ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ರಂಗು ಎಲ್ಲಡೆ ಪಸರಿಸಲಿದೆ. ಈ ಮೆಗಾ ಟೂರ್ನಿಯನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಸಹ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದು, ಎಲ್ಲರ ಚಿತ್ತ ಕದ್ದಿದೆ. ಈಗಾಗಲೇ ಎರಡು ಬಾರಿ ಟ್ರೋಫಿಗೆ ಮುತ್ತಿಟ್ಟಿರುವ ಭಾರತ, ಮೂರನೇ ಬಾರಿ ಟ್ರೋಫಿಯನ್ನು ತನ್ನ ಮಡಿಲಿಗಿ ಹಾಕಿಕೊಳ್ಳುವ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ.
ಏಳು ವರ್ಷದ ಬಳಿಕ ಮೆಗಾ ಟೂರ್ನಿ ನಡೆಯುತ್ತಿರುವುದರಿಂದ ರೋಚಕತೆ ಮನೆ ಮಾಡಿದೆ. ಈ ಬಿಗ್ ಟೂರ್ನಿಯಲ್ಲಿ ಭಾರತದ ಆಟಗಾರರು ಕಮಾಲ್ ಪ್ರದರ್ಶನ ನೀಡಿದ್ದಾರೆ. ಹಿಂದಿನಿಂದಲೂ ಈ ವರೆಗೆ ಈ ಟೂರ್ನಿಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಭಾರತೀಯ ಆಟಗಾರರು ಎದುರಾಳಿ ತಂಡದ ನಿದ್ದೆಯನ್ನು ಕೆಡಿಸಿದ್ದಾರೆ. ಐಸಿಸಿ ಮೆಗಾ ಟೂರ್ನಿಯಲ್ಲಿ ಭಾರತದ ಪರ ರನ್ ಶಿಖರ ಏರಿದ ಆಟಗಾರರ ಪಟ್ಟಿ ಇಲ್ಲಿದೆ.

ಟೀಮ್ ಇಂಡಿಯಾ ಪರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆರ್ಭಟಿಸಿದ ಆಟಗಾರರ ಪಟ್ಟಿಯಲ್ಲಿ ಶಿಖರ್ ಧವನ್‌ಗೆ ಅಗ್ರ ಸ್ಥಾನ. ಇವರು ಆಡಿದ 10 ಪಂದ್ಯಗಳಲ್ಲಿ 77.88 ಸರಾಸರಿಯಲ್ಲಿ 701 ರನ್ ಸಿಡಿಸಿದ್ದಾರೆ. ಇದರಲ್ಲಿ 3 ಶತಕ ಹಾಗೂ 3 ಅರ್ಧಶತಕ ಸೇರಿವೆ. ಇದ್ರಲ್ಲಿ 79 ಬೌಂಡರಿ, 8 ಸಿಕ್ಸರ್ ಸೇರಿವೆ. ಇನ್ನು ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದ ಆಟಗಾರ ಸೌರವ್ ಗಂಗೂಲಿ. ಇವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ 13 ಪಂದ್ಯಗಳಲ್ಲಿ 665 ರನ್ ಸಿಡಿಸಿದ್ದಾರೆ. 73.88ರ ಸರಾಸರಿಯಲ್ಲಿ ದಾದಾ ರನ್ ಕಲೆ ಹಾಕಿದ್ದಾರೆ. ಇವರು ಸಹ 3 ಶತಕ ಹಾಗೂ 3 ಅರ್ಧಶತಕ ಬಾರಿಸಿದ್ದಾರೆ. ಇನ್ನು ಈ ವೇಳೆ 66 ಬೌಂಡರಿ, 17 ಸಿಕ್ಸರ್‌ಗಳು ಸೇರಿವೆ.
ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಅವರು ಕಾಣಿಸಿಕೊಂಡಿದ್ದಾರೆ. ಇವರು ಆಡಿರುವ 19 ಪಂದ್ಯಗಳಲ್ಲಿ 627 ರನ್ ಸಿಡಿಸಿದ್ದಾರೆ. ಇದರಲ್ಲಿ 6 ಅರ್ಧಶತಕಗಳು ಸೇರಿವೆ. ಇವರ ಬ್ಯಾಟ್‌ನಿಂದ 56 ಬೌಂಡರಿ, 1 ಸಿಕ್ಸರ್ ಹರಿದು ಬಂದಿವೆ.

ನಾಲ್ಕನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರು ಸ್ಥಾನ ಪಡೆದಿದ್ದಾರೆ. ವಿರಾಟ್ ಆಡಿದ 13 ಪಂದ್ಯಗಳಲ್ಲಿ 529 ರನ್ ಕಲೆ ಹಾಕಿದ್ದಾರೆ. ಈ ವೇಳೆ ಇವರ ಸರಾಸರಿ 88 ಆಗಿದೆ. ಈ ವೇಳೆ 5 ಅರ್ಧಶತಕವನ್ನು ತಮ್ಮ ಬುಟ್ಟಿಯಲ್ಲಿ ಕೊಹ್ಲಿ ಹೊಂದಿದ್ದಾರೆ. ಇನ್ನು 53 ಬೌಂಡರಿ, 8 ಸಿಕ್ಸರ್ ಸಿಡಿಸಿದ್ದಾರೆ. ಇನ್ನು ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ 10 ಪಂದ್ಯಗಳಲ್ಲಿ 53ರ ಸರಾಸರಿಯಲ್ಲಿ 481 ರನ್ ಹೊಂದಿದ್ದಾರೆ. ಈ ವೇಳೆ ಒಂದು ಶತಕ ಹಾಗೂ 4 ಅರ್ಧಶತಕಗಳು ಸೇರಿವೆ. ಇವರ ಬ್ಯಾಟ್‌ನಿಂದ 51 ಬೌಂಡರಿ, 8 ಸಿಕ್ಸರ್‌ಗಳು ಹರಿದು ಬಂದಿವೆ.