ಫೆಬ್ರವರಿ 19 ರಿಂದ ಪಾಕಿಸ್ತಾನ ಆತಿಥ್ಯ ವಹಿಸಲಿರುವ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆಲ್ಲಲು ಎಂಟು ರಾಷ್ಟ್ರಗಳು ಸ್ಪರ್ಧಿಸಲಿವೆ. ಈ ಐಸಿಸಿ ಟೂರ್ನಿಯನ್ನು 2017 ರ ನಂತರ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ. 2017 ರಲ್ಲಿ ನಡೆದ ಫೈನಲ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿತ್ತು. ಇದೀಗ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಪಂದ್ಯಗಳು ಪಾಕಿಸ್ತಾನದ ಮೂರು ನಗರಗಳಲ್ಲಿ ನಡೆಯಲಿದೆ. ಭಾರತ ತಂಡವು ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಟೂರ್ನಿಗೂ ಮುನ್ನ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ದಿಗ್ಗಜ ಸ್ಪಿನ್ನರ್ ಭವಿಷ್ಯ ನುಡಿದಿದ್ದಾರೆ.
ಶ್ರೀಲಂಕಾ ತಂಡ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್, ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಭಾರತಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇಬ್ಬರಿಂದಲೂ ರನ್‌ಗಳು ಬೇಕಾಗುತ್ತವೆ ಎಂದು ಹೇಳಿದ್ದಾರೆ. ಜೊತೆಗೆ ರೋಹಿತ್ ಮತ್ತು ವಿರಾಟ್ ಫಾರ್ಮ್ ಬಗ್ಗೆಯೂ ಮುರಳೀಧರನ್ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನ ಮತ್ತು ದುಬೈನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ರೋಹಿತ್ ಮತ್ತು ಕೊಹ್ಲಿ ಅವರ ಫಾರ್ಮ್ ಚರ್ಚೆಯ ವಿಷಯವಾಗಿ ಉಳಿದಿದೆ. ಭಾನುವಾರ ಇಂಗ್ಲೆಂಡ್ ವಿರುದ್ಧ 32 ನೇ ಏಕದಿನ ಶತಕ ಬಾರಿಸುವ ಮೂಲಕ ರೋಹಿತ್ ಫಾರ್ಮ್‌ಗೆ ಮರಳಿದ್ದಾರೆ. ಆದರೆ ನವೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪರ್ತ್ ಟೆಸ್ಟ್‌ನಲ್ಲಿ ಅಜೇಯ 100 ರನ್ ಗಳಿಸಿದ ನಂತರ ಕೊಹ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಕಾರ್ಯಕ್ರಮವೊಂದರ ಸಂದರ್ಭದಲ್ಲಿ ನೀಡಿದ ವಿಶೇಷ ಸಂದರ್ಶನದಲ್ಲಿ ಮುರಳೀಧರನ್, 'ರೋಹಿತ್ ಮತ್ತು ಕೊಹ್ಲಿ ವಿಶ್ವ ದರ್ಜೆಯ ಆಟಗಾರರು. ಅವರು ಫಾರ್ಮ್‌ಗೆ ಬರುತ್ತಾರೆ. ರೋಹಿತ್ ಶತಕ ಬಾರಿಸಿದ್ದಾರೆ ಮತ್ತು ವಿರಾಟ್ ಕೂಡ ಫಾರ್ಮ್‌ಗೆ ಬರುತ್ತಾರೆ. ಭಾರತ ಟ್ರೋಫಿ ಗೆಲ್ಲಬೇಕಾದರೆ ಈ ಟೂರ್ನಿಯಲ್ಲಿ ಅವರು ಖಂಡಿತವಾಗಿಯೂ ಫಾರ್ಮ್‌ನಲ್ಲಿರಬೇಕು. ಪಾಕಿಸ್ತಾನ ಮತ್ತು ಯುಎಇಯ ಪರಿಸ್ಥಿತಿಗಳನ್ನು ಅವಲಂಬಿಸಿ ತಂಡಗಳು ಸಮತೋಲಿತ ಬೌಲಿಂಗ್ ದಾಳಿಯನ್ನು ನಡೆಸಲಿವೆ ಎಂದು ಮುರಳೀಧರನ್ ಹೇಳಿದ್ದಾರೆ.
ಪಾಕಿಸ್ತಾನ ಮತ್ತು ಯುಎಇ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಸಹಾಯಕವಾಗುತ್ತವೆ. ಈ ಟೂರ್ನಿಯಲ್ಲಿ ಸ್ಪಿನ್ನರ್‌ಗಳು ದೊಡ್ಡ ಪಾತ್ರ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಜಗತ್ತಿನಲ್ಲಿ ಬಹಳಷ್ಟು ಉತ್ತಮ ಸ್ಪಿನ್ನರ್‌ಗಳಿದ್ದಾರೆ. ಏಕೆಂದರೆ ನೀವು ಭಾರತವನ್ನು ತೆಗೆದುಕೊಂಡರೆ, ತಂಡದಲ್ಲಿ ಸುಮಾರು ನಾಲ್ಕು ಸ್ಪಿನ್ನರ್‌ಗಳಿದ್ದಾರೆ. ಅಫ್ಘಾನಿಸ್ತಾನವನ್ನು ನೋಡಿದರೆ, ಅವರು ಉತ್ತಮ ಸ್ಪಿನ್ ದಾಳಿಯನ್ನು ಹೊಂದಿದ್ದಾರೆ. ಭಾರತವು ಉತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಏಕೆಂದರೆ ಅವರು ಉತ್ತಮ ಸ್ಪಿನ್ನರ್‌ಗಳು ಮತ್ತು ವೇಗದ ಬೌಲರ್‌ಗಳನ್ನು ಸಹ ಹೊಂದಿದ್ದಾರೆ. ಪಾಕಿಸ್ತಾನದ ವಿಷಯದಲ್ಲೂ ಹೀಗೆಯೇ ಆಗಿದೆ ಮುರಳೀಧರನ್ ತಿಳಿಸಿದ್ದಾರೆ.