ಭಾನುವಾರ ಮಾರ್ಚ್ 8 ರಂದು ದುಬೈ ಅಂಗಳದಲ್ಲಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ಎದುರಿಸಲಿದೆ. ಅದಕ್ಕೂ ಮುನ್ನ ಟೀಮ್ ಇಂಡಿಯಾಗೆ ನ್ಯೂಜಿಲೆಂಡ್ ಬೌಲಿಂಗ್ ದಾಳಿ ಎದುರಿಸುವುದು ಸವಾಲಾಗಿದೆ. ಫೈನಲ್‌ಗೂ ಮುಂಚಿತವಾಗಿ ನ್ಯೂಜಿಲೆಂಡ್ ಸ್ಪಿನ್ನರ್‌ಗಳಾದ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಅವರನ್ನು ಎದುರಿಸಲು ಟೀಮ್ ಇಂಡಿಯಾದ ಬ್ಯಾಟರ್ಸ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ನಾಯಕ ಮತ್ತು ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಇದುವರೆಗೆ ನಾಲ್ಕು ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಸ್ಪಿನ್ನರ್‌ಗಳಿಗೆ ಸಹಾಯ ಮಾಡುವ ನಿರೀಕ್ಷೆಯಿದೆ. ಆದ್ದರಿಂದ ಕಿವೀಸ್ ಪಡೆಯ ಬೌಲಿಂಗ್ ದಾಳಿಯನ್ನು ಟೀಮ್ ಇಂಡಿಯಾ ಎದುರಿಸಿ ಚಾಂಪಿಯನ್ ಆಗಲು ಸಜ್ಜಾಗಿದೆ.

ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡ ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ಮಾತನಾಡಿ, ಇಲ್ಲಿನ ಪಿಚ್ ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡುವುದನ್ನು ಮುಂದುವರಿಸಬಹುದು. ನಮ್ಮ ಬ್ಯಾಟಿಂಗ್ ನಿಜಕ್ಕೂ ಉತ್ತಮವಾಗಿತ್ತು. ಬ್ಯಾಟರ್ಸ್ ಯಾವುದೇ ದಿನ ಯಾವುದೇ ಪಿಚ್‌ಗೆ ಹೊಂದಿಕೊಳ್ಳಬಹುದು. ಆದ್ದರಿಂದ ಇದು ಮುಖ್ಯ ವಿಷಯ. ನಾವು ಪಿಚ್‌ಗೆ ಅನುಗುಣವಾಗಿ ಹೊಂದಿಕೊಳ್ಳಬಹುದು ಅಂದುಕೊಂಡಿದ್ದೇನೆ ಎಂದಿದ್ದಾರೆ.
ಮಿಚೆಲ್ ಸ್ಯಾಂಟ್ನರ್ ಮತ್ತು ಮೈಕೆಲ್ ಬ್ರೇಸ್‌ವೆಲ್ ಜೊತೆಗೆ ಗ್ಲೆನ್ ಫಿಲಿಪ್ಸ್ ಅವರ ಸ್ಪಿನ್ ಬೌಲಿಂಗ್ ಟೀಮ್ ಇಂಡಿಯಾ ಬ್ಯಟರ್ಸ್‌ಗೆ ಕಾಟ ನೀಡಬಹುದು. ಹಲವು ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಮಿಚೆಲ್ ಸ್ಯಾಂಟ್ನರ್ ಮುಳ್ಳಾಗಿದ್ದಾರೆ. ಹೀಗಾಗಿ ಫೈನಲ್ ಪಂದ್ಯದಲ್ಲಿ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್ ಎದುರಿಸಲು ಟೀಮ್ ಇಂಡಿಯಾ ಬ್ಯಾಟರ್ಸ್ ನೆಟ್ಸ್‌ನಲ್ಲಿ ಬೆವರಿಳಿಸಿದ್ದಾರೆ. ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ, ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ ಬೌಲಿಂಗ್‌ನಲ್ಲಿ ಟೀಮ್ ಇಂಡಿಯಾ ಬ್ಯಾಟರ್ಸ್ ಹೆಚ್ಚು ಅಭ್ಯಾಸ ನಡೆಸಿದ್ದಾರೆ.
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಅಕ್ಸರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ.
ನ್ಯೂಜಿಲೆಂಡ್: ನ್ಯೂಜಿಲೆಂಡ್: ವಿಲ್ ಯಂಗ್, ಡೆವೊನ್ ಕಾನ್ವೆ, ಕೇನ್ಸ್ ವಿಲಿಯಮ್ಸನ್, ರಚಿನ್ ರವೀಂದ್ರ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಮೈಕೆಲ್ ಬ್ರೆಸ್‌ವೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ನಾಥನ್ ಸ್ಮಿತ್, ಮ್ಯಾಟ್ ಹೆನ್ರಿ, ವಿಲ್ ಒ'ರೂರ್ಕ್.