
ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಬಾಕ್ಸಿಂಗ್ ಟೆಸ್ಟ್ ವೇಳೆ ಗಾಯಗೊಂಡಿದ್ದು, ಸರಣಿಯ ಮೂರನೇ ಪಂದ್ಯದಿಂದ ಹೊರಬಿದ್ದಿದ್ದಾರೆ.
ಕ್ಯಾಮರೂನ್ ಗ್ರೀನ್ ಮುಂದಿನ ದಿನಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಇದು ಆಸ್ಟ್ರೇಲಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡಕ್ಕೆ ಕೆಟ್ಟ ಸುದ್ದಿಯಾಗಿದೆ. ಶಸ್ತ್ರಚಿಕಿತ್ಸೆಗೆ ಒಳಗಾಗದ ನಂತರ ಅವರು ಯಾವಾಗ ಚೇತರಿಸಿಕೊಳ್ಳುತ್ತಾರೆ ಎಂದು ನಿಖರವಾಗಿ ಹೇಳುವುದು ಕಷ್ಟವಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ವೇಳೆ ಕ್ಯಾಮರೂನ್ ಗ್ರೀನ್ ಮತ್ತು ಮಿಚೆಲ್ ಸ್ಟಾರ್ಕ್ ಇಬ್ಬರೂ ಬೆರಳಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದಾರೆ. ಗಾಯಗೊಂಡಿದ್ದರೂ ಇಬ್ಬರೂ ಬೌಲಿಂಗ್ ಮಾಡಿದರು, ಬೆರಳು ಗಾಯಗೊಂಡಿದ್ದರೂ ಬ್ಯಾಟಿಂಗ್ ಮಾಡಿದ ಗ್ರೀನ್ ಅರ್ಧಶತಕ ಗಳಿಸಿದರು. ಕ್ಯಾಮರೂನ್ ಗ್ರೀನ್ ಜೊತೆ ಮಿಚೆಲ್ ಸ್ಟಾರ್ಕ್ ಕೂಡ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಮಿಚೆಲ್ ಸ್ಟಾರ್ಕ್‌ನ ಎಡ ಮಧ್ಯದ ಬೆರಳಿನ ಸ್ನಾಯುರಜ್ಜು ಸಮಸ್ಯೆಯಾಗಿದ್ದು ಶಸ್ತ್ರಚಿಕಿತ್ಸೆಯ ಅಗತ್ಯವಿಲ್ಲ ಎನ್ನಲಾಗಿದೆ. ಆದರೆ ಫೆಬ್ರವರಿ 9 ರಂದು ನಾಗ್ಪುರದಲ್ಲಿ ನಡೆಯಲಿರುವ ಭಾರತ ಸರಣಿಯ ಆರಂಭಿಕ ಪಂದ್ಯದಲ್ಲಿ ಇವರಿಬ್ಬರು ಆಡುವುದು ಅನುಮಾನ ಎನ್ನಲಾಗಿದೆ.

ಭಾರತ ಪ್ರವಾಸದ ವೇಳೆಗೆ ಗುಣಮುಖ
ಭಾರತ ವಿರುದ್ಧದ ಟೆಸ್ಟ್ ಸರಣಿ ನಮಗೆ ಮಹತ್ವದ್ದಾಗಿದೆ. ಸಮಯ ಕೂಡ ಕಡಿಮೆ ಇರುವುದರಿಂದ, ನಾನು ಹೆಚ್ಚು ಜಾಗರೂಕನಾಗಿರಬೇಕಿದೆ. ಅದಷ್ಟು ಬೇಗ ಗುಣಮುಖವಾಗುವ ವಿಶ್ವಾಸವಿದೆ ಎಂದು ವೇಗಿ ಮಿಚೆಲ್ ಸ್ಟಾರ್ಕ್ ತಿಳಿಸಿದ್ದಾರೆ.
ಮಿಚೆಲ್ ಸ್ಟಾರ್ಕ್ ಮತ್ತು ಕ್ಯಾಮರೂನ್ ಗ್ರೀನ್ ಭಾರತದ ವಿರುದ್ಧದ ಸರಣಿಯಲ್ಲಿ ಪ್ರಮುಖ ಪಾತ್ರ ವಹಿಸುವ ಆಟಗಾರರಾಗಿದ್ದಾರೆ. ಟಿ20 ಸರಣಿಯ ಪ್ರವಾಸದ ವೇಳೆಯಲ್ಲಿ ಗ್ರೀನ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
17.5 ಕೋಟಿ ರುಪಾಯಿಗೆ ಹರಾಜಾಗಿರು ಗ್ರೀನ್
ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಐಪಿಎಲ್ ಮಿನಿ ಹರಾಜಿನಲ್ಲಿ ಬರೋಬ್ಬರಿ 17.5 ಕೋಟಿ ರುಪಾಯಿಗೆ ಮುಂಬೈ ಇಂಡಿಯನ್ಸ್ ತಂಡದ ಪಾಲಾಗಿದ್ದಾರೆ. ಗ್ರೀನ್ ಗಾಯಗೊಂಡಿರುವುದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಲ್ಲಿ ಕೂಡ ಆತಂಕ ಮೂಡಿಸಿದೆ.
2023ರ ಐಪಿಎಲ್‌ನಲ್ಲಿ ಗ್ರೀನ್ ಮುಂಬೈ ಇಂಡಿಯನ್ಸ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ. ಸ್ಫೋಟಕ ಬ್ಯಾಟರ್ ಆಗಿರುವ ಗ್ರೀನ್ ಉತ್ತಮ ಬೌಲಿಂಗ್ ಕೂಡ ಮಾಡುತ್ತಾರೆ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ಅವರಿಗಾಗಿ ದುಬಾರಿ ಮೊತ್ತ ಪಾವತಿಸಿದೆ.
ಭಾರತದ ವಿರುದ್ದದ ಟೆಸ್ಟ್ ಸರಣಿ ವೇಳೆಗೆ ಕ್ಯಾಮರೂನ್ ಗ್ರೀನ್ ಗುಣಮುಖವಾದರೆ, ಐಪಿಎಲ್‌ನಲ್ಲಿ ಕೂಡ ಆಡುವುದು ಖಚಿತವಾಗಲಿದೆ.