Rohit Sharma: ಪಾಕಿಸ್ತಾನಕ್ಕೆ ನಾಯಕ ರೋಹಿತ್ ಶರ್ಮಾ ಹೋಗೋದು ಡೌಟ್!
ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿಗೆ ಸಂಬಂಧಿಸಿದ ಗದ್ದಲವು ನಿಲ್ಲುವ ಯಾವುದೇ ಲಕ್ಷಣಗಳನ್ನು ಕಾಣಿಸುತ್ತಿಲ್ಲ. ಈ ಮೆಗಾ ಟೂರ್ನಿಗೆ ಆಯೋಜಿಸುವ ಬಗ್ಗೆ ಐಸಿಸಿ ನಿರ್ಧಾರವು ಈಗಾಗಲೇ ಪಾಕಿಸ್ತಾನಕ್ಕೆ ನೋವುಂಟು ಮಾಡಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆ ಗಾಯವನ್ನು ಹುಣ್ಣಾಗಿ ಪರಿವರ್ತಿಸಲು ಹೊರಟಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂಬ ಸುದ್ದಿ ಹೊರ ಬಿದ್ದಿದೆ. ಈ ಸಂಬಂಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಅಧಿಕಾರಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ಚಾಂಪಿಯನ್ಸ್ ಟ್ರೋಫಿ 2025ರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಭೇಟಿ ನೀಡುವುದಿಲ್ಲ ಎಂದು ವರದಿಗಳು ಹೇಳಿವೆ. ಚಾಂಪಿಯನ್ಸ್ ಟ್ರೋಫಿ ಫೋಟೋಶೂಟ್ ಗಾಗಿ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ ಎಂಬ ವರದಿಗಳಿದ್ದವು. ಆದರೆ ಇದೀಗ ಪಿಸಿಬಿ ಅಧಿಕಾರಿಯ ಹೇಳಿಕೆ ಪ್ರಕಾರ ರೋಹಿತ್ ಶರ್ಮಾ ಪಾಕಿಸ್ತಾನ ಪ್ರವಾಸ ಮಾಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.

ಚಾಂಪಿಯನ್ಸ್ ಟ್ರೋಫಿಯ ಸಂಪೂರ್ಣ ಆತಿಥ್ಯವನ್ನು ವಹಿಸುವ ಅವಕಾಶವನ್ನು ಪಾಕಿಸ್ತಾನ ಹೊಂದಿತ್ತು. ಆದರೆ ಬಿಸಿಸಿಐ ಮತ್ತು ಪಿಸಿಬಿ ನಡುವಿನ ಭಿನ್ನಾಭಿಪ್ರಾಯಗಳಿಂದಾಗಿ, ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲು ನಿರ್ಧರಿಸಿತು. ಹೀಗಾಗಿ ಈಗ ಭಾರತ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಆದಾಗ್ಯೂ, ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ಸ್ ಟ್ರೋಫಿಯ ಫೋಟೋಶೂಟ್‌ಗಾಗಿ ಎಲ್ಲಾ ತಂಡದ ನಾಯಕರು ಪಾಕಿಸ್ತಾನಕ್ಕೆ ಹೋಗಲಿದ್ದಾರೆ. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾಹೋಗುವ ಬಗ್ಗೆ ಪಾಕಿಸ್ತಾನ ಮಾಧ್ಯಮಗಳಲ್ಲಿ ವರದಿಗಳಾಗಿದ್ದವು.
ಪಿಸಿಬಿ ಅಧಿಕಾರಿ ಹೇಳಿದ್ದೇನು?
ಬಿಸಿಸಿಐ ಕ್ರಿಕೆಟ್‌ನಲ್ಲಿ ರಾಜಕೀಯವನ್ನು ತರುತ್ತಿದೆ. ಇದು ಆಟಕ್ಕೆ ಒಳ್ಳೆಯದಲ್ಲ. ಮೊದಲು ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿದರು. ಈಗ ಅವರು ಉದ್ಘಾಟನಾ ಸಮಾರಂಭಕ್ಕೆ ನಾಯಕನನ್ನು ಕಳುಹಿಸುತ್ತಿಲ್ಲ. ಈಗ ಜೆರ್ಸಿಯಲ್ಲಿ ಆತಿಥೇಯ ದೇಶದ ಹೆಸರು ಬೇಡ ಎಂಬ ವರದಿಗಳು ಬರುತ್ತಿವೆ. ಐಸಿಸಿ ಇದಕ್ಕೆ ಅವಕಾಶ ನೀಡುವುದಿಲ್ಲ. ಪಾಕಿಸ್ತಾನ ಬೆಂಬಲಕ್ಕೆ ನಿಲ್ಲಲಿದೆ ಎಂದು ಭಾವಿಸುತ್ತೇನೆ ಎಂದು ಪಿಸಿಬಿ ಅಧಿಕಾರಿ ಹೇಳಿದ್ದಾರೆ.
ಹೈವೋಲ್ಟೇಜ್ ಪಂದ್ಯ
ಫೆಬ್ರವರಿ 19 ರಿಂದ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಫೆಬ್ರವರಿ 20 ರಿಂದ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ಅಭಿಯಾನ ಆರಂಭಿಸಲಿದೆ. ಇದಕ್ಕಾಗಿ ಬಿಸಿಸಿಐ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ಮೊಹಮ್ಮದ್ ಶಮಿ ಕೂಡ ಸ್ಥಾನ ಪಡೆದಿದ್ದಾರೆ. ಫೆಬ್ರವರಿ 23 ರಂದು ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications