ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ 7ನೇ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. ಉಭಯ ತಂಡಗಳ ಪಂದ್ಯ ಪಾಕಿಸ್ತಾನದ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಮಧ್ಯಾಹ್ನ 2:30 ಗಂಟೆಗೆ ಕ್ಕೆ ಆರಂಭವಾಗಬೇಕಿತ್ತು. ಆದರೆ ರಾವಲ್ಪಿಂಡಿಯಲ್ಲಿ ಭಾರೀ ಮಳೆಯಿಂದಾಗಿ ಪಂದ್ಯ ಇನ್ನೂ ಪ್ರಾರಂಭವಾಗಿಲ್ಲ, ಟಾಸ್ ಕೂಡ ಇನ್ನೂ ನಡೆದಿಲ್ಲ.
ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಪಂದ್ಯದ ಫಲಿತಾಂಶ ಬರಬೇಕಾದರೆ, ಎರಡೂ ತಂಡಗಳ ನಡುವೆ ಕನಿಷ್ಠ ತಲಾ 25 ಓವರ್‌ಗಳ ಆಟ ಪೂರ್ಣಗೊಳ್ಳಬೇಕು. ಪಂದ್ಯದಲ್ಲಿ ಒಂದೇ ಓವರ್ ಕಡಿಮೆಯಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಈ ಪಂದ್ಯಕ್ಕೆ ಯಾವುದೇ ಮೀಸಲು ದಿನವನ್ನು ಕಾಯ್ದಿರಿಸಲಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಪಂದ್ಯವು ಬಹುತೇಕ ರದ್ದಾಗುವ ಸಾಧ್ಯತೆ ಇದೆ.

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಈ ಪಂದ್ಯ ರದ್ದಗಿರುವುದರಿಂದ ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕಗಳನ್ನು ನೀಡಲಾಗುತ್ತದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಅಂಕಪಟ್ಟಿಯಲ್ಲಿ 3 ಪಾಯಿಂಟ್‌ಗಳನ್ನು ಹೊಂದಿರುತ್ತವೆ. ಆದರೆ ರನ್ ರೇಟ್ ವಿಷಯದಲ್ಲಿ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿರುತ್ತದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿರುತ್ತದೆ. ಈ ಪಂದ್ಯ ಮಳೆಯಿಂದಾಗಿ ರದ್ದಾರುವುದು ಬಿ ಗುಂಪಿನಲ್ಲಿ ರೋಚಕತೆ ಹುಟ್ಟಿಸಿದೆ. ಯಾವ ತಂಡ ಬಿ ಗುಂಪಿನಿಂದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ತಲುಪಲಿದೆ ಎಂಬ ಲೆಕ್ಕಚಾರ ಶುರುವಾಗಿದೆ.
ಚಾಂಪಿಯನ್ಸ್ ಟ್ರೋಫಿ ಬಿ ಗುಂಪಿನಲ್ಲಿ ಮುಂದಿನ ಪಂದ್ಯ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ತಂಡವು ತನ್ನ ಮೂರನೇ ಮತ್ತು ಅಂತಿಮ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಸೆಮಿಫೈನಲ್‌ಗೆ ಪ್ರವೇಶಿಸುವ ಅವಕಾಶವನ್ನು ಹೊಂದಿರುತ್ತದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದ ಫಲಿತಾಂಶ ಹೊರಬಂದರೆ, ಆಫ್ರಿಕಾ ಅಥವಾ ಆಸ್ಟ್ರೇಲಿಯಾದ ತಂಡಗಳಲ್ಲಿ ಒಂದು ಸೆಮಿಫೈನಲ್ ತಲುಪುವ ಸಾಧ್ಯತೆ ಹೆಚ್ಚಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ರದ್ದಾದ ನಂತರ ಸೆಮಿಫೈನಲ್ ತಲುಪಲು ಆಸ್ಟ್ರೇಲಿಯಾ ಶುಕ್ರವಾರ ಅಫ್ಘಾನಿಸ್ತಾನ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲಲೇಬೇಕು. ಆಗ ಆಸೀಸ್ 5 ಅಂಕಗಳನ್ನು ಗಳಿಸುವ ಮೂಲಕ ಸೆಮಿಫೈನಲ್ ತಲುಪಲಿದೆ. ಒಂದು ವೇಳೆ ಅಫ್ಘಾನಿಸ್ತಾನ ವಿರುದ್ಧ ಆಸೀಸ್ ಸೋತರೆ, 3 ಅಂಕಗಳೊಂದಿಗೆ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯುವ ಸಾಧ್ಯತೆಯಿದೆ.
ದಕ್ಷಿಣ ಆಫ್ರಿಕಾ ಸೆಮಿಫೈನಲ್ ತಲುಪಬೇಕಾದರೆ ಯಾವುದೇ ಬೆಲೆ ತೆತ್ತಾದರೂ ತನ್ನ ಕೊನೆಯ ಲೀಗ್ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಗೆಲ್ಲಲೇಬೇಕು. ಈ ಸಂದರ್ಭದಲ್ಲಿ ಆಫ್ರಿಕಾ ತಂಡ ಕೂಡ 5 ಅಂಕಗಳನ್ನು ಪಡೆಯಲಿದ್ದು, ಸೆಮಿಫೈನಲ್ ಪ್ರವೇಶಿಸಲಿದೆ. ಈ ಪಂದ್ಯದಲ್ಲಿ ಆಫ್ರಿಕಾ ತಂಡವನ್ನು ಇಂಗ್ಲೆಂಡ್ ಸೋಲಿಸಿದರೆ ಸೆಮಿಫೈನಲ್‌ನಿಂದ ಹೊರಬೀಳಲಿದೆ.
ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಲಾ ಒಂದು ಪಂದ್ಯ ಆಡಿವೆ. ಈ ಎರಡೂ ತಂಡಗಳು ಪಾಯಿಂಟ್ಸ್ ಪಟ್ಟಿಯಲ್ಲಿ ತಮ್ಮ ಖಾತೆಯನ್ನು ತೆರೆದಿಲ್ಲ. ಈಗ ಈ ಎರಡೂ ತಂಡಗಳು ಸೆಮಿಫೈನಲ್ ತಲುಪಬೇಕಾದರೆ ಉಳಿದ ಎರಡು ಲೀಗ್ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಎರಡೂ ತಮ್ಮ ಕೊನೆಯ ಪಂದ್ಯಗಳನ್ನು ಸೋಲಲಿ ಎಂದು ಪ್ರಾರ್ಥಿಸಬೇಕಾಗುತ್ತದೆ. ಆದರೆ ಈ ಸಮೀಕರಣವು ಇಂಗ್ಲೆಂಡ್ ಅಥವಾ ಅಫ್ಘಾನಿಸ್ತಾನ ತಂಡಗಳ ಪೈಕಿ ಒಂದಕ್ಕೆ ಮಾತ್ರ ಅನ್ವಯಿಸಲಿದೆ.
ಏಕೆಂದರೆ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ತಮ್ಮ ಎರಡನೇ ಲೀಗ್ ಪಂದ್ಯವನ್ನು ಪರಸ್ಪರ ಆಡಲಿವೆ. ಆ ಪಂದ್ಯವನ್ನು ಗೆದ್ದ ತಂಡಕ್ಕೆ ಸೆಮಿಫೈನಲ್‌ಗೆ ಹೋಗುವ ಅವಕಾಶವಿರುತ್ತದೆ. ಆದರೆ ಸೋತ ತಂಡವು ಅದೇ ದಿನ ಸೆಮಿಫೈನಲ್ ರೇಸ್‌ನಿಂದ ಹೊರಗುಳಿಯಲಿದೆ. ಫೆಬ್ರವರಿ 26 ರಂದು ಅಂದರೆ ನಾಳೆ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ಕುತೂಹಲ ಮೂಡಿಸಿದೆ.