ಏಳು ವರ್ಷಗಳ ಬಳಿಕ ಮತ್ತೆ ಚಾಂಪಿಯನ್ಸ್ ಟ್ರೋಫಿ ರಂಗು ವಿಶ್ವದಲ್ಲಿ ಪಸರಿಸಲು ವೇದಿಕೆ ಸಿದ್ಧವಾಗಿದೆ. ಈ ಬಾರಿ ಮೆಗಾ ಐಸಿಸಿ ಟೂರ್ನಿಗೆ ಪಾಕ್ ಆತಿಥ್ಯ ವಹಿಸಲಿದೆ. ಈಗಾಗಲೇ ಬಹಬುತೇಕ ತಂಡಗಳು ತಮ್ಮ ತಂಡವನ್ನು ಪ್ರಕಟಿಸಿವೆ. ಆದರೆ ಭಾರತ ಮಾತ್ರ ಇನ್ನು ತಂಡವನ್ನು ಪ್ರಕಟಿಸಿಲ್ಲ. ಇತ್ತೀಚಿಗೆ ದಕ್ಷಿಣ ಆಫ್ರಿಕಾ ಸಹ ತನ್ನ ತಂಡವನ್ನು ಪ್ರಕಟಿಸಿತ್ತು. ಈ ತಂಡವನ್ನು ತೆಂಬು ಬವುಮಾ ಮುನ್ನಡೆಸುತ್ತಿದ್ದು ಸ್ಟಾರ್ ಆಟಗಾರರನ್ನು ಹೊಂದಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಹರಿಣಗಳ ಪಡೆಗೆ ಪೆಟ್ಟು ಬಿದ್ದಿದೆ.
ದಕ್ಷಿಣ ಆಫ್ರಿಕಾ ಪ್ರಕಟಿತ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್ ವೇಗಿ ಎನ್ರಿಕ್ ನೋಕಿಯಾ ಗಾಯದ ಸಮಸ್ಯೆಯಿಂದ ಚಾಂಪಿಯನ್ಸ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ. ಈ ಸುದ್ದಿ ನಿಜಕ್ಕೂ ಆಫ್ರಿಕಾ ತಂಡಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತರಿಸಿದೆ. ಇವರು ತಮ್ಮ ಶಿಸ್ತು ಬದ್ಧ ದಾಳಿಯಿಂದಲೇ ಎದುರಾಳಿಗಳಿಗೆ ಕಾಡಬಲ್ಲ ಕ್ಷಮತೆ ಹೊಂದಿದ್ದರು.

ಎನ್ರಿಕ್ ನೋಕಿಯಾ ಗಾಯದಿಂದ ಚೇತರಿಸಿಕೊಂಡು, ಪಾಕಿಸ್ತಾನ ವಿರುದ್ಧ ಏಕದಿನ ಸರಣಿಯಲ್ಲಿ ತಂಡವನ್ನು ಸೇರಿಕೊಂಡಿದ್ದರು. ಆದರೆ ನೆಟ್ಸ್ ಅಭ್ಯಾಸದ ವೇಳೆ ಕಾಲಿಗೆ ಗಾಯವಾಗಿದ್ದರಿಂದ ಮತ್ತೆ ಅವರು ಒಂದು ಪಂದ್ಯದಿಂದ ದೂರ ಉಳಿಯಬೇಕಾಯಿತು. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ20 ಲೀಗ್‌ನಲ್ಲಿ ಇವರು ಪ್ರಿಟೋರಿಯಾ ಕ್ಯಾಪಿಟಲ್ಸ್ ಆಡಬೇಕಿತ್ತು. ಆದರೆ ಇವರು ಬೆಂಚ್ ಮೇಲೆ ಕುಳಿತಿದ್ದಾರೆ.
ವೆಸ್ಟ್ ಇಂಡೀಸ್ ಹಾಗೂ ಅಮೆರಿಕದ ಆಶ್ರಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಬಳಿಕ ಎನ್ರಿಕ್ ನೋಕಿಯಾ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ ನಡೆಯುವ ತ್ರಿಕೋನ ಸರಣಿಯಲ್ಲಿ ಇವರ ಆಡಬೇಕಿತ್ತು. ಆದರೆ ಈ ಸರಣಿಯಿಂದ ಹೊರ ನಡೆದಿದ್ದು, ಚಾಂಪಿಯನ್ಸ್ ಟ್ರೋಫಿಗೂ ಇವರು ಅಲಭ್ಯರಾಗಲಿದ್ದಾರೆ.

ಎನ್ರಿಕ್ ನೋಕಿಯಾ ಸೋಮವಾರ ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಈ ವೇಳೆ ಅವರ ಗಾಯದ ತಿವ್ರತೆ ಬೆಳಕಿಗೆ ಬಂದಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆಯೂ ಇವರು ಫಿಟ್ ಆಗುವುದು ಡೌಟ್ ಎಂದು ಹೇಳಲಾಗುತ್ತಿದೆ. ಈಗ ಎನ್ರಿಕ್ ನೋಕಿಯಾ ಮೂರನೇ ಐಸಿಸಿ ಮೆಗಾ ಟೂರ್ನಿಯನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. 2019ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್, ಭಾರತದಲ್ಲಿ ನಡೆದಿದ್ದ 2023 ಏಕದಿನ ವಿಶ್ವಕಪ್‌ಗಳನ್ನು ಇವರು ಮಿಸ್ ಮಾಡಿಕೊಂಡಿದ್ದರು. ಇವರು ಚಾಂಪಿಯನ್ಸ್ ಟ್ರೋಫಿಯಿಂದಲೂ ಹೊರ ಹೋಗಲಿದ್ದಾರೆ.
ಎನ್ರಿಕ್ ನೋಕಿಯಾ 2023ರ ಮಾರ್ಚ್ ನಿಂದ ಟೆಸ್ಟ್, ಅದೇ ವರ್ಷದ ಸೆಪ್ಟಂಬರ್ ನಿಂದ ಏಕದಿನ ಪಂದ್ಯವನ್ನು ಆಡಿದ್ದರು. ಆದರೆ ಅದಾದ ಬಳಿಕ ದಕ್ಷಿಣ ಆಫ್ರಿಕಾ ಜೆರ್ಸಿ ತೊಟ್ಟು ಅಂಗಳಕ್ಕೆ ಇಳಿದಿಲ್ಲ. ಇವರು 19 ಟೆಸ್ಟ್ ಪಂದ್ಯಗಳಲ್ಲಿ 70 ವಿಕೆಟ್, 22 ಏಕದಿನ ಪಂದ್ಯಗಳಲ್ಲಿ 36 ವಿಕೆಟ್, 42 ಟಿ20 ಪಂದ್ಯಗಳಲ್ಲಿ 53 ವಿಕೆಟ್‌ಗಳನ್ನು ಪಡೆದಿದ್ದಾರೆ.
ದಕ್ಷಿಣ ಆಫ್ರಿಕಾ ತಂಡ ಇವರ ಬದಲಿಗೆ ಆಟಗಾರನನ್ನು ಇನ್ನು ಘೋಷಿಸಿಲ್ಲ.