ಇತ್ತೀಚೆಗೆ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಗೆದ್ದಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ ತಂಡ ಸಜ್ಜಾಗಿದೆ.
ಅಕ್ಟೋಬರ್ 16 ರಿಂದ ನ್ಯೂಜಿಲೆಂಡ್ ಮತ್ತು ಭಾರತ ನಡುವೆ ಮೂರು ಪಂದ್ಯಗಳ ಸರಣಿ ಆರಂಭವಾಗಲಿದೆ. ಕಿವೀಸ್ ತಂಡವನ್ನು ಎದುರಿಸಿದ ನಂತರ ರೋಹಿತ್ ಶರ್ಮಾ ನೇತೃತ್ವದಲ್ಲಿ ತಂಡವೂ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಬಹುದಿನಗಳಿಂದ ಬಾರ್ಡರ್-ಗವಾಸ್ಕರ್ ಟ್ರೋಫಿ 2024ರ ಟೆಸ್ಟ್ ಸರಣಿಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ಈ ವರ್ಷ ಭಾರತ ಎದುರಿಸುತ್ತಿರುವ ದೊಡ್ಡ ಸವಾಲು ಇದಾಗಿದೆ. ಇಂತಹ ಸಂದರ್ಭದಲ್ಲಿ ಭಾರತ ತಂಡಕ್ಕೆ ಗುಡ್ ನ್ಯೂಸ್ ಸಿಕ್ಕಿದೆ.

ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ನವೆಂಬರ್ 22 ರಿಂದ ಆರಂಭವಾಗಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಟೆಸ್ಟ್ ಪಂದ್ಯಗಳ ಸರಣಿಗೆ ಇನ್ನೂ ಒಂದು ತಿಂಗಳಿಗಿಂತ ಹೆಚ್ಚು ಸಮಯವಿದೆ. ಅದಕ್ಕೂ ಮುನ್ನವೇ ಆತಿಥೇಯ ಆಸ್ಟ್ರೇಲಿಯಾ ಹಿನ್ನಡೆ ಅನುಭವಿಸಿದೆ. ಸ್ಟಾರ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಸಂಪೂರ್ಣ ಸರಣಿಯಿಂದ ಹೊರಬಿದ್ದಿದ್ದಾರೆ. ಅವರ ಸೊಂಟದಲ್ಲಿ ಮುರಿತವಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಿದ್ದಾರೆ. ಇದರಿಂದಾಗಿ ಭಾರತ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ.
ಕಳೆದ 10 ವರ್ಷಗಳಿಂದ ಭಾರತ ವಿರುದ್ದ ಆಸ್ಟ್ರೇಲಿಯಾ ತಂಡ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದಿಲ್ಲ. ಭಾರತ ಎದುರು ತವರಿನಲ್ಲಿ ಆಸ್ಟ್ರೇಲಿಯಾ ತಂಡ ಎರಡು ಸಲ ಭಾರೀ ಹಿನ್ನಡೆ ಅನುಭವಿಸಿದೆ. ಈ ಬಾರಿ ಭಾರತವನ್ನು ಸರಣಿಯಲ್ಲಿ ಸೋಲಿಸಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲಾನ್ ಮಾಡಿತ್ತು. ಆದರೆ ಇದೀಗ ಕ್ಯಾಮರೂನ್ ಗ್ರೀನ್ ಹೊಗುಳಿದಿರುವುದು ಕಾಂಗೂರು ಪಡೆಯ ಸರಣಿ ಗೆಲುವಿನ ಕನಸಿಗೆ ದೊಡ್ಡ ಹೊಡೆತ ಬಿದ್ದಂತಾಗಿದೆ.
ಶಸ್ತ್ರಚಿಕಿತ್ಸೆ ನಂತರ ಕ್ಯಾಮರೂನ್ ಗ್ರೀನ್ ಚೇತರಿಸಿಕೊಳ್ಳಲು ಸುಮಾರು ಆರು ತಿಂಗಳು ಬೇಕಾಗುತ್ತದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳು ತಿಳಿಸಿವೆ. ಕ್ಯಾಮರೂನ್ ಅವರು ಸುದೀರ್ಘ ವೃತ್ತಿಜೀವನವನ್ನು ಗಮನದಲ್ಲಿಟ್ಟುಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಕಾಂಗೂರು ಪಡೆ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಸರಣಿಯ ಸಮಯದಲ್ಲಿ ಗ್ರೀನ್ ಅವರ ಬೆನ್ನಿನಲ್ಲಿ ಮೂಳೆ ಮುರಿತವಾಗಿರುವುದು ಕಂಡು ಬಂದಿತ್ತು. ಈ ಗಾಯ ಭಾರತದ ಟೆಸ್ಟ್‌ಗಳಿಗೆ ಅವರ ಲಭ್ಯತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿತ್ತು. ಈಗ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದು, ಊಹಾಪೋಹಗಳಿಗೆ ತೆರೆ ಬಿದ್ದಿದೆ.
ಆಸ್ಟ್ರೇಲಿಯಾ ಪರ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್, 28 ಟೆಸ್ಟ್ ಪಂದ್ಯಗಳಲ್ಲಿ 36.23 ಸರಾಸರಿಯಲ್ಲಿ 1377 ರನ್ ಗಳಿಸಿದ್ದಾರೆ. ಅವರ ಹೆಸರಿನಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ 35 ವಿಕೆಟ್‌ಗಳನ್ನೂ ಪಡೆದು ಮಿಂಚಿದ್ದಾರೆ.