
ಭಾರತದಲ್ಲಿ ಇನ್ನು ಕ್ರಿಕೆಟ್ ಪಂದ್ಯಗಳು ನಡೆಯುವ ವೇಳೆ ಡ್ರೋನ್ ಹಾರಾಟವನ್ನು ನಡೆಸಲಿದೆ. ಚಿತ್ರೀಕರಣದ ಉದ್ದೇಶದಿಂದ ಈ ಡ್ರೋನ್‌ಗಳು ಹಾರಾಟವನ್ನು ನಡೆಸಲಿದ್ದು ಕೇಂದ್ರ ಸರ್ಕಾರದ ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಷರತ್ತುಬದ್ಧ ಅನುಮತಿಯನ್ನು ನೀಡಿದೆ.
ನಾಗರೀಕ ವಿಮಾನಯಾನಗಳ ಸಚಿವಾಲಯ ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ ಸೋಮವಾರ ಈ ಅನುಮತಿ ನೀಡಿರುವುದನ್ನು ಅಧಿಕೃತವಾಗಿ ಘೋಷಿಸಿದೆ. ಈ ಷರತ್ತುಬದ್ಧ ವಿನಾಯಿತಿ 2021ರ ಡಿಸೆಂಬರ್ 31ರ ವರೆಗೆ ಮಾತ್ರವೇ ಇರಲಿದೆ ಎಂದು ಕೂಡ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ಆದೇಶದಲ್ಲಿ ಡ್ರೋನ್ ಬಳಕೆಗೆ ಮುನ್ನ ಬಿಸಿಸಿಐ ಅಗತ್ಯವಾಗಿ ಕೆಲ ವಿಭಾಗಗಳ ಅಗತ್ಯ ಅನುಮತಿಯನ್ನು ಪಡೆದುಕೊಳ್ಳಬೇಕು ಎಂಬುದನ್ನು ಕೂಡ ತಿಳಿಸಿದೆ. 1) ಸ್ಥಳೀಯ ಆಡಳಿತ, 2) ರಕ್ಷಣಾ ಸಚಿವಾಲಯ 3) ಗೃಹ ಸಚಿವಾಲಯ 4) ವಾಯುಸೇನೆ ಈ ವಿಭಾಗಗಳಿಂದ ಬಿಸಿಸಿಐ ಅನುಮತಿಯನ್ನು ಪಡೆದು ಡ್ರೋನ್ ಬಳಸಲು ಅನುಮತಿಯನ್ನು ನೀಡಲಾಗಿದೆ.
"ಇನ್ನು ಪ್ರಮಾಣಿತ ಕಾರ್ಯಾಚರಣಾ ವಿಧಾನದ(ಎಸ್‌ಒಪಿ) ಪ್ರಕಾರ ಬಿಸಿಸಿಸಿಐ ಅನುಮೋದಿತ ತರಬೇತಿ ಪಡೆದ ಸಿಬ್ಬಂದಿ ಡ್ರೋನ್ ಹಾರಾಟವನ್ನು ನಡೆಸುತ್ತಾರೆ ಎಂಬುದನ್ನು ಖಚಿತಪಡಿಸಬೇಕು" ಎಂದು ಬಿಸಿಸಿಐಗೆ ನೀಡಿರುವ ಅನುಮತಿ ಪತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಇದರ ಜೊತೆಗೆ ಐದು ಪ್ರಮುಖ ಷರತ್ತುಗಳನ್ನು ಕೂಡ ಉಲ್ಲೇಖ ಮಾಡಿದೆ.
ಕ್ರಿಕೆಟ್ ಕ್ಷೇತ್ರದಲ್ಲಿ ವಿಡಿಯೋ ಚಿತ್ರೀಕರಣದ ಸಲುವಾಗಿ ಡ್ರೋನ್ ಬಳಕೆ ಇದೇನು ಮೊದಲಲ್ಲ. ಆದರೆ ಈ ಬಾರಿ ಕೇಂದ್ರ ಸರ್ಕಾರ ಡ್ರೋನ್ ಬಳಕೆಗೆ ಕಠಿಣ ಷರತ್ತುಗಳನ್ನು ವಿಧಿಸಿದೆ. ಹೀಗಾಗಿ ಈ ಷರತ್ತುಗಳನ್ನು ಒಪ್ಪಿ ಬಿಸಿಸಿಐ ಡ್ರೋನ್ ಬಳಸಿ ಚಿತ್ರೀಕರಣ ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಮುಂದೆ ಐಪಿಎಲ್ ಸಮೀಪಿಸುತ್ತಿದ್ದು ಭಾರತದಲ್ಲೇ ಈ ಬಾರಿಯ ಐಪಿಎಲ್ ನಡೆಯುವ ಕಾರಣ ಈ ಟೂರ್ನಿಯಲ್ಲಿ ಬಿಸಿಸಿಐ ಪಂದ್ಯದ ನೇರಪ್ರಸಾರದ ಚಿತ್ರೀಕರಣಕ್ಕೆ ಡ್ರೋನ್ ಬಳಕೆ ಮಾಡುವ ಸಾಧ್ಯತೆಯಿದೆ.