ಶ್ರೀಲಂಕಾ ಪ್ರವಾಸದಲ್ಲಿ ಅಮೋಘ ಪ್ರದರ್ಶನ ನೀಡಿ ಟೆಸ್ಟ್ ಸರಣಿಯನ್ನು ವಶಕ್ಕೆ ಪಡೆದಿರುವ ಆಸ್ಟ್ರೇಲಿಯಾಕ್ಕೆ ಏಕದಿನ ಕ್ರಿಕೆಟ್‌ನಲ್ಲಿ ಬರೆ ಬಿದ್ದಿದೆ. ಕೋಲಂಬೋದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಲಂಕಾ 49 ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿತು. ಈ ಸೋಲು ಚಾಂಪಿಯನ್ಸ್ ಟ್ರೋಫಿಗೆ ಹೋಗುವ ಮುನ್ನ ಈ ಸೋಲು ಆತ್ಮ ವಿಶ್ವಾಸವನ್ನು ಕುಗ್ಗಿಸಲಿದೆ. ಉಭಯ ದೇಶಗಳ ನಡುವಣ ಎರಡನೇ ಏಕದಿನ ಪಂದ್ಯ ಶುಕ್ರವಾರ ನಡೆಯಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ 46 ಓವರ್‌ಗಳಲ್ಲಿ 214 ರನ್‌ಗಳಿಗೆ ಆಲೌಟ್ ಆಯಿತು. ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ 33.5 ಓವರ್‌ಗಳಲ್ಲಿ 165 ರನ್ ಸೇರಿಸಿ ಸೋಲು ಕಂಡಿತು. ಈ ಗೆಲುವಿನೊಂದಿಗೆ ಆತಿಥೇಯ ತಂಡ ಎರಡು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಮೊದಲು ಬ್ಯಾಟ್ ಮಾಡುವ ಲಂಕಾ ತಂಡದ ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾದರು. ತಂಡ ಟಾಪ್ ಆರ್ಡರ್ ಬ್ಯಾಟರ್‌ಗಳಿಗೆ ಆಸ್ಟ್ರೇಲಿಯಾ ವೇಗಿಗಳು ಕಾಡಿದರು. ಈ ವೇಳೆ ಲಂಕಾ 5 ವಿಕೆಟ್‌ಗೆ 55 ರನ್ ಕಲೆ ಹಾಕಿ ಸಂಕಷ್ಟದಲ್ಲಿತ್ತು. ಈ ವೇಳೆ ಆರನೇ ವಿಕೆಟ್‌ಗೆ ಚರಿತ್ ಅಸಲಂಕಾ ಹಾಗೂ ದುನಿತ್ ವೆಲ್ಲಲಾಗೆ ತಂಡಕ್ಕೆ ಕೊಂಚ ಆಧಾರವಾದರು. ಈ ಜೋಡಿ ಪ್ರವಾಸಿ ಬೌಲರ್‌ಗಳನ್ನು ಕಾಡಿತು. ಆರನೇ ವಿಕೆಟ್‌ಗೆ ಈ ಜೋಡಿ 69 ಎಸೆತಗಳಲ್ಲಿ 67 ರನ್ ಸೇರಿಸಿತು. ದುನಿತ್ ವೆಲ್ಲಲಾಗೆ 30 ರನ್ ಸಿಡಿಸಿದರು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು.
ಶ್ರೀಲಂಕಾ ತಂಡದ ಮಧ್ಯಮ ಕ್ರಮಾಂಕದ ಆಟಗಾರ ಚರಿತ್ ಅಸಲಂಕಾ ಭರ್ಜರಿ ಪ್ರದರ್ಶನ ನೀಡಿದರು. 27 ವರ್ಷದ ಚರಿತ್ ಅಸಲಂಕಾ ಆಸ್ಟ್ರೇಲಿಯಾ ಬೌಲರ್‌ಗಳನ್ನು ಕಾಡಿದರು. ಇವರು 126 ಎಸೆತಗಳಲ್ಲಿ 127 ರನ್ ಸಿಡಿಸಿದರು. ಇವರ ಮನಮೋಹಕ ಇನಿಂಗ್ಸ್‌ನಲ್ಲಿ 14 ಬೌಂಡರಿ, 5 ಸಿಕ್ಸರ್ ಬಾರಿಸಿದರು. ಇವರು 71 ಪಂದ್ಯಗಳಲ್ಲಿ 3 ಶತಕ ಬಾರಿಸಿದ್ದಾರೆ.

ಆಸ್ಟ್ರೇಲಿಯಾದ ಪರ ಸೀನ್ ಅಬಾಟ್ ಮೂರು ವಿಕೆಟ್ ಪಡೆದರು. ಸ್ಪೆನ್ಸರ್ ಜಾನ್ಸನ್, ಆರನ್ ಹಾರ್ಡಿ, ನಾಥನ್ ಎಲ್ಲಿಸ್ ತಲಾ ಎರಡು ವಿಕೆಟ್ ಪಡೆದರು.
ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಪರ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಆಸೀಸ್ ಪರ ಅಲೆಕ್ಸ್ ಕ್ಯಾರಿ (41), ಆರನ್ ಹಾರ್ಡಿ (32), ಸೀನ್ ಅಬಾಟ್ (20), ಆಡಮ್ ಜಂಪಾ (20), ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಎಡವಿದರು. ಲಂಕಾ ಪರ ಸ್ಪಿನ್ ಬೌಲರ್ ಮಹೇಶ್ ತೀಕ್ಷಣ್ 4 ವಿಕೆಟ್ ಪಡೆದರೆ, ಅಸಿತಾ ಫೆರ್ನಾಂಡೋ ಹಾಗೂ ದುನಿತ್ ವೆಲ್ಲಲಾಗೆ ತಲಾ ಎರಡು ವಿಕೆಟ್ ಕಬಳಿಸಿದರು.