ್ನಡೆ ಸಾಧಿಸಿತು. ಆದರೆ ಮೊದಲಾವಧಿಯಲ್ಲಿ ಸಾಧಿಸಿದ್ದ ಅಂಕಗಳ ಹಿನ್ನಡೆಯನ್ನು ಮೀರಿ ನಿಲ್ಲುವಷ್ಟು ಅಂಕಗಳನ್ನು ಕಲೆ ಹಾಕುವಲ್ಲಿ ಬುಲ್ಸ್ ವಿಫಲವಾಯಿತು. ದಬಾಂಗ್ ದೆಹಲಿ 10 ಅಂಕ ಕಲೆ ಹಾಕಿದ್ರೆ ಬೆಂಗಳೂರು 23 ಅಂಕ ಸೇರಿಸಿತು. ಈ ಅವಧಿಯಲ್ಲಿ ಎರಡೂ ತಂಡಗಳು ತಲಾ ಒಮ್ಮೆ ಆಲೌಟ್ ಆದವು. ಬುಲ್ಸ್ ಈ ಪಂದ್ಯದಲ್ಲಿ ಉತ್ತಮವಾಗಿ ದಾಳಿಯನ್ನು ನಡೆಸಿತು.
ಗೆದ್ದ ಜೈಪುರ
ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 39-36 ಅಂಕಗಳಿಂದ ಪಾಟ್ನಾ ಪೈರೇಟ್ಸ್ ತಂಡವನ್ನು ಮಣಿಸಿತು. ವಿಜೇತ ತಂಡದ ಪರ ನಿತೀನ್ ಕುಮಾರ್ 13, ಅಲಿ ಚೌಬ್ತರಾಶ್ 8 ಅಂಕ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಇನ್ನು ಪರಾಜಿತ ತಂಡದ ಪರ ಮಣಿಂದರ್ ಸಿಂಗ್ 15, ಸುಧಾಕರ್ ಎಂ 9 ಅಂಕಗಳನ್ನು ಸೇರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.

ಬುಧವಾರ ನಡೆಯುವ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ಹಾಗೂ ಬಂಗಾಳ ವಾರಿಯರ್ಸ್ ತಂಡಗಳು ಕಾದಾಟ ನಡೆಸಲಿವೆ. ಎರಡನೇ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಯು ಮುಂಬಾ ತಂಡಗಳು ಫೈಟ್ ನಡೆಸಲಿದ್ದು, ರೋಚಕತೆ ಮನೆ ಮಾಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications