ಜುಲೈ 5 ಶುಕ್ರವಾರ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಮ್ ಇಂಡಿಯಾ 2024ರ ಟಿ20 ವಿಶ್ವಕಪ್ ಪ್ರಶಸ್ತಿ ಗೆದ್ದ ನಂತರ ತವರಿಗೆ ಗುರುವಾರ ತಲುಪಿದ್ದಾರೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ ಮುಂಬೈನ ಮರೈನ್ ಡ್ರೈವ್‌ನಿಂದ ವಾಂಖೆಡೆ ಸ್ಟೇಡಿಯಂಗೆ ಟೀಮ್ ಇಂಡಿಯಾ ವಿಕ್ಟರಿ ಪರೇಡ್‌ಯನ್ನು ಅದ್ದೂರಿಯಾಗಿ ಮಾಡಲಾಗಿತ್ತು.
ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮನೆಗೆ ತಲುಪಿದಾಗ, ಅಲ್ಲಿ ಬಾಲ್ಯದಿಂದಲೂ ಆಟವಾಡುತ್ತಾ ಬೆಳೆದ ಸ್ನೇಹಿತರು ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಈ ವೇಳೆ ಭಾರತ ತಂಡದ ಯುವ ಕ್ರಿಕೆಟಿಗ ತಿಲಕ್ ವರ್ಮಾ ಕೂಡ ರೋಹಿತ್ ಅವರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿದೆ.

ರೋಹಿತ್ ಶರ್ಮಾ ಅವರ ಮನೆಗೆ ಬಂದಾಗ ಅವರ ಬಾಲ್ಯದ ಸ್ನೇಹಿತರು ಮೊದಲು ಸೆಲ್ಯೂಟ್ ಮಾಡಿದ್ದಾರೆ. ನಂತರ ರೋಹಿತ್ ಶರ್ಮಾ ಬಳಿ ಸ್ನೇಹಿತರು ಟಿ20 ವಿಶ್ವಕಪ್ ಗೆದ್ದ ನಂತರ ಟ್ರೋಫಿಯನ್ನು ಎತ್ತಿದ ರೀತಿಯಲ್ಲಿಯೇ ಹಿಟ್‌ಮ್ಯಾನ್‌ನನ್ನು ಮೇಲೇತ್ತಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ರೋಹಿತ್‌ಗೆ ಹೂವಿನ ಹಾರವನ್ನೂ ಹಾಕಿ ಗೌರವಿಸಿದ್ದಾರೆ.
ರೋಹಿತ್ ಶರ್ಮಾ ಅವರ ಸ್ನೇಹಿತರ ಜೊತೆಗೆ ತಿಲಕ್ ವರ್ಮಾ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಮುಂಬೈ ಇಂಡಿಯನ್ಸ್ ತಂಡದಲ್ಲಿ ತಿಲಕ್ ವರ್ಮಾ ಕೂಡ ರೋಹಿತ್ ಶರ್ಮಾ ಜೊತೆ ಆಡುತ್ತಿದ್ದಾರೆ. ಇದರೊಂದಿಗೆ ಟೀಮ್ ಇಂಡಿಯಾ ಪರ ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿಯೂ ತಿಲಕ್ ಪದಾರ್ಪಣೆ ಮಾಡಿದ್ದಾರೆ.
ತಿಲಕ್ ಐಪಿಎಲ್ ವೇಳೆ ರೋಹಿತ್ ಶರ್ಮಾ ಅವರ ಮನೆ ಇರುತ್ತಿದ್ದರು. ಹೀಗಾಗಿ ಟಿ20 ವಿಶ್ವಕಪ್ ಗೆದ್ದ ರೋಹಿತ್ ಶರ್ಮಾ ಅವರನ್ನು ಸ್ವಾಗತಿಸಲು ಗೆಳೆಯರ ಹಿಟ್‌ಮ್ಯಾನ್ ಫೋಟೋವಿರುವ ಟಿ-ಶರ್ಟ್ ಧರಿಸಿ ವಿಶೇಷವಾಗಿ ಸ್ವಾಗತಿಸಿದ್ದಾರೆ.
ಇದಕ್ಕೂ ಮುನ್ನ ವಾಂಖೆಡೆಯಲ್ಲಿ ತನ್ನ ಮಗನನ್ನು ನೋಡಲು ಬಂದಿದ್ದ ರೋಹಿತ್ ಶರ್ಮಾ ಅವರ ತಾಯಿಯ ವಿಡಿಯೋ ಸಖತ್ ವೈರಲ್ ಆಗಿದೆ. ರೋಹಿತ್ ಅವರ ತಾಯಿ ಪೂರ್ಣಿಮಾ ಶರ್ಮಾ ಹಿಟ್‌ಮ್ಯಾನ್ ಅವರನ್ನು ಭೇಟಿಯಾದ ತಕ್ಷಣ ಚಿಕ್ಕ ಮಗುವಿನಂತೆ ಮುದ್ದಾಡಿದ್ದಾರೆ. ರೋಹಿತ್ ಶರ್ಮಾ ಮೇಲೆ ತಾಯಿ ಪ್ರೀತಿಯ ಮಳೆಗರೆದಿರುವ ಬೆಲೆ ಕಟ್ಟಲಾರದ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.