ಟಿ20 ವಿಶ್ವಕಪ್ ಮುಗಿದು ದಿನಗಳೇ ಕಳೆದಿವೆ. ಭಾರತದಲ್ಲಿ ಹಲವು ದಿನಗಳ ಕಾಲ ಈ ಗೆಲುವಿನ ಸಂಭ್ರಮಾಚರಣೆ ನಡೆಯಿತು. ದಕ್ಷಿಣ ಆಫ್ರಿಕಾ ತಂಡವನ್ನು ಬಾರ್ಬಡಾಸ್ ಅಂಗಳದಲ್ಲಿ ಮಣಿಸಿದ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ತವರಿಗೆ ಭಾರತ ತಂಡ ಬಂದಾಗ ಹೃದಯ ಸ್ಪರ್ಷಿ ಸ್ವಾಗತ ನೀಡಲಾಯಿತು.
ಟೀಮ್ ಇಂಡಿಯಾದ ಸಂಘಟಿತ ಆಟಕ್ಕೆ ಒಲಿದ ಜಯ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಟೂರ್ನಿಗೆ ಸಂಬಂಧಿಸಿದಂತೆ ಪ್ರಶ್ನೆಯನ್ನು ಒಡಿಶಾದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ ನಡೆಸಿದ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್ ಪರೀಕ್ಷೆ) ಪತ್ರಿಕೆಯಲ್ಲಿ ಕೇಳಲಾಗಿದೆ.

ಕೆಲವು ದಿನಗಳ ಹಿಂದೆ ಮುಕ್ತಾಯವಾದ ಟಿ20 ವಿಶ್ವಕಪ್ ಟೂರ್ನಿ 2024ರಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು ಎಂದು ಪ್ರಶ್ನೆಯನ್ನು ಕೇಳಲಾಗಿದೆ. ಈ ಪ್ರಶ್ನೆಯ ಕೆಳಗೆ ಇದಕ್ಕೆ ಸಂಬಂಧಿಸಿದಂತೆ ನಾಲ್ಕು ಉತ್ತರಗಳನ್ನು ಸಹ ನೀಡಲಾಗಿದೆ. ನಾಲ್ಕು ಆಯ್ಕೆಗಳಲ್ಲಿ ಸೂರ್ಯಕುಮಾರ್ ಯಾದವ್, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಕುಲದೀಪ್ ಯಾದವ್ ಹೆಸರಗಳು ಸೇರಿವೆ.
ನಿಜಕ್ಕೂ ಈ ಪ್ರಶ್ನೆ ಪರೀಕ್ಷೆ ಬರೆಯುವಾಗ ಕಣ್ಣು ಮುಂದೆ ಬಂದರೆ, ಗೊಂದಲವಾಗುವುದು ಗ್ಯಾರಂಟಿ. ಅಲ್ಲದೆ ಅದಕ್ಕೆ ನೀಡಿರೂವ ನಾಲ್ಕು ಉತ್ತರಗಳನ್ನು ಸಹ ತೆಗೆದು ಹಾಕುವಂತಿಲ್ಲ. ಫೈನಲ್ ಪಂದ್ಯದಲ್ಲಿ ಅಮೋಘ ಕ್ಯಾಚ್ ಹಿಡಿ ಸೂರ್ಯಕುಮಾರ್ ಯಾದವ್ ಹೆಸರು ಇದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಹೆಸರಿದೆ. ಇನ್ನು ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳಿಗೆ ಕಾಡಿದ ಜಸ್ಪ್ರಿತ್ ಬುಮ್ರಾ ಹಾಗೂ ಕುಲದೀಪ್ ಯಾದವ್ ಹೆಸರಗಳು ಇವೆ. ಈ ಪ್ರಶ್ನೆಯನ್ನು ಒಂದು ಬಿಟ್ಟು ಎರಡು ಬಾರಿ ಓದಿದರೂ, ನಾಲ್ಕು ಹೆಸರುಗಳಲ್ಲಿ ಯಾವುದಕ್ಕೆ ಟಿಕ್ ಮಾಡಬೇಕು ಎಂಬುದು ತಿಳಿಯುವುದು ಡೌಟ್.
ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಅಮೋಘ ಬೌಲಿಂಗ್ ಸಾಧನೆ ಮಾಡಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಯಾರ್ಕರ್ ಸ್ಪೇಷಲಿಸ್ಟ್ ಬುಮ್ರಾ ಆಡಿರುವ 8 ಪಂದ್ಯಗಳಲ್ಲಿ ಒಟ್ಟು 15 ವಿಕೆಟ್ ಪಡೆದರು. ಇವರು ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗದೇ ಇದ್ದರೂ, ಎಕನಾಮಿ ಲೆಕ್ಕಾಚಾರದಲ್ಲಿ ಇವರು ಬೆಸ್ಟ್ ಆಗಿದ್ದರಿಂದ ಸರಣಿ ಶ್ರೇಷ್ಠ ಗರಿ ಬುಮ್ರಾಗೆ ಸಂದಿತು.

ಸ್ಕೈ ಟಿ20 ವಿಶ್ವಕಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದ್ದಾರೆ. ಇವರು ಆಡಿರುವ 8 ಪಂದ್ಯಗಳಲ್ಲಿ 28.42 ಸರಾಸರಿಯಲ್ಲಿ ಒಟ್ಟು 199 ರನ್ ಗಳಿಸಿದ್ದು, 2 ಅರ್ಧಶತಕಗಳೂ ಸೇರಿವೆ. ಆದರೆ ಹಾರ್ದಿಕ್ ಪಾಂಡ್ಯ ಅವರು ಮಾಡಿದ ಫೈನಲ್ ಪಂದ್ಯದ ಕೊನೆಯ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಬಾರಿಸಿದ ಚೆಂಡನ್ನು ಲಾಂಗ್ ಆಫ್‌ನಲ್ಲಿ ಅಮೋಘವಾಗಿ ಕ್ಯಾಚ್ ಹಿಡಿದು ತಂಡಕ್ಕೆ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಕುಲ್ದೀಪ್ ಯಾದವ್ ಟೀಮ್ ಇಂಡಿಯಾ ಪರ ಅನೇಕ ಪಂದ್ಯಗಳಲ್ಲಿ ಮೊನಚಾದ ಬೌಲಿಂಗ್ ನಡೆಸಿದ್ದಾರೆ. ಇವರು ಆಡಿರುವ 5 ಪಂದ್ಯಗಳಲ್ಲಿ 10 ವಿಕೆಟ್ ಕಬಳಿಸಿದ್ದಾರೆ. ಟೂರ್ನಿಯುದ್ದಕ್ಕೂ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಕೊಹ್ಲಿ, 75 ರನ್ ಮಾತ್ರ ಸಿಡಿಸಿದ್ದರು. ಆದರೆ ಫೈನಲ್‌ನಲ್ಲಿ 76 ರನ್ ಸಿಡಿಸಿ ಅಬ್ಬರಿಸಿದ್ದರು.