ಟಿ20 ವಿಶ್ವಕಪ್ ಸೆಮಿಫೈನಲ್‌ಗೆ ದಿನಗಣನೆ ಆರಂಭವಾಗಿದೆ. ಬುಧವಾರ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಅಂಗಳ ಆತಿಥ್ಯ ನೀಡಲಿದೆ. ಇನ್ನು ಎರಡನೇ ಸೆಮಿಫೈನಲ್ ಮುಂಬೈನಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಕಾದಾಟವನ್ನು ನಡೆಸಲಿವೆ. ಈ ವೇಳೆ ಎಲ್ಲರ ಕಣ್ಣುಗಳು ಇಂಗ್ಲೆಂಡ್ ತಂಡದ ಭರವಸೆಯ ಬ್ಯಾಟರ್ ಜೋಸ್ ಬಟ್ಲರ್ ಅವರ ಮೇಲೆ ನೆಟ್ಟಿರಲಿವೆ. ಭಾರತದ ವಿರುದ್ಧದ ಪಂದ್ಯದಲ್ಲಿ ಬಟ್ಲರ್ ದೊಡ್ಡ ಇತಿಹಾಸವನ್ನು ಸೃಷ್ಟಿಸುವ ಕನಸು ಹೊಂದಿದ್ದಾರೆ.
ಸೂಪರ್ 8 ಹಂತದ ಪಂದ್ಯದಲ್ಲಿ ಅಜೇಯವಾಗಿ ಸೆಮಿಫೈನಲ್ ಪ್ರವೇಶಿಸಿರುವ ಇಂಗ್ಲೆಂಡ್ ಆತ್ಮವಿಶ್ವಾಸದಲ್ಲಿದೆ. ಅಲ್ಲದೆ ಮುಂಬೈ ಅಂಗಳದಲ್ಲಿ ಆಡಿದ ಅನುಭವ ಇಂಗ್ಲೆಂಡ್ ತಂಡದ ಹಲವು ಆಟಗಾರರಿಗೆ ಇದೆ. ಆಂಗ್ಲರ ಕ್ಯಾಂಪ್‌ನಲ್ಲಿರುವ ಜೋಸ್ ಬಟ್ಲರ್ ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಅಳಿಸುವ ಕನಸು ಕಾಣುತ್ತಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆ ವಿರಾಟ್ ಅವರದ್ದಾಗಿದೆ. ಈ ದಾಖಲೆಯ ಮೇಲೆ ಬಟ್ಲರ್ ಕಣ್ಣು ನೆಟ್ಟಿದ್ದಾರೆ.

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಜೋಸ್ ಬಟ್ಲರ್ ಸ್ಥಿರ ಪ್ರದರ್ಶನ ನೀಡಿಲ್ಲ. ಆದರೂ ಸಹ ಭಾರತದ ವಿರುದ್ಧ ಇವರು 5 ರನ್ ಬಾರಿಸುವಲ್ಲಿ ಸಫಲರಾದರೆ, ವಿರಾಟ್ ಕೊಹ್ಲಿ ಅವರ ದೊಡ್ಡ ದಾಖಲೆಯನ್ನು ಅಳಿಸಿ ಹಾಕಬಹುದಾಗಿದೆ. ಬಟ್ಲರ್ ರನ್ ಬಾರಿಸಿದರೆ ಉಭಯ ದೇಶಗಳ ನಡುವಣ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಳ್ಳುತ್ತಾರೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಅತಿ ಹೆಚ್ಚು ರನ್ ಬಾರಿಸಿದ್ದಾರೆ. ಇವರು ಆಡಿದ 21 ಪಂದ್ಯಗಳಲ್ಲಿ 38ರ ಸರಾಸರಿಯಲ್ಲಿ 648 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಅರ್ಧಶತಕಗಳು ಸಹ ಸೇರಿವೆ. ಇನ್ನು 61 ಬೌಂಡರಿ, 19 ಸಿಕ್ಸರ್ ಸಿಡಿಸಿದ್ದಾರೆ.
ವಿರಾಟ್ ಕೊಹ್ಲಿ, 21 ಪಂದ್ಯ, 648 ರನ್‌ಗಳು
ಜೋಸ್ ಬಟ್ಲರ್, 27 ಪಂದ್ಯ, 644 ರನ್‌ಗಳು
ರೋಹಿತ್ ಶರ್ಮಾ, 16 ಪಂದ್ಯ, 467 ರನ್‌ಗಳು
ಹಾರ್ದಿಕ್ ಪಾಂಡ್ಯ, 20 ಪಂದ್ಯ, 414 ರನ್‌ಗಳು
ಜೇಸನ್ ರಾಯ್, 15 ಪಂದ್ಯ, 356 ರನ್‌ಗಳು
ಪ್ರಸಕ್ತ ವಿಶ್ವಕಪ್‌ನಲ್ಲಿ ಜೋಸ್ ಬಟ್ಲರ್ ಬ್ಯಾಟ್ ಮೌನಕ್ಕೆ ಶರಣಾದಂತೆ ಕಾಣುತ್ತಿದೆ. ಈ ಟೂರ್ನಿಯಲ್ಲಿ ಆಡಿದ ಏಳು ಪಂದ್ಯಗಳಲ್ಲಿ ಇವರು 8.85 ರ ಸರಾಸರಿಯಲ್ಲಿ ಕೇವಲ 62 ರನ್‌ಗಳನ್ನು ಗಳಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್ ರೇಟ್ 106.89 ಆಗಿದೆ.