ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮತ್ತೊಂದು ಪ್ರಮುಖ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣೆಸಲು ಸಜ್ಜಾಗಿವೆ. ಒಂದೆಡೆ ತವರಿನಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಆರ್‌ಸಿಬಿ ಹೊರಗಿನ ಅಂಗಳದಲ್ಲಿ ಮತ್ತೊಂದು ಜಯ ಸಾಧಿಸುವ ಉತ್ಸಾಹದಲ್ಲಿದೆ. ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 7 ರನ್‌ಗಳಿಂದ ಸೋತಿರುವ ಕೆಕೆಆರ್ ತವರಿನಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿದೆ.
ಎರಡೂ ತಂಡಗಳು ಐಪಿಎಲ್‌ನಲ್ಲಿ ಈವರೆಗೆ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 16 ಬಾರಿ ಜಯ ಸಾಧಿಸಿದ್ದು, ಆರ್‌ಸಿಬಿ 14 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಆದರೆ, ಕಳೆದ ಮೂರು ವರ್ಷಗಳಲ್ಲಿ 6 ಪಂದ್ಯಗಳಲ್ಲಿ ಕೆಕೆಆರ್ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆದ್ದರೆ, ಆರ್ ಸಿಬಿ 4 ಪಂದ್ಯಗಳಲ್ಲಿ ಗೆದ್ದಿದೆ, ಕಳೆದ ಆವೃತ್ತಿಯಲ್ಲಿ ಕೂಡ ಆರ್ ಸಿಬಿ ಕೆಕೆಆರ್ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತ್ತು.

2019ರ ಬಳಿಕ ಇದೇ ಮೊದಲ ಬಾರಿಗೆ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದೆ. ಇಂದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. 2019ರಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಹ್ಲಿ ಅಬ್ಬರಿಸಿದ್ದರು, ಅಮೋಘ ಶತಕ ಬಾರಿಸಿದ್ದರು. ಆರ್ ಸಿಬಿ ಈ ಪಂದ್ಯದಲ್ಲಿ 10 ರನ್‌ಗಳ ರೋಚಕ ಜಯ ಸಾಧಿಸಿ ಬೀಗಿತ್ತು.
ಮತ್ತೊಂದು ಶತಕ ಬರುತ್ತಾ?
ಐಪಿಎಲ್ 2023ರಲ್ಲಿ ಈಗಾಗಲೇ 8 ಪಂದ್ಯಗಳು ನಡೆದಿವೆ, ಇದುವರೆಗೂ ಈ ಆವೃತ್ತಿಯಲ್ಲಿ ಶತಕ ದಾಖಲಾಗಿಲ್ಲ. ಅತ್ಯುತ್ತಮ ಫಾರ್ಮ್‌ನಲ್ಲಿ ಮಿಂಚುತ್ತಿರುವ ಕೊಹ್ಲಿ ಬ್ಯಾಟ್‌ನಿಂದ ಈ ಬಾರಿ ಮೊದಲ ಶತಕ ಬರುತ್ತಾ ಅಂತ ಅಭಿಮಾನಿಗಳು ತುದಿಗಾಲಲ್ಲಿ ಕಾಯ್ತಿದ್ದಾರೆ. ಕೊಹ್ಲಿಗೆ ಈಡನ್ ಗಾರ್ಡನ್ಸ್‌ನಲ್ಲಿ ಬ್ಯಾಟಿಂಗ್ ಮಾಡೋದು ಅಂದ್ರೆ ನೀಡು ಕುಡಿದಷ್ಟೇ ಸುಲಭ, ಸ್ಟೇಡಿಯಂ ಯಾವ್ದಾದ್ರೇನು ಆಟ ನಂದೇ ಅನ್ನೋ ತರ ಬ್ಯಾಟಿಂಗ್ ಮಾಡ್ತಿದ್ದಾರೆ ಕೊಹ್ಲಿ.
2016ರ ಐಪಿಎಲ್‌ನಲ್ಲಿ ನೋಡಿದ್ದ ವಿರಾಟ್ ಕೊಹ್ಲಿಯನ್ನು ಈ ಬಾರಿ ನೋಡಬಹುದು ಎಂದು ಈಗಾಗಲೇ ಹಲವು ದಿಗ್ಗಜರು ಭವಿಷ್ಯ ಹೇಳಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧದ ಮೊದಲನೇ ಪಂದ್ಯದಲ್ಲೇ ಅವರ ಭವಿಷ್ಯವನ್ನು ನಿಜ ಮಾಡ್ತೀನಿ ಅನ್ನೋ ರೀತಿ ಬ್ಯಾಟ್ ಬೀಸಿದ್ದರು ಕಿಂಗ್ ಕೊಹ್ಲಿ, 49 ಎಸೆತಗಳಲ್ಲೇ ಅಜೇಯ 82 ರನ್ ಸಿಡಿಸುವ ಮೂಲಕ ಎದುರಾಳಿಗಳಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಐಪಿಎಲ್‌ನಲ್ಲಿ 4 ಶತಕ ಬಾರಿಸಿರುವ ಅವರು 5 ನೇ ಶತಕದ ಬಾರಿಸುವ ಉತ್ಸಾಹದಲ್ಲಿದ್ದಾರೆ.

2019ರಲ್ಲಿ ನಡೆದಿದ್ದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 58 ಎಸೆತಗಳಲ್ಲಿ 9 ಬೌಂಡರಿ 4 ಸಿಕ್ಸರ್ ಸಹಿತ 100 ರನ್ ಗಳಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಆರ್ ಸಿಬಿ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 213 ರನ್ ಗಳಿಸಿತ್ತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಕೆಕೆಆರ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 203 ರನ್ ಗಳಿಸುವ ಮೂಲಕ 10 ರನ್‌ಗಳಿಂದ ಸೋತಿತ್ತು.
ಸದ್ಯ ಅತ್ಯುತ್ತಮ ಫಾರ್ಮ್‌ನಲ್ಲಿರುವ ವಿರಾಟ್ ಕೊಹ್ಲಿ ಈ ಬಾರಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಕೊಹ್ಲಿ ಈಡನ್ ಗಾರ್ಡನ್ಸ್ ಅಂಗಳದಲ್ಲಿ ಅಬ್ಬರಿಸಿದರೆ ಆರ್ ಸಿಬಿ ತನ್ನ ಎರಡನೇ ಗೆಲುವನ್ನು ಸುಲಭವಾಗಿ ನೋಡಬಹುದಾಗಿದೆ. ಇಂದಿನ ಪಂದ್ಯದ ಟಿಕೆಟ್ ಸಂಪೂರ್ಣವಾಗಿ ಮಾರಾಟವಾಗಿದ್ದು, ಕೊಹ್ಲಿ ಬ್ಯಾಟಿಂಗ್ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರುವ ಸಾಧ್ಯತೆ ಇದೆ.