
ಖಾಸಗಿ ಸುದ್ದಿ ವಾಹಿನಿ ಜೀ ನ್ಯೂಸ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತ ತಂಡದ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಹಲವು ರಹಸ್ಯಗಳನ್ನು ಬಾಯ್ಬಿಟ್ಟಿದ್ದಾರೆ. ಚೇತನ್ ಶರ್ಮಾ ಮಾಡಿರುವ ಆರೋಪಗಳಿಂದ ಮುಜುಗರಕ್ಕೀಡಾಗಿರುವ ಬಿಸಿಸಿಐ ಆಂತರಿಕ ತನಿಖೆ ನಡೆಸಲು ನಿರ್ಧರಿಸಿದೆ.
ಬಿಸಿಸಿಐ ಅಧಿಕಾರಿಗಳು ಹೇಳಿರುವ ಪ್ರಕಾರ, ಘಟನೆಯ ಬಳಿಕೆ ಚೇತನ್ ಶರ್ಮಾ ಕೆಲವೇ ದಿನಗಳಲ್ಲಿ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತವಾಗಿದೆ. ಬಿಸಿಸಿಐ ಅವರನ್ನು ವಜಾಗೊಳಿಸಬಹುದು ಅಥವಾ ಚೇತನ್ ಶರ್ಮಾ ಸ್ವತಃ ರಾಜೀನಾಮೆ ನೀಡಬಹುದು ಎನ್ನಲಾಗಿದೆ.
"ಇದು ನಿಜಕ್ಕೂ ಮುಜುಗರ ತರುವಂತಹ ಘಟನೆ. ಬಿಸಿಸಿಗೆ ಮಾತ್ರವಲ್ಲದೆ ಇಡೀ ಭಾರತದ ಕ್ರಿಕೆಟ್ ಮೇಲೆ ಪರಿಣಾಮ ಬೀರುತ್ತದೆ. ಆಸ್ಟ್ರೇಲಿಯಾ ಈಗ ಭಾರತ ಪ್ರವಾಸದಲ್ಲಿದೆ ಈ ಸಂದರ್ಭದಲ್ಲೇ ಈ ರೀತಿಯಾಗಿರುವುದು ಇನ್ನೂ ಹೆಚ್ಚಿನ ಇರಿಸು ಮುರಿಸುಗೆ ಕಾರಣವಾಗುತ್ತದೆ. ಮಂಡಳಿ ಕ್ರಿಕೆಟಿಗರಿಗೆ ಈ ಬಗ್ಗೆ ಸ್ಪಷ್ಟನೆ ನೀಡಬೇಕಾಗುತ್ತದೆ. ಈ ಬಗ್ಗೆ ಆಂತರಿಕ ತನಿಖೆ ನಡೆಯಲಿದೆ. ಆಟಗಾರರು ಇನ್ನುಮುಂದೆ ಚೇತನ್ ಶರ್ಮಾರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರುವುದರಿಂದ ಅವರು ಕೆಲವೇ ದಿನಗಳಲ್ಲಿ ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದಾರೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಇನ್ಸೈಡ್‌ಸ್ಪೋರ್ಟ್ ವರದಿ ಮಾಡಿದೆ.

ಚೇತನ್ ಶರ್ಮಾ ಹೇಳಿದ್ದೇನು?
ಜೀ ಸುದ್ದಿ ವಾಹಿನಿ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಚೇತನ್ ಶರ್ಮಾ ಹಲವು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾರೆ. ಫಿಟ್ ಆಗಿರಲು ಭಾರತ ತಂಡದ ಆಟಗಾರರು ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಭಾರತ ತಂಡದ ಆಟಗಾರರು ಫಿಟ್ ಆಗಿರಲು ತೆಗೆದುಕೊಳ್ಳುವ ಪದಾರ್ಥಗಳನ್ನು ಡೋಪ್ ಪರೀಕ್ಷೆಯಲ್ಲಿ ಕಂಡು ಹಿಡಿಯಲು ಆಗಲ್ಲ ಎಂದಿದ್ದಾರೆ. ಚೇತನ್ ಶರ್ಮಾ ಮಾಡಿರುವ ಆರೋಪ ಭಾರತ ತಂಡದ ಆಟಗಾರರಿಗೆ ಮುಜುಗರ ಉಂಟುಮಾಡಿದೆ. ಆಟಗಾರರ ಮೇಲೆ ಅನುಮಾನದಿಂದ ನೋಡುವಂತಾಗಿದೆ.
ಅಲ್ಲದೆ ಬಿಸಿಸಿಐ ಮತ್ತು ಆಟಗಾರರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದು ಈ ಕುಟುಕು ಕಾರ್ಯಾಚರಣೆಯಲ್ಲಿ ತಿಳಿದುಬಂದಿದೆ. ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಡುವೆ ಮನಸ್ತಾಪ ಇತ್ತು ಎಂದು ಚೇತನ್ ಶರ್ಮಾ ಬಹಿರಂಗಪಡಿಸಿದ್ದಾರೆ.
ಈ ಮನಸ್ತಾಪದ ಕಾರಣದಿಂದಲೇ ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ವಜಾಗೊಳಿಸಲಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ. ಭಾರತ ತಂಡದಲ್ಲಿ ಕೂಡ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಎಂದು ಎರಡು ಗುಂಪುಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಆಟಗಾರರ ನಡುವೆ ಯಾವುದೇ ಬಿರುಕು ಇಲ್ಲ ಎಂದು ಚೇತನ್ ಶರ್ಮಾ ಹೇಳಿದ್ದಾರೆ.

ಚೇತನ್ ಶರ್ಮಾ ಭವಿಷ್ಯವನ್ನು ನಿರ್ಧರಿಸಲಿರುವ ಜಯ್ ಶಾ
ಇಷ್ಟೆಲ್ಲಾ ವಿವಾದಗಳ ನಂತರ ಚೇತನ್ ಶರ್ಮಾ ಭವಿಷ್ಯದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ನಿರ್ಧಾರ ಮಾಡಲಿದ್ದಾರೆ. ಜಯ್ ಶಾ ಈ ಮೊದಲು ಚೇತನ್ ಶರ್ಮಾ ಪರವಾಗಿದ್ದರು. ಇದೇ ಕಾರಣಕ್ಕೆ ಅವರು ಎರಡನೇ ಬಾರಿಗೆ ಆಯ್ಕೆಗಾರರ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.
ಆದರೆ ಈ ಘಟನೆಯ ನಂತರ ಅವರು ಆ ಸ್ಥಾನದಲ್ಲಿ ಮುಂದುವರೆಯುವುದು ಅಸಾಧ್ಯ ಎನ್ನಲಾಗಿದೆ. ಸ್ವತಃ ಚೇತನ್ ಶರ್ಮಾ ಅವರೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರುವ ಸಾಧ್ಯತೆ ಇದೆ ಎನ್ನಲಾಗಿದೆ.