ಭಾರತ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅಭಿಮಾನಿಗಳು ಪಾಕಿಸ್ತಾನದ ಗಡಿಯಾಚೆಯೂ ಇದ್ದಾರೆ. ವಿರಾಟ್ ಕೊಹ್ಲಿಗೆ ಭಾರತೀಯ ಅಭಿಮಾನಿಗಳಿಂದ ಸಿಗುವ ಪ್ರೀತಿಗಿಂತ ಪಾಕಿಸ್ತಾನದಲ್ಲಿ ಹೆಚ್ಚಿನ ಅಭಿಮಾನಿಗಳಿದ್ದಾರೆ. ಭಾನುವಾರ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಅದ್ಭುತ ಶತಕದ ನೆರವಿನಿಂದ ಭಾರತ ತಂಡ ಪಾಕಿಸ್ತಾನವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕಿಸ್ತಾಮನ ಹೊರಬಿದ್ದಿತು. ಆದರೆ, ಪಾಕಿಸ್ತಾನಿ ಅಭಿಮಾನಿಗಳು ವಿರಾಟ್ ಕೊಹ್ಲಿ ಶತಕವನ್ನು ಆಚರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಜೇಯ 100 ರನ್‌ಗಳ ಇನ್ನಿಂಗ್ಸ್ ಆಡಿದರು. ಕೊಹ್ಲಿ ತಮ್ಮ 51ನೇ ಏಕದಿನ ಶತಕವನ್ನು ಬೌಂಡರಿ ಬಾರಿಸುವ ಮೂಲಕ ಪೂರೈಸಿದರು. ಕೊಹ್ಲಿ ಅವರ ಈ ಶತಕ ಪಾಕಿಸ್ತಾನ ಹೀನಾಯವಾಗಿ ಸೋಲಲು ಕಾರಣವಾಯಿತು. ಆದರೆ, ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವಿರಾಟ್ ಗೆಲುವಿನ ಬೌಂಡರಿ ಹೊಡೆದು ಶತಕ ಪೂರೈಸುತ್ತಿದ್ದಂತೆ ಪಾಕಿಸ್ತಾನಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ.

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 82 ನೇ ಶತಕವನ್ನು ಬಾರಿಸುತ್ತಿದ್ದಂತೆ ಪಂದ್ಯವನ್ನು ವೀಕ್ಷಿಸುತ್ತಿದ್ದ ಪಾಕಿಸ್ತಾನಿ ಅಭಿಮಾನಿಗಳು ಹುಚ್ಚೆದ್ದು ಕುಣಿದಾಡಿದರು. ಹೆಚ್ಚಾಗಿ ಮಹಿಳಾ ಅಭಿಮಾನಿಗಳು, ಸಂತೋಷದಿಂದ ಸಂಭ್ರಮಾಚರಣೆ ಮಾಡಿದರು. ಅವರು ತಮ್ಮ ತಂಡದ ಸೋಲಿನ ಬಗ್ಗೆ ಸ್ವಲ್ಪವೂ ದುಃಖಿತರಾಗಿರಲಿಲ್ಲ, ಕಿಂಗ್ ಕೊಹ್ಲಿಯ ಶತಕವನ್ನು ಆಚರಿಸಿದರು.
ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ ಕೊಹ್ಲಿ 51ನೇ ಏಕದಿನ ಶತಕ ಬಾರಿಸಿದರು. ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 100 ರನ್ ಗಳಿಸಿ ಅಜೇಯರಾಗುಳಿದರು. ಈ ಅದ್ಭುತ ಇನ್ನಿಂಗ್ಸ್‌ಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಸಿಕ್ಕಿತು. ಈ ಪಂದ್ಯದಲ್ಲಿ ಕೊಹ್ಲಿ ವೇಗವಾಗಿ 14000 ರನ್ ಗಳಿಸಿದ ದಾಖಲೆಯನ್ನು ಸೃಷ್ಟಿಸಿದರು. ವಿರಾಟ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿದರು. 27483 ರನ್ ಗಳಿಸಿರುವ ರಿಕಿ ಪಾಂಟಿಂಗ್ ಅವರನ್ನು ವಿರಾಟ್ ಕೊಹ್ಲಿ 27503 ರನ್ ಕಲೆಹಾಕುವ ಮೂಲಕ ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 51 ಶತಕಗಳು, ಟೆಸ್ಟ್ ಕ್ರಿಕೆಟ್‌ನಲ್ಲಿ 30 ಶತಕಗಳು ಮತ್ತು ಟಿ20 ಕ್ರಿಕೆಟ್‌ನಲ್ಲಿ 1 ಶತಕ ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ.