Champions Trophy 2025: ಈ ತಂಡಗಳ ನಡುವೆ ಫೈನಲ್ ಫೈಟ್: ಮಾಜಿ ಆಟಗಾರರ ಭವಿಷ್ಯ
ಒಂದು ಕ್ರಿಕೆಟ್ ಸರಣಿ ಆರಂಭವಾಗುವ ಮುನ್ನ ಮಾಜಿ ಆಟಗಾರರು ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸುತ್ತಾರೆ. ಅಂತೆಯೇ ಇನ್ನೇನು ಕೆಲವೇ ದಿನಗಳಲ್ಲಿ ಪಾಕಿಸ್ತಾನದ ಆಶ್ರಯದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಈ ಮೆಗಾ ಟೂರ್ನಿಯ ಬಗ್ಗೆ ಮಾಜಿ ಆಟಗಾರರು ತಮ್ಮ ತಮ್ಮ ಭವಿಷ್ಯ ನುಡಿದಿದ್ದಾರೆ. ಇನ್ನು ಟೂರ್ನಿ ಆರಂಭವಾಗಲು ದಿನಗಣನೆ ಇದ್ದು ಅದಗಾಲೇ ಆಟಗಾರರು ತಮ್ಮ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.
ಈ ಸಾಲಿನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ರವಿ ಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಸೇರುತ್ತಾರೆ. ಇವರಿಬ್ಬರೂ ಸಹ ಚಾಂಪಿಯನ್ಸ್ ಟ್ರೋಫಿಯ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಉಭಯ ಮಾಜಿ ಆಟಗಾರರು ಯಾರು ಚಾಂಪಿಯನ್ಸ್ ಟ್ರೋಫಿ ಗೆಲ್ಲಲಿದ್ದಾರೆ ಎಂಬ ಬಗ್ಗೆ ಭವಿಷ್ಯ ನುಡಿದಿಲ್ಲ. ಆದರೆ ಈ ಎರಡೂ ತಂಡಗಳೇ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಮುಖಾಮುಖಿ ಆಗಲಿವೆ ಎಂದು ಉಭಯ ನಾಯಕರು ತಿಳಿಸಿದ್ದಾರೆ.

ಯಾವ ತಂಡಗಳು ಫೈನಲ್‌ಗೆ?
ಟೀಮ್ ಇಂಡಿಯಾ ಮಾಜಿ ಕೋಚ್ ರವಿ ಶಾಸ್ತ್ರಿ ಹಾಗೂ ರಿಕ್ಕಿ ಪಾಂಟಿಂಗ್ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಫೈನಲ್ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ನಡೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಅಲ್ಲದೆ ರವಿ ಶಾಸ್ತ್ರಿ ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ತಂಡಗಳನ್ನು ಸಹ ಹೆಸರಿಸಿದ್ದಾರೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡಗಳಿಗೂ ಉಪಾಂತ್ಯ ತಲುಪುವ ಚಾನ್ಸ್ ಇದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.
ಭಾರತ, ಆಸ್ಟ್ರೇಲಿಯಾ ತಂಡಗಳು ಕಳೆದ ಎರಡು ವರ್ಷಗಳಲ್ಲಿ ಎರಡು ಬಾರಿ ಐಸಿಸಿ ಟ್ರೋಫಿಯ ಫೈನಲ್‌ನಲ್ಲಿ ಕಾದಾಟ ನಡೆಸಿವೆ. 2023ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಹೋರಾಟ ನಡೆಸಿದರೆ, ಭಾರತದಲ್ಲಿ ನಡೆದ 2023 ರ ಏಕದಿನ ವಿಶ್ವಕಪ್‌ನಲ್ಲಿ ಉಭಯ ತಂಡಗಳು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿದ್ದವು. ಆದರೆ ಎರಡೂ ಪಂದ್ಯಗಳನ್ನು ಗೆದ್ದ ಆಸ್ಟ್ರೇಲಿಯಾ ಟ್ರೋಫಿ ಗೆದ್ದು ಕೊಂಡಿದೆ. ಹೀಗಾಗಿ ಹ್ಯಾಟ್ರಿಕ್ ಐಸಿಸಿ ಫೈನಲ್ ನಿರೀಕ್ಷೆಯಲ್ಲಿ ಉಭಯ ತಂಡಗಳು ಇವೆ.

ಏಳು ವರ್ಷಗಳ ಬಳಿಕ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಎಂಟು ತಂಡಗಳು ಭಾಗವಹಿಸಲಿವೆ. ಈ ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಪ್ರವಾಸ ಬೆಳೆಸದ ಹಿನ್ನೆಲೆ, ದುಬೈನಲ್ಲಿ ಪಂದ್ಯಗಳನ್ನು ಆಡಲಿದೆ. ಟೀಮ್ ಇಂಡಿಯಾ ತನ್ನ ಎಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಇನ್ನು ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದೆ. ಫೆಬ್ರವರಿ 20 ರಂದು ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಆಡಲಿದೆ.
ಭಾರತ ಚಾಂಪಿಯನ್ಸ್ ಟ್ರೋಫಿ ನಾಕೌಟ್ ಹಂತಕ್ಕೆ ಪ್ರವೇಶಿಸಿದರೆ, ಈ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಇಲ್ಲದೆ ಇದ್ದಲ್ಲಿ ಪಾಕ್‌ನಲ್ಲಿ ನಡೆಯಲಿದೆ. ಪ್ರಶಸ್ತಿ ಸುತ್ತಿನ ಕಾದಾಟ ಮಾರ್ಚ್ 9 ರಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications