ಸದ್ಯ ಭಾರತ ಟೆಸ್ಟ್ ತಂಡದಿಂದ ಹೊರಗುಳಿದಿರುವ ಟೀಮ್ ಇಂಡಿಯಾದ ಸ್ಟಾರ್ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ ದೇಶೀಯ ಕ್ರಿಕೆಟ್‌ನಲ್ಲಿ ಜೋರಾಗಿ ಅಬ್ಬರಿಸುತ್ತಿದ್ದಾರೆ. ಸತತ ರನ್‌ಗಳನ್ನು ಬಾರಿಸಿ ಆಯ್ಕೆದಾರರಿಗೆ ತಮ್ಮನ್ನು ಕಡೆಗಣಿಸದಂತೆ ಎಚ್ಚರಿಕೆಯ ಸಂದೇಶವನ್ನು ರವಾನಿಸತ್ತಿದ್ದಾರೆ.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಐದು ಟೆಸ್ಟ್ ಪಂದ್ಯಗಳ ಮೂರನೇ ಪಂದ್ಯ ನಡೆಯಲಿದೆ. ಈ ಅಂಗಳ ಚೇತೇಶ್ವರ್ ಪೂಜಾರ ಅವರ ತವರು ಮೈದಾನವಾಗಿರಲಿದೆ. ಈ ಪಂದ್ಯದಲ್ಲಿ ಅಬ್ಬರ ಪ್ರದರ್ಶನ ನೀಡುವುದಕ್ಕೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ರಾಷ್ಟ್ರೀಯ ತಂಡದ ಪರ ರನ್ ಕಲೆ ಹಾಕುವಲ್ಲಿ ವಿಫಲರಾದ ಕಾರಣ ಚೇತೇಶ್ವರ್ ಪೂಜಾರ ಅವರನ್ನು ಟೆಸ್ಟ್ ತಂಡದಿಂದ ಕೈ ಬಿಡಲಾಯಿತು. ಈಗ ದೇಶೀಯ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಚೇತೇಶ್ವರ್ ಪೂಜಾರ, ಆಯ್ಕೆದಾರರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ.
ಚೇತೇಶ್ವರ್ ಆಡಿದ ಮೊದಲ ಪಂದ್ಯದಲ್ಲಿ ಡಬಲ್ ಸೆಂಚುರಿ ಬಾರಿಸಿ ತಮ್ಮನ್ನು ಕಡೆಗಣಿಸಿದಿರಿ ಎಂದು ಎಚ್ಚರಿಕೆ ನೀಡಿದ್ದರು. ಅಲ್ಲದೆ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಇವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇತ್ತು. ಆದರೆ ಆಯ್ಕೆದಾರರ ಅವರನ್ನು ಆಗಲೂ ಪರಿಗಣಿಸಲಿಲ್ಲ. ಇನ್ನು ಕೊನೆಯ ಮೂರು ಟೆಸ್ಟ್ ಪಂದ್ಯದಲ್ಲಾದರೂ ಸ್ಥಾನ ಸಿಗುತ್ತದೆ ಎಂಬ ಕುತೂಹಲ ಮನೆ ಮಾಡಿದೆ.
ಶುಕ್ರವಾರ ರಣಜಿ ಎ ಗುಂಪಿನ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಸೌರಾಷ್ಟ್ರ ಪರ ಪೂಜಾರ ಮತ್ತೊಂದು ಶತಕ ಬಾರಿಸಿದರು. ಚೇತೇಶ್ವರ್ ಪೂಜಾರ ರಾಜಸ್ಥಾನ ವಿರುದ್ಧ 230 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 110 ರನ್ ಸಿಡಿಸಿ ಅಬ್ಬರಿಸಿದ್ದಾರೆ.

ಸ್ಟಾರ್ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆಗೆ ಟೀಂ ಇಂಡಿಯಾಗೆ ಮರಳುವ ಹಾದಿ ಸಂಪೂರ್ಣ ಮುಚ್ಚಿದಂತಿದೆ. ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಛತ್ತೀಸ್‌ಗಢ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಕೇವಲ 1 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಣಜಿ ಟ್ರೋಫಿಯ ಈ ಋತುವಿನಲ್ಲಿ ಆಡಿದ 6 ಇನ್ನಿಂಗ್ಸ್‌ಗಳಲ್ಲಿ ರಹಾನೆ ಬ್ಯಾಟ್‌ನಿಂದ ಕೇವಲ 34 ರನ್ ಗಳಿಸಿದ್ದಾರೆ. ಈ ಪ್ರದರ್ಶನವನ್ನು ನೋಡಿದರೆ ಟೀಂ ಇಂಡಿಯಾಗೆ ಮರಳುವ ಕನಸು ಬಿಡಿ, ಮುಂಬೈ ತಂಡದಲ್ಲೇ ಮುಂದವರೆಯುವುದು ಡೌಟ್ ಎಂಬಂತಾಗಿದೆ.
ಈ ಬಾರಿಯ ರಣಜಿ ಟ್ರೋಫಿಯಲ್ಲಿ ಅಜಿಂಕ್ಯ ರಹಾನೆಗೆ ಅದೃಷ್ಟವೇ ಸಿಗುತ್ತಿಲ್ಲ. ಫಾರ್ಮ್ ಹೊರತಾಗಿ, ರಹಾನೆ ಫಿಟ್ನೆಸ್ ಸಮಸ್ಯೆಯಿಂದಲೂ ಹೋರಾಡುತ್ತಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರಹಾನೆ ಎರಡು ಪಂದ್ಯಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಇದಲ್ಲದೇ 6 ಇನ್ನಿಂಗ್ಸ್‌ಗಳಲ್ಲಿ ರಹಾನೆ ಅವರ ಗರಿಷ್ಠ ಸ್ಕೋರ್ ಕೇವಲ 16 ರನ್. ಇಂತಹ ಕಳಪೆ ಪ್ರದರ್ಶನದ ನಂತರ ರಹಾನೆಗೆ ಟೀಂ ಇಂಡಿಯಾಗೆ ಮರಳಲು ಯಾವುದೇ ಮಾರ್ಗವಿಲ್ಲ.
ಟೀಂ ಇಂಡಿಯಾ ಪರ 100 ಟೆಸ್ಟ್ ಪಂದ್ಯಗಳನ್ನು ಆಡುವ ಆಸೆಯಿದೆ ಎಂದು ಅಜಿಂಕ್ಯ ರಹಾನೆ ಇತ್ತೀಚೆಗೆ ಭಾವನಾತ್ಮಕವಾಗಿ ಹೇಳಿದ್ದರು. ಆದರೆ ಈಗ ಅಜಿಂಕ್ಯ ರಹಾನೆ ಅವರ ಈ ಕನಸು ಕನಸಾಗಿಯೇ ಉಳಿಯಬಹುದು ಎಂದು ಕಾಣುತ್ತಿದೆ. ರಹಾನೆ ಭಾರತ ಪರ ಇದುವರೆಗೆ 85 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.