ಟೆಸ್ಟ್ ತಂಡಕ್ಕೆ ಮರಳಲಿದ್ದಾರಾ ಸ್ಟಾರ್ ಆಲ್‌ರೌಂಡರ್? ಮಾತುಕತೆಗೆ ಮುಂದಾದ ಬಿಸಿಸಿಐ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ ಸನಿಹವಾಗಿರುವ ಬೆನ್ನಲ್ಲೇ ಬಿಸಿಸಿಐ ಹೊಸ ಲೆಕ್ಕಾಚಾರ ಆರಂಭಿಸಿದೆ. ಫೈನಲ್ ಪಂದ್ಯಕ್ಕಾಗಿ ಭಾರತ ಟೆಸ್ಟ್ ತಂಡಕ್ಕೆ ಸ್ಟಾರ್ ಆಲ್‌ರೌಂಡರ್ ರನ್ನು ಕರೆತರಲು ಬಿಸಿಸಿಐ ಮುಂದಾಗಿದೆ.
ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಪಾಂಡ್ಯರನ್ನು ಟೆಸ್ಟ್ ತಂಡಕ್ಕೆ ಕರೆತರಲು ಬಿಸಿಸಿಐ ಮತ್ತು ಆಯ್ಕೆದಾರರು ಆಸಕ್ತಿ ತೋರಿಸಿದ್ದಾರೆ. ಶೀಘ್ರದಲ್ಲೇ ಪಾಂಡ್ಯ ಜೊತೆ ಈ ಬಗ್ಗೆ ಚರ್ಚೆ ನಡೆಸಲು ತೀರ್ಮಾನಿಸಲಾಗಿದ್ದು, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುವ ಬಗ್ಗೆ ಕೇಳಲು ನಿರ್ಧರಿಸಿದೆ.
CCL 2023: ಕರ್ನಾಟಕ ಬುಲ್ಡೋಜರ್ಸ್‌ಗೆ ಪಂಜಾಬ್ ದಿ ಶೇರ್ ಸವಾಲು: ನೇರಪ್ರಸಾರ, ಸಮಯ, ಪ್ಲೇಯಿಂಗ್ XI ವಿವರ
ಬೆನ್ನು ನೋವಿಗಿಂದ ಬಳಲುತ್ತಿದ್ದ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಿಂದ ದೂರವುಳಿದಿದ್ದಾರೆ. ಆದರೆ, ಸದ್ಯ ಫಿಟ್ ಆಗಿರುವ ಪಾಂಡ್ಯ, ಟೆಸ್ಟ್‌ನಲ್ಲಿ ಆಡುವ ಆಸಕ್ತಿ ತೋರಿಸುತ್ತಾರೆಯೇ ಎಂದು ನೋಡಲು ಬಿಸಿಸಿಐ ಸ್ಪಷ್ಟತೆ ಬಯಸಿದೆ. ಶಿವಸುಂದರ್ ದಾಸ್ ನೇತೃತ್ವದ ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ತಂಡವನ್ನು ಪ್ರಕಟಿಸುವ ಮುನ್ನ ಪಾಂಡ್ಯ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಜೊತೆ ಮುಖಾಮುಖಿಯಾಗಿರುವುದರಿಂದ ಭಾರತ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಪಾಂಡ್ಯ ಟೆಸ್ಟ್‌ಗೆ ಮರಳಿದರೆ, ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗಕ್ಕೆ ಮತ್ತಷ್ಟು ಬಲ ಬರಲಿದೆ.

ಪ್ರಮುಖ ಆಟಗಾರರು ಅಲಭ್ಯತೆ
ಭಾರತ ಟೆಸ್ಟ್ ತಂಡಕ್ಕೆ ಪ್ರಮುಖ ಆಟಗಾರರು ಅಲಭ್ಯರಾಗಿದ್ದಾರೆ. ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ಕೂಡ ಭಾರತ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಶಾರ್ದೂಲ್ ಠಾಕೂರ್ ವಾಪಸಾಗುವ ಸಾಧ್ಯತೆ ಇದೆ.
"ಪಾಂಡ್ಯ ಟೆಸ್ಟ್‌ಗೆ ಮರಳಲು ಯಾವುದೇ ಒತ್ತಡವಿಲ್ಲ, ಆದರೆ ಈ ಬಗ್ಗೆ ಸ್ಪಷ್ಟತೆ ಇರುವುದು ಉತ್ತಮ. ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮುನ್ನ ನಾವು ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಬುಮ್ರಾ ತಂಡದಿಂದ ಹೊರಗುಳಿದಿರುವುದರಿಂದ ಪಾಂಡ್ಯ ಇಂಗ್ಲೆಂಡ್‌ನಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಆದರೆ ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಇನ್ಸೈಡ್‌ಸ್ಪೋರ್ಟ್ ವರದಿ ಮಾಡಿದೆ.

ಪಾಂಡ್ಯ ಗಾಯದ ಇತಿಹಾಸವೇ ಚಿಂತೆ
ಬೆನ್ನು ನೋವಿನ ನಂತರ ಪಾಂಡ್ಯ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಹೇಳಲು ಬಯಸಿದ್ದರು. ಆದರೆ, ಟಿ20 ಮತ್ತು ಏಕದಿನ ಮಾದರಿಯಲ್ಲಿ ಅವರು ಉತ್ತಮವಾಗಿ ವಾಪಸಾತಿ ಮಾಡಿದ್ದರು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ತಂಡಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿದ್ದಾರೆ.
ಕ್ಯಾಮೆರಾನ್ ಗ್ರೀನ್ ಮತ್ತು ಬೆನ್ ಸ್ಟೋಕ್ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡದಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಪಾಂಡ್ಯ ಕೂಡ ಭಾರತ ತಂಡದಲ್ಲಿ ಅಮೂಲ್ಯ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ, ಅವರ ಗಾಯದ ಇತಿಹಾಸವನ್ನು ಅರಿತಿರುವ ಬಿಸಿಸಿಐ ಹಿಂಜರಿಯುತ್ತಿದೆ.
ಪಾಂಡ್ಯ 2018ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಹಾರ್ದಿಕ್ ಪಾಂಡ್ಯ ಕೂಡ ಟೆಸ್ಟ್‌ಗೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದರೂ, ಸಮಯ ಬಂದಾಗ ಆ ಬಗ್ಗೆ ಯೋಚಿಸುವುದಾಗಿ ತಿಳಿಸಿದ್ದರು.
"ಟೆಸ್ಟ್ ಕ್ರಿಕೆಟ್ ಆಡಲು ಸರಿಯಾದ ಸಮಯ ಎಂದು ನನಗೆ ಅನಿಸಿದಾಗ ನಾನು ಮರಳುತ್ತೇನೆ. ಈಗ ನಾನು ವೈಟ್ -ಬಾಲ್ ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಲಿದ್ದೇನೆ. ಅದು ಈಗ ನನಗೆ ಮುಖ್ಯವಾಗಿದೆ. ಸಮಯ ಸರಿಯಾಗಿದ್ದು, ನನ್ನ ಫಿಟ್‌ನೆಸ್ ಉತ್ತಮವಾಗಿದ್ದರೆ ಟೆಸ್ಟ್‌ನಲ್ಲಿ ಆಡಲು ಪ್ರಯತ್ನಿಸುತ್ತೇನೆ" ಎಂದು ಪಾಂಡ್ಯ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications