ಲಂಡನ್, ಜೂನ್ 1: ಮಧ್ಯಮ ಕ್ರಮಾಂಕದ ಜೊ ರೂಟ್ ಅವರ ಆಕರ್ಷಕ ಶತಕದ ಸಹಾಯದಿಂದಾಗಿ, ಗುರುವಾರ ನಡೆದ ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ, ಬಾಂಗ್ಲಾದೇಶ ತಂಡದ ವಿರುದ್ಧ 8 ವಿಕೆಟ್ ಗಳ ಜಯ ಸಾಧಿಸಿತು.
ಇಲ್ಲಿನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ, 50 ಓವರ್ ಗಳಲ್ಲಿ ನಿಗದಿತ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿತು. ಈ ಮೊತ್ತ ಹಿಂದಿಕ್ಕಿದ ಇಂಗ್ಲೆಂಡ್ 47.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿ ಜಯದ ನಗೆ ಬೀರಿತು.

ಟಾಸ್ ಗೆದ್ದಿದ್ದ ಇಂಗ್ಲೆಂಡ್, ಮೊದಲಿಗೆ ಬಾಂಗ್ಲಾ ತಂಡವನ್ನು ಕಣಕ್ಕಿಳಿಸಿದರು. ಅದರಂತೆ ಬ್ಯಾಟಿಂಗ್ ಗೆ ಇಳಿದ ಬಾಂಗ್ಲಾ ಮಧ್ಯಮ ಕ್ರಮಾಂಕದ ವೈಫಲ್ಯ ಎದುರಿಸಿತು. ಆರಂಭಿಕ ಸೌಮ್ಯ ಸರ್ಕಾರ್ (28) ಸೇರಿದಂತೆ ಮಧ್ಯಮ ಕ್ರಮಾಂಕದ ಇರ್ಮುಲ್ ಕಯೇಸ್ (19), ಶಕೀಬ್ ಅಲ್ ಹಸನ್ (10), ಶಬ್ಬೀರ್ ರಹಮಾನ್ (24) ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲದೇ ಹೋದರು.
ಆದರೆ, ಮತ್ತೊಬ್ಬ ಆರಂಭಿಕ ತಮೀಮ್ ಇಕ್ಬಾಲ್ ದಿಟ್ಟತನದ ಆಟವಾಡಿದರಲ್ಲದೆ, ಭರ್ಜರಿ ಶತಕ ಸಿಡಿಸಿ (128 ರನ್, 142 ಎಸೆತ, 12 ಬೌಂಡರಿ, 3 ಸಿಕ್ಸರ್) ತಂಡವು 300 ರನ್ ಗಡಿ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇವರಿಗೆ ಮುಷ್ಫಿಕರ್ ರಹೀಮ್ (79) ಕ್ರೀಸ್ ನಲ್ಲಿ ಬೆಂಬಲವಿತ್ತರು. ಈ ಇಬ್ಬರೂ 4ನೇ ವಿಕೆಟ್ ಗೆ 166 ರನ್ ಜತೆಯಾಟ ನೀಡಿದ್ದು ಬಾಂಗ್ಲಾದೇಶದ ಇನಿಂಗ್ಸ್ ನ ಮತ್ತೊಂದು ಹೈಲೈಟ್.
ಬಾಂಗ್ಲಾದೇಶ ನೀಡಿದ ಸವಾಲನ್ನು ಹಿಂದಿಕ್ಕಲು ಕ್ರೀಸ್ ಗೆ ಇಳಿದ ಇಂಗ್ಲೆಂಡ್, ಆರಂಭಿಕ ಜೇಸನ್ ರಾಯ್ (1) ಅವರನ್ನು ಬೇಗನೇ ಕಳೆದುಕೊಂಡರೂ ಮತ್ತೊಬ್ಬ ಆರಂಭಿಕ ಅಲೆಕ್ಸ್ ಹೇಲ್ಸ್ (95 ರನ್, 86 ಎಸೆತ, 11 ಬೌಂಡರಿ, 2 ಸಿಕ್ಸರ್) ಹಾಗೂ ಜೊ ರೂಟ್ (ಅಜೇಯ 133, 129 ಎಸೆತ, 11 ಬೌಂಡರಿ, 1 ಸಿಕ್ಸರ್) ಅವರಿಬ್ಬರು 2ನೇ ವಿಕೆಟ್ ಗೆ ಸೇರಿಸಿದ 159 ರನ್ ಜತೆಯಾಟದಿಂದಾಗಿ ಇಂಗ್ಲೆಂಡ್ ತಂಡದ ಇನಿಂಗ್ಸ್ ನಲ್ಲಿ ಚೇತರಿಕೆ ಕಂಡಿತು.
28ನೇ ಓವರ್ ನಲ್ಲಿ ಹೇಲ್ಸ್ ವಿಕೆಟ್ ಉರುಳಿದರೂ, ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ನಾಯಕ ಇಯಾನ್ ಮೊರ್ಗನ್ (ಅಜೇಯ 75, 61 ಎಸೆತ, 8 ಬೌಂಡರಿ, 2 ಸಿಕ್ಸರ್) ಅವರೊಂದಿಗೆ, ಮುರಿಯದ ಮೂರನೇ ವಿಕೆಟ್ ಗೆ 143 ರನ್ ಗಳ ಜತೆಯಾಟ ನೀಡಿದ ರೂಟ್, ತಮ್ಮ ತಂಡದ ಗೆಲುವಿಗೆ ಉದಾತ್ತ ಕಾಣಿಕೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜೊ ರೂಟ್ ತಮ್ಮ ಏಕದಿನ ವೃತ್ತಿಜೀವನದ 10ನೇ ಶತಕ ಬಾರಿಸಿದರು. ಅವರ ಈ ಆಟ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಂದುಕೊಟ್ಟಿತು.
ಸಂಕ್ಷಿಪ್ತ ಸ್ಕೋರ್:
ಬಾಂಗ್ಲಾದೇಶ 50 ಓವರ್ ಗಳಲ್ಲಿ 305ಕ್ಕೆ 6 (ತಮೀಮ್ ಇಕ್ಬಾಲ್ 128, ಮುಷ್ಫಿಕರ್ ರಹೀಮ್ 79; ಪ್ಲಂಕೆಟ್ 59ಕ್ಕೆ 4, ಬೆನ್ ಸ್ಟೋಕ್ಸ್ 42ಕ್ಕೆ 1).
ಇಂಗ್ಲೆಂಡ್ 47.2 ಓವರ್ ಗಳಲ್ಲಿ 2 ವಿಕೆಟ್ ಗೆ 308 (ಜೊ ರೂಟ್ ಅಜೇಯ 133, ಅಲೆಕ್ಸ್ ಹೇಲ್ಸ್ 95; ಮಶ್ರಫೆ ಮೊರ್ತಾಜಾ 56ಕ್ಕೆ 1, ಶಬ್ಬೀರ್ ರಹಮಾನ್ 13ಕ್ಕೆ 1).
ಪಂದ್ಯ ಶ್ರೇಷ್ಠ: ಜೊ ರೂಟ್ (ಇಂಗ್ಲೆಂಡ್)