ಸದ್ಯ ನಡೆಯುತ್ತಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿದ ಎಂಟು ಪಂದ್ಯಗಳನ್ನೂ ಗೆದ್ದು ಸೋಲಿಲ್ಲದ ಸರದಾರನಂತೆ ಮೆರೆಯುತ್ತಿರುವ ಭಾರತ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಭದ್ರವಾಗಿದೆ.
ಭಾರತ ತಂಡದ ಪ್ರತಿಯೊಬ್ಬ ಆಟಗಾರರು ತಮ್ಮ ಜವಾಬ್ದಾರಿ ಅರಿತು ಪ್ರದರ್ಶನ ನೀಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲೂ ತಂಡವನ್ನು ಕೆಳಗಿಳಿಯಲು ಬಿಟ್ಟಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕಿರಿಯ ಆಟಗಾರರಿಗೆ ಮಾದರಿಯಾಗುವಂತೆ ಆಡಿದ್ದಾರೆ.

ವಿಶೇಷವಾಗಿ, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇದು ತಂಡದ ಇತರೆ ಆಟಗಾರರಿಗೆ ಹುರಿದುಂಬಿಸುತ್ತಿದೆ. ಇನ್ನು ಭಾರತದ ಬೌಲಿಂಗ್ ಪಡೆಯು ವಿಶ್ವದಲ್ಲೇ ಘಾತಕವಾಗಿದೆ ಎಂದು ಕ್ರಿಕೆಟ್ ಪಂಡಿತರೂ ಒಪ್ಪಿಕೊಂಡಿದ್ದಾರೆ.
ಲೀಗ್ ಹಂತದಲ್ಲಿ ಅಬ್ಬರದ ಆಟವಾಡಿ ಅಂಕಪಟ್ಟಿಯ ಎರಡನೇ ಸ್ಥಾನದಲ್ಲಿದ್ದ ಅಪಾಯಕಾರಿ ಹಾಗೂ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 83 ರನ್‌ಗಳಿಗೆ ಆಲೌಟ್ ಮಾಡಿ, ಈಡೆನ್ ಗಾರ್ಡನ್ಸ್ ಅಂಗಳದಲ್ಲಿ 243 ರನ್‌ಗಳ ಬೃಹತ್ ಗೆಲುವು ಸಾಧಿಸಿದ ಭಾರತ ತಂಡ ಎದುರಾಳಿ ತಂಡಗಳ ಮನದಲ್ಲಿ ಭಯ ಹುಟ್ಟುವಂತೆ ಮಾಡಿದೆ.

ಭಾರತ ತಂಡದ ಈ ಅಧಿಕಾರಯುತ ಪ್ರದರ್ಶನದ ಬಗ್ಗೆ ಮಾತನಾಡಿರುವ ನಾಯಕ ರೋಹಿತ್ ಶರ್ಮಾ, ತಮ್ಮ ಸಹ ಆಟಗಾರರಿಗೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. ಲೀಗ್ ಹಂತದ ಪಂದ್ಯಗಳ ಗೆಲುವಿನ ಅಮಲನ್ನು ತಲೆಗೆ ತೆಗೆದುಕೊಳ್ಳಬೇಡಿ, ಇದೇ ರೀತಿಯ ಸ್ಥಿರ ಪ್ರದರ್ಶನ ಮುಂದುವರೆಯಬೇಕು ಎಂದಿದ್ದಾರೆ
ಸತತ 8 ಗೆಲುವಿನ ಬಳಿಕ ತಂಡದ ಆಟಗಾರರು ಮೈ ಮರೆಯಬಾರದು. ಏಕೆಂದರೆ ಮುಂದಿನ ನಾಕೌಟ್ ಪಂದ್ಯಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಭಾರತ ತಂಡದ ಆಟಗಾರರಿಗೆ ಸಂದೇಶ ನೀಡಿದ್ದಾರೆ.
"ದಕ್ಷಿಣ ಆಫ್ರಿಕಾ ವಿರುದ್ಧದ ಈ ಗೆಲುವು ಬಹಳ ಸಂತಸ ತಂದಿದೆ. ಭಾರತ ತಂಡ ಟೂರ್ನಿಯಲ್ಲಿ ಅತ್ಯುತ್ತಮ ಕ್ರಿಕೆಟ್ ಆಡಿದೆ. ಅಂದಹಾಗೆ, ಈ ಗೆಲುವಿನೊಂದಿಗೆ ಮೈಮರೆಯುವಂತ್ತಿಲ್ಲ. ಏಕೆಂದರೆ ಬಹಳ ಮುಖ್ಯವಾದ ಪಂದ್ಯಗಳು ಮುಂದೆ ಬರಲಿವೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳನ್ನು ಆಡುವುದಿದೆ. ಈ ಪಂದ್ಯಗಳಲ್ಲೂ ಶ್ರೇಷ್ಠ ಆಟವಾಡಲು ನಾವು ತಯಾರಿರಬೇಕು," ಎಂದು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ನಂತರ ನಾಯಕ ರೋಹಿತ್ ಶರ್ಮಾ ತಮ್ಮ ಸಹ ಆಟಗಾರರಿಗೆ ಕಿವಿಮಾತು ಹೇಳಿದರು.
ಭಾರತ ತಂಡ 12 ವರ್ಷಗಳ ಬಳಿಕ ಐಸಿಸಿ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಎದುರು ನೋಡುತ್ತಿದೆ. ಕೊನೆಯ ಬಾರಿಗೆ 2011ರಲ್ಲಿ ತವರಿನಲ್ಲೇ ನಡೆದಿದ್ದ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್ ಜಯಿಸಿತ್ತು. ಇದೀಗ ಅಂತಹದೇ ಮತ್ತೊಂದು ಅವಕಾಶ ಬಂದಿದೆ. ಇನ್ನು 2013ರಲ್ಲಿ ಗೆದ್ದಿದ್ದ ಚಾಂಪಿಯನ್ಸ್ ಟ್ರೋಫಿ ಕೊನೆಯ ಐಸಿಸಿ ಪ್ರಶಸ್ತಿಯಾಗಿದೆ.
ತವರಿನ ಅಭಿಮಾನಿಗಳ ದೊಡ್ಡ ಬೆಂಬಲದೊಂದಿಗೆ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲು ಭಾರತ ತಂಡದ ಆಟಗಾರರು ಹಿಂದಿನ ಗೆಲುವುಗಳಿಂದ ಸ್ಫೂರ್ತಿ ಪಡೆದುಕೊಂಡು ಮುಂದಿನ ಪಂದ್ಯಗಳತ್ತ ಗಮನ ಹರಿಸಬೇಕಿದೆ.
ಇನ್ನು 2023ರ ಏಕದಿನ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ 50ನೇ ಏಕದಿನ ಶತಕದ ಮೇಲೆ ಕಣ್ಣಿಟ್ಟಿದ್ದಾರೆ. ಗಮನಾರ್ಹ ಸಂಗತಿಯೆಂದರೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಭಾನುವಾರ, ನವೆಂಬರ್ 12ರಂದು ಬೆಂಗಳೂರಿನಲ್ಲಿ ಎದುರಿಸಲು ಸಜ್ಜಾಗಿದೆ. ಇದು ವಿಶ್ವಕಪ್‌ನಲ್ಲಿ ಭಾರತದ ಕೊನೆಯ ಗುಂಪು-ಹಂತದ ಪಂದ್ಯವಾಗಿದೆ.