ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ ಚೇತೇಶ್ವರ ಪೂಜಾರ, ಇಂಗ್ಲೆಂಡ್ ನೆಲದಲ್ಲಿ ತಮ್ಮ ಬಿರುಸಿನ ಬ್ಯಾಟಿಂಗ್ ಮುಂದುವರೆಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮನ್ನು ಕೈ ಬಿಟ್ಟ ಟೀಮ್ ಇಂಡಿಯಾ ಆಯ್ಕೆದಾರರಿಗೆ ಬೌನ್ಸಿ ಪಿಚ್‌ನಲ್ಲಿ ಉತ್ತರ ನೀಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಚಿಂತೆ ಹೆಚ್ಚಿಸಿದ ಮ್ಯಾನೇಜ್‌ಮೆಂಟ್ ಗೆ ತಕ್ಕ ಮಟ್ಟಿಗೆ ಭರವಸೆಯ ಆಶಾ ಕಿರಣ ಒಂದು ಕಾಣಿಸಿಕೊಂಡಂತೆ ಆಗಿದೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ, ಟೀಮ್ ಇಂಡಿಯಾಕ್ಕೆ ತಲೆ ನೋವಾಗಿದ್ದೇ ನಾಲ್ಕನೇ ಕ್ರಮಾಂಕ. ಈ ಕ್ರಮಾಂಕದಲ್ಲಿ ಆಡಲು, ಹಲವು ಸ್ಟಾರ್ ಆಟಗಾರರು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಸ್ಥಾನಕ್ಕೆ ನ್ಯಾಯ ಒದಗಿಸಬಲ್ಲ ಆಟಗಾರರಲ್ಲಿ ಮುಂಚೂಣಿಯಲ್ಲಿ ಚೇತೇಶ್ವರ್ ಪೂಜಾರ ಕಾಣಿಸಿಕೊಳ್ಳಲಿದ್ದಾರೆ. ಆದರೂ, ಪೂಜಾರ ಅವರಿಗೆ ಏಕದಿನ ತಂಡದಲ್ಲಿ ಸ್ಥಾನ ಸಿಗುವುದು ಕಷ್ಟವಾಗಿದೆ.

ನಿಜಕ್ಕೂ ಮಧ್ಯಮ ಕ್ರಮಾಂಕದಲ್ಲಿ ಆಡಲು ಇರಬೇಕಾದ ಎಲ್ಲ ಕ್ವಾಲಿಟಿಗಳು, ಪೂಜಾರ ಬಳಿ ಇದೆ ಎಂಬುದು ಸತ್ಯ. ಅದು ಹೇಗೆ ಎಂಬುದನ್ನು ನೋಡೋದಾದ್ರೆ, ಚೇತೇಶ್ವರ್ ಪೂಜಾರ್ ಪಕ್ಕಾ ಟೆಸ್ಟ್ ಸ್ಪೆಷಲಿಸ್ಟ್ ಆಟಗಾರ, ಬ್ಲೂ ಜೆರ್ಸಿಯಲ್ಲಿ ಮಿಂಚಲು ಅವಕಾಶ ಬೇಕಷ್ಟೆ. ಆದರೆ, ಅವರಿಗೆ ಅವಕಾಶಗಳು ಸಿಗುತ್ತಿಲ್ಲ. ಈಗ ಕಾಲ ಕೂಡಿ ಬಂದಿದೆ. ನಾಲ್ಕನೇ ಕ್ರಮಾಂಕದಲ್ಲಿ ಆಡುವ ಆಟಗಾರನಿಗೆ ತಾಳ್ಮೆ ಬಹು ಮುಖ್ಯವಾಗಿ ಬೇಕು.
ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಾ ಇದ್ದರೂ ಸಹ, ಇನ್ನೊಂದು ತುದಿಯಲ್ಲಿ ನೆಲಕಚ್ಚಿ ನಿಂತು ಆಡುವ ಆಟಗಾರನೊಬ್ಬನ ಅವಶ್ಯಕತೆ ಇದೆ. ಈ ಎಲ್ಲ ಗುಣಗಳು ಚೇತೇಶ್ವರ್ ಪೂಜಾರ ಅವರಲ್ಲಿವೆ ಎಂಬುದು ಸತ್ಯ. ಪೂಜಾರ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ನಿಸ್ಸೀಮರು. ಇವರಲ್ಲಿ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡುವ ಕ್ಷಮತೆ ಇದೆ ಎಂಬುದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಭರ್ಜರಿಯಾಗಿ ಎರಡು ಶತಕಗಳನ್ನು ಗಳಿಸಿದ ನಂತರ ಭಾರತ ತಂಡಕ್ಕೆ ಮರಳುವ ಭರವಸೆಯಲ್ಲಿದ್ದಾರೆ.
35ರ ಹರೆಯದ ಚೇತೇಶ್ವರ ಪೂಜಾರ ಸಸೆಕ್ಸ್ ಪರ ಅಬ್ಬರಿಸಿದ್ದಾರೆ. ಇವರು ನಾರ್ಥಾಂಪ್ಟನ್‌ಶೈರ್ ವಿರುದ್ಧ 119 ಎಸೆತಗಳಲ್ಲಿ ಅಜೇಯ 106 ರನ್ ಹಾಗೂ ಸೋಮರ್‌ಸೆಟ್ ವಿರುದ್ಧ ಔಟಾಗದೆ 117 ರನ್ ಸಿಡಿಸಿ ಆರ್ಭಟಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಚೇತೇಶ್ವರ್ 151 ರ ಸರಾಸರಿಯಲ್ಲಿ 302 ರನ್ ಗಳಿಸಿ, ಪಂದ್ಯಾವಳಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.
ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಶರ್ಮಾ ನೇತೃತ್ವದ ತಂಡವು 209 ರನ್‌ಗಳಿಂದ ಸೋತ ನಿರಾಸೆ ಅನುಭವಿಸಿತು. ಈ ಪಂದ್ಯದಲ್ಲಿ ಚೇತೇಶ್ವರ್ ಕೇವಲ 14 ಮತ್ತು 27 ರನ್ ಗಳಿಸಿ ನೀರಾಸೆ ಅನುಭವಿಸಿದ್ದರು.
ಮುಂದಿನ ಎರಡು-ಮೂರು ತಿಂಗಳವರೆಗೆ ಟೀಮ್ ಇಂಡಿಯಾ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡುತ್ತಿಲ್ಲ. ಮುಂದಿನ ಟೆಸ್ಟ್ ಸರಣಿಯು ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿದೆ, ಆದ್ದರಿಂದ ಸಾಕಷ್ಟು ಸಮಯಾವಕಾಶವಿದೆ, ಆದರೆ ನಾನು ಏಕದಿನ ತಂಡಕ್ಕೆ ಮರಳಲು ಪ್ರಯತ್ನಿಸುತ್ತಿದ್ದೇನೆ ಎಂದು ಪೂಜಾರ ಹೇಳಿದ್ದಾರೆ. ನನಗೆ ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಆಡುವ ಆಸೆ ಇದ್ದೇ ಇದೆ. ಹೀಗಾಗಿ ಪ್ರಥಮ ದರ್ಜೆ ಪಂದ್ಯಗಳಲ್ಲಿ ರನ್‌ಗಳನ್ನು ಕಲೆ ಹಾಕಿ ಆಯ್ಕೆದಾರರ ಮನ ಗೆಲ್ಲುವುದೇ ನನ್ನ ಗುರಿಯಾಗಿದೆ. ಟೀಮ್ ಇಂಡಿಯಾದ ಏಕದಿನ ತಂಡಕ್ಕೆ ಮರಳುವ ಆಸೆ ಇನ್ನು ಕಮರಿಲ್ಲ ಎಂದು ಚೇತೇಶ್ವರ್ ತಿಳಿಸಿದ್ದಾರೆ.