ಚಾಂಪಿಯನ್ಸ್ ಟ್ರೋಫಿ ಎ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ ಮಹತ್ವದ ಟಾಸ್ ಪಾಕಿಸ್ತಾನ ಪಾಲಾಗಿದೆ. ಟುರ್ನಿಯನ್ನು ಆಯೋಜಿಸುತ್ತಿರುವ ಪಾಕ್ ಟಾಸ್ ಗೆದ್ದ ಪಾಕ್ ಬ್ಯಾಟಿಂಗ್ ಆಯ್ದುಕೊಂಡಿದೆ. ಪಾಕ್ ತಂಡದಲ್ಲಿ ಒಂದು ಬದಲಾವಣೆಯೊಂದಿಗೆ ಕಣಕ್ಕೆ ಇಳಿಯಲಿದೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿರುವ ಆರಂಭಿಕ ಆಟಗಾರ ಫಖರ್ ಜಮಾನ್ ಬದಲಿಗೆ ಇಮಾಮ್ ಉಲ್ ಹಕ್ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಾಕಿಸ್ತಾನ ವಿರುದ್ಧ ಹೈವೋಲ್ಟೇಜ್ ಪಂದ್ಯಕ್ಕೆ ಭಾರತ ತನ್ನ ತಂಡದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಬಾಂಗ್ಲಾದೇಶ ವಿರುದ್ಧ ಇಳಿದ ತಂಡವನ್ನೇ ಮೈದಾನಕ್ಕೆ ಇಳಿಸಲು ರೋಹಿತ್ ಪಡೆ ನಿರ್ಧರಿಸಿದೆ. ಇನ್ನು ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್ ಅವರಿಗೆ ಚಾನ್ಸ್ ನೀಡಲಾಗುತ್ತದೆ ಎಂದು ನಂಬಲಾಗಿತ್ತು. ಆದರೆ ರೋಹಿತ್ ಪಡೆ ಮೊದಲ ಪಂದ್ಯದಲ್ಲಿ ಗೆದ್ದ ತಂಡವನ್ನೇ ಕಣಕ್ಕೆ ಇಳಿಸಲು ನಿರ್ಧರಿಸಿದ್ದಾರೆ. ಈ ಪಂದ್ಯ ಪಾಕಿಸ್ತಾನ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಈ ಪಂದ್ಯದಲ್ಲಿ ಪಾಕ್ ಸೋತರೇ ಚಾಂಪಿಯನ್ಸ್ ಟ್ರೋಫಿಯಿಂದ ಹೊರ ಬೀಳಲಿದೆ. ಇನ್ನು ಭಾರತ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ.

ಚಾಂಪಿಯನ್ಸ್ ಟ್ರೋಫಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡ 60 ರನ್‌ಗಳಿಂದ ಸೋಲು ಕಂಡಿತ್ತು. ಕಿವೀಸ್ ನೀಡಿದ್ದ 321 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ್ದ ಪಾಕ್ ತವರಿನಲ್ಲಿ ಮುಖಭಂಗ ಅನುಭವಿಸಿತ್ತು. ತಂಡದ ಸ್ಟಾರ್ ಆಟಗಾರರು ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಹೀಗಾಗಿ ಭಾರತದ ವಿರುದ್ಧ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. ಮೊಹಮ್ಮದ್ ರಿಜ್ವಾನ್ ಪಡೆಗೆ ಭಾನುವಾರದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.
ಭಾರತ ದುಬೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಅಮೋಘ ಪ್ರದರ್ಶನ ನೀಡಿ 6 ವಿಕೆಟ್ ಜಯ ಸಾಧಿಸಿದೆ. ಭಾರತದ ಗೆಲುವಿನಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಮಿಂಚಿದರು. ಇವರು ಮೊದಲ ಪಂದ್ಯದಲ್ಲಿ ಐದು ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಭಾರತದ ಪರ ಶುಭಮನ್ ಗಿಲ್ ಶತಕ ಬಾರಿಸಿ ಆರ್ಭಟಿಸಿದರು. ಇವರ ಈ ಪ್ರದರ್ಶನದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಹರ್ಷಿತ್ ರಾಣಾ, ಕುಲ್‌ದೀಪ್ ಯಾದವ್
ಪಾಕ್ ತಂಡ: ಇಮಾಮ್-ಉಲ್-ಹಕ್, ಬಾಬರ್ ಅಜಮ್, ಸೌದ್ ಶಕೀಲ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್, ನಾಯಕ), ಅಯ್ಯಬ್ ತಾಹಿರ್, ಸಲ್ಮಾನ್ ಅಘಾ, ಖುಷ್ದಿಲ್ ಶಾ, ಶಾಹೀನ್ ಶಾ ಆಫ್ರಿದಿ, ನಸೀಮ್ ಶಾ, ಹ್ಯಾರಿಸ್ ರೌಫ್, ಅಬ್ರಾರ್ ಅಹ್ಮದ್