ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಕರ್ನಾಟಕ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಐಪಿಎಲ್‌ನಷ್ಟೇ ಕ್ರೇಜ್‌ನ್ನು ಈ ಲೀಗ್ ಹುಟ್ಟು ಹಾಕಿದೆ. ಪ್ರತಿ ರನ್ ಹಾಗೂ ವಿಕೆಟ್‌ಗೆ ಜಿದ್ದು ಕಂಡು ಬರುತ್ತದೆ. ಶುಕ್ರವಾರದಿಂದ ವಿಶಾಖಪಟ್ಟಣಂನಲ್ಲಿ ಸಿಸಿಎಲ್ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಪಂಜಾಬ್ ದಿ ಶೇರ್ ಹಾಗೂ ಕರ್ನಾಟಕ ಬುಲ್ಡೋಜರ್ಸ್ ತಂಡಗಳು ಕಾದಾಟ ನಡೆಸಿದವು. ಕಳೆದ ಬಾರಿಯ ಲೀಗ್‌ನಲ್ಲಿ ಕರ್ನಾಟಕ ಎಡವಿತ್ತು. ಆದರೆ ಈ ಬಾರಿ ಅಮೋಘ ಪ್ರದರ್ಶನ ನೀಡಿ ಗೆಲುವಿನ ನಗೆ ಬೀರಿದೆ.
ವಿಶಾಖಪಟ್ಟಣಂನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ತಂಡದ ನಾಯಕ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಕಳೆದ ಆವೃತ್ತಿಯ ಸಿಸಿಎಲ್‌ನಲ್ಲಿ ಪ್ರತಿ ತಂಡಗಳಿಗೂ 10 ಓವರ್‌ಗಳ ಎರಡು ಇನಿಂಗ್ಸ್ ನೀಡಲಾಗಿತ್ತು. ಆದರೆ ಈ ಬಾರಿ 20 ಓವರ್‌ಗಳ ಪಂದ್ಯವನ್ನು ನಡೆಸಲಾಯಿತು. ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡಕ್ಕೆ ಆರಂಭದಲ್ಲಿ ಭಾರೀ ಪೆಟ್ಟು ಬಿದ್ದಿತು.

ಪಂದ್ಯದ ನಾಲ್ಕನೇ ಓವರ್‌ನಲ್ಲಿ ಕರ್ನಾಟಕ ತಂಡಕ್ಕೆ ಬ್ಯಾಕ್ ಟು ಬ್ಯಾಕ್ ಶಾಕ್ ನೀಡುವಲ್ಲಿ ದಕ್ಷ್ ಸಿಂಗ್ ಸಫಲರಾದರು. ಈ ಓವರ್‌ನಲ್ಲಿ ದಕ್ಷ್ ಸಿಂಗ್ ಅವರು ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಇವರು ಡಾರ್ಲಿಂಗ್ ಕೃಷ್ಣ.. ರಾಜೀವ್ ಹನು ಮತ್ತು ಕಿಚ್ಚ ಸುದೀಪ್ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ದಕ್ಷ ಸಿಂಗ್ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಆ ನಂತರ ಪ್ರದೀಪ್ ಕೂಡ ನಿಂಜಾಗೆ ವಿಕೆಟ್ ಒಪ್ಪಿಸಿದರು.
ಆರಂಭದಲ್ಲಿ ಪಟಪಟನೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಕರಣ್ ಆರ್ಯನ್ ಆಧಾರವಾದರು. ಇವರು ತಮ್ಮ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಕರ್ನಾಟಕ ಉತ್ತಮ ಮೊತ್ತವನ್ನು ಕಲೆ ಹಾಕಲು ನೆರವಾಯಿತು. ಇವರು 33 ಎಸೆತಗಳಲ್ಲಿ 83ರನ್ ಸಿಡಿಸಿದರು. ಕರುಣ್ ಆಟದ ಬಲದಿಂದ ಕರ್ನಾಟಕ 20 ಓವರ್‌ಗಳಲ್ಲಿ 170ರನ್‌ಗಳನ್ನು ಗಳಿಸಿತ್ತು.
171 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಪಂಜಾಬ್ ತಂಡದ ಆರಂಭ ಸಹ ಕಳಪೆಯಾಗಿತ್ತು. ಉತ್ತಮ ಆರಂಭವನ್ನು ಕಾಣುವ ಕನಸು ಕಂಡಿದ್ದ ಪಂಜಾಬ್ ತಂಡಕ್ಕೆ ಆರಂಭದಲ್ಲಿ ಪ್ರದೀಪ್ ಪೆಟ್ಟು ನೀಡಿದರು. ಸುನಿಲ್ ರಾವ್ ಸಹ ತಮ್ಮ ಬೌಲಿಂಗ್ ಕಮಾಲ್ ತೋರಿಸಿದರು. ಆರಂಭದಲ್ಲಿ ಮೂರು ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಚೇತರಿಸಿಕೊಳ್ಳುವ ಸೂಚನೆಯನ್ನೇ ನೀಡಲಿಲ್ಲ. ಪಂಜಾಬ್ ಪರ ರಾಹುಲ್ ಜೇಟ್ಲಿ 44 ಬಾಲ್‌ಗಳಲ್ಲಿ 68 ರನ್ ಸಿಡಿಸಿ ತಂಡದ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಪಂಜಾಬ್ 139 ರನ್‌ಗಳಿಗೆ ಆಲೌಟ್ ಆಯಿತು. ಕರ್ನಾಟಕ ಸ್ಥಿರ ಪ್ರದರ್ಶನ ನೀಡಿ 31 ರನ್‌ಗಳ ಗೆಲುವು ದಾಖಲಿಸಿತು. ಈ ಮೂಲಕ ಕಿಚ್ ಸುದೀಪ್ ಮುಂದಾಳತ್ವದ ಕರ್ನಾಟಕ ತಂಡ ಸಿಸಿಎಲ್ 2026ರಲ್ಲಿ ಶುಭಾರಂಭವನ್ನು ಮಾಡಿದೆ.