ಗಾಲೆ: ಶ್ರೀಲಂಕಾ ಪ್ರವಾಸದಲ್ಲಿ ನ್ಯೂಜಿಲೆಂಡ್ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಗುರುವಾರದಿಂದ ಆರಂಭವಾದ ಈ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟ್ ಮಾಡಿ ದಿನದ ಗೌರವವನ್ನು ತನ್ನದಾಗಿಸಿಕೊಂಡಿತು. ದಿನದಾಟದ ಮುಕ್ತಾಯಕ್ಕೆ ಆತಿಥೇಯರು 3 ವಿಕೆಟ್‌ಗೆ 306 ರನ್ ಸೇರಿಸಿದ್ದು, ಸುಸ್ಥಿತಿಯಲ್ಲಿದ್ದಾರೆ.
ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾದ ಆರಂಭ ಕಳಪೆಯಾಗಿತ್ತು. ಪತನು ನಿಸ್ಸಂಕಾ ಕೇವಲ 1 ರನ್‌ಗಳಿಗೆ ಆಟ ಮುಗಿಸಿದರು. 2 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದಿಮುತ್ತು ಕರುಣರತ್ನೆ ಹಾಗೂ ದಿನೇಶ್ ಚಂಡಿಮಲ್ ಆಧಾರವಾದರು. ಈ ಜೋಡಿಯನ್ನು ಬೇರ್ಪಡಿಸಲು ನ್ಯೂಜಿಲೆಂಡ್ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಈ ಜೋಡಿ 229 ಎಸೆತಗಳನ್ನು ಎದುರಿಸಿ 122 ರನ್ ಕಲೆ ಹಾಕಿತು. ದಿಮುತ್ತು ಕರುಣರತ್ನೆ 46 ರನ್ ಸಿಡಿಸಿದ್ದಾಗ ಔಟ್ ಆದರು.

ದಿನೇಶ್ ಚಂಡೀಮಲ್ ಜೊತೆ ಸೇರಿದ ಅನುಭವಿ ಬ್ಯಾಟರ್ ಆಂಜಿಲೋ ಮ್ಯಾಥ್ಯೂಸ್, ಕಿವೀಸ್ ಬೌಲರ್‌ಗಳನ್ನು ಕಾಡಿದರು. ಈ ಜೋಡಿ ಸಹ ಲಂಕಾ ತಂಡಕ್ಕೆ ಉತ್ತಮ ಜೊತೆಯಾಟವನ್ನು ನೀಡಿತು. 202 ಎಸೆತಗಳನ್ನು ಎದುರಿಸಿದ ಈ ಜೋಡಿ 97 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ದಿನೇಶ್ ಚಂಡಿಮಲ್ ಶತಕ ಬಾರಿಸಿದರು. ಇವರು 208 ಎಸೆತಗಳನ್ನು ಎದುರಿಸಿ 15 ಬೌಂಡರಿ ಸೇರಿದಂತೆ 116 ರನ್ ಸಿಡಿಸಿದರು.
ಆಂಜಿಲೋ ಮ್ಯಾಥ್ಯೂಸ್ ಹಾಗೂ ಕಮಿಂದು ಮೆಂಡಿಸ್ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 105 ಎಸೆತಗಳಲ್ಲಿ ಅಜೇಯ 85 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಂಜಿಲೋ ಮ್ಯಾಥ್ಯೂಸ್ ಅಜೇಯ 78 ರನ್ ಸಿಡಿಸಿದರೆ, ಕಮಿಂಡು ಮೆಂಡಿಸ್ ಅಜೇಯ 51 ರನ್ ಬಾರಿಸಿ ತಂಡಕ್ಕೆ ಆಧಾರವಾದರು.
ಕಮಿಂದು ಮೆಂಡಿಸ್ 2022ರಲ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನವನ್ನು ಆರಂಭಿಸಿದರು. ಅಲ್ಲಿಂದ ಇಲ್ಲಿಯವರೆಗೆ ಇವರು ಶ್ರೀಲಂಕಾ ತಂಡಕ್ಕೆ ಆಧಾರವಾಗುತ್ತಲೇ ಬಂದಿದ್ದಾರೆ. ಮೆಂಡಿಸ್ ತಮ್ಮ ಟೆಸ್ಟ್ ಕ್ರಿಕೆಟ್‌ನ ಮೊದಲ ಎಂಟು ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಸಿಡಿಸಿದ ಹಿರಿಮೆ ಹೊಂದಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಪಾಕಿಸ್ತಾನ ತಂಡದ ಸೌದ್ ಶಕೀಲ್ ಅವರ ಹೆಸರಿನಲ್ಲಿತ್ತು. ಇವರು ಮೊದಲ ಏಳು ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಬಾರಿಸಿದ್ದರು.